ಬೆಂಗಳೂರು: ಪರವಾನಗಿ ಹಾಗೂ ಮೂಲಸೌಕರ್ಯವಿಲ್ಲದೆ ಸಾಕುಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಸರ್ಕಾರದ ವಿವಿಧ ಇಲಾಖೆಗಳ ಜಂಟಿ ತಂಡಗಳು 16 ಪ್ರಭೇದದ 1,344 ಪ್ರಾಣಿ ಪಕ್ಷಿಗಳನ್ನು ರಕ್ಷಣೆ (Animal Rescue) ಮಾಡಿದ್ದಾರೆ.
ಪ್ರಾಣಿಗಳ ಮಳಿಗೆ ಹಾಗೂ ನಾಯಿಗಳ ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ನಗರದ ಮಳಿಗೆಗಳ ಬಗ್ಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ್ ಒಂದು ವಿವರವಾದ ದೂರು ಸಲ್ಲಿಸಿತ್ತು.
ಇದರ ಆಧಾರದಲ್ಲಿ ಪಶುಪಾಲನ ಮತ್ತು ಪಶುಸೇವಾ ಇಲಾಖೆಯ ಆಯುಕ್ತೆ ಎಸ್. ಅಶ್ವಥಿ, ಬೆಂಗಳೂರು ನಗರ ಡಿಸಿಪಿ ಬದರೀನಾಥ್, ಬಿಬಿಎಂಪಿ ವಿವಿಧ ವಿಭಾಗಗಳ ಅಧಿಕಾರಿಗಳನ್ನೊಳಗೊಂಡ ಏಳು ತಂಡಗಳಣ್ನು ರಚನೆ ಮಾಡಿ ದಾಳಿ ಮಾಡಲಾಯಿತು.
ಸ್ವಚ್ಚವಿಲ್ಲದ ಪಂಜರಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಇಟ್ಟಿರುವುದು, ತಾಯಿ ನಾಯಿಯಿಂದ ಬೇರ್ಪಡಿಸದ ನಾಯಿ ಮರಿಗಳನ್ನು ಮಾರಾಟಕ್ಕೆ ಪ್ರದರ್ಶಿಸುವುದು, ಆಹಾರ ಅಥವಾ ನೀರಿನ ಸೌಕರ್ಯ ವಿಲ್ಲದಿರುವುದು, ಗಾಯಗೊಂಡ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡದೆ ಇರುವುದು, ಅನೇಕ ಮಳಿಗೆಗಳಲ್ಲಿ ಈ ತಂಡಗಳ ಪರಿಶೀಲನೆಯಲ್ಲಿ ಕಂಡು ಬಂದಿರುತ್ತವೆ. ಅದರ ಹೊರತಾಗಿ ಪೆಟ್ ಶಾಪ್‌ಗಳು ಯಾವುದೇ ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದವು. ಚಿಕಿತ್ಸೆಯ ಅಗತ್ಯವಿರುವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಪ್ರಾಣಿಗಳನ್ನು ರಕ್ಷಿಸಿ, ಅಧಿಕೃತವಾಗಿ ಘೋಷಿಸಿರುವ ಪ್ರಾಣಿ ರಕ್ಷಣಾ ಗೃಹಗಳಲ್ಲಿ ಇರಿಸಲಾಗಿದೆ.
ಇವುಗಳಲ್ಲಿ 94 ಆಫ್ರಿಕನ್ ಪ್ಯಾರಟ್ಸ್, ೧ ಟರ್ಕಿ, 3 ಆಫ್ರಿಕನ್ ಕ್ರೌ, 196 ಪಾರಿವಾಳಗಳು, 108 ಮೊಲಗಳು, 34 ನಾಯಿಗಳು, 12 ಬೆಕ್ಕುಗಳು, 19 ಇಲಿಗಳು ಸೇರಿ 16 ಪ್ರಭೇದದ 1,344 ಪ್ರಾಣಿ ಪಕ್ಷಿಗಳು ಸೇರಿವೆ.
ಇದನ್ನೂ ಓದಿ | Richest Pet | ಅಮೆರಿಕದ ಸಿಂಗರ್ ಮನೆಯ ಬೆಕ್ಕು ಜಗತ್ತಿನ 3ನೇ ಶ್ರೀಮಂತ ಸಾಕುಪ್ರಾಣಿ! ಮೊದಲೆರಡು ಸ್ಥಾನದಲ್ಲಿ ಯಾವ ಪ್ರಾಣಿ?