ಬೆಂಗಳೂರು: ನಗರದ ಪ್ರತಿಷ್ಠಿತ ಕಂಪನಿಯೊಂದರ ಮಾಲೀಕರನ್ನು ಹನಿ ಟ್ರ್ಯಾಪ್ ಮಾಡಿ ₹ 14 ಲಕ್ಷ ಸುಲಿಗೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.
ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಸತ್ಯನಾರಾಯಣ್ (78) ಎಂಬವರು ದೂರು ನೀಡಿದ್ದಾರೆ. ಕವನ ಹಾಗು ನಿಧಿ ಎಂಬ ಇಬ್ಬರು ಯುವತಿಯರು ಹಾಗೂ ಇನ್ನಿಬ್ಬರು ಯುವಕರ ಮೇಲೆ ದೂರು ದಾಖಲಾಗಿದೆ.
ಕವನ ನಾಲ್ಕು ವರ್ಷದ ಹಿಂದೆ ಸತ್ಯನಾರಾಯಣ ಅವರಿಗೆ ಪರಿಚಯವಾಗಿದ್ದಳು. ನಂತರ ಕೆಲಸ ಕೊಡಿಸಿ ಎಂದು ನಿಧಿ ಎಂಬಾಕೆಯನ್ನು ಪರಿಚಯಿಸಿದ್ದಳು. ಒಂದು ವಾರ ಕಾಲ ಸತ್ಯನಾರಾಯಣ್ ಜತೆ ನಿಧಿ ವಾಟ್ಸಾಪ್ ಚಾಟ್ ಹಾಗೂ ವಿಡಿಯೋ ಕಾಲ್ ಮಾಡಿದ್ದಳು. ನಂತರ ಹೆಚ್‌ಪಿ ಪೆಟ್ರೋಲ್ ಬಂಕ್ ಬಳಿ ಬರುವಂತೆ ಮೆಸೇಜ್ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಬಳಿ ಕಾರಿನಲ್ಲಿ ಹೋಗಿದ್ದ ಸತ್ಯನಾರಾಯಣ ಅವರನ್ನು ಇಬ್ಬರು ಅಪರಿಚಿತರು ತಡೆಗಟ್ಟಿ, ನಾವು ಕ್ರೈಂ ಡಿಪಾರ್ಟ್ಮೆಂಟ್ ಪೊಲೀಸರು, ನಿಮ್ಮ ಮೇಲೆ ದೂರು ಇದೆ ಎಂದು ಬೆದರಿಸಿದ್ದರು. ಮೊಬೈಲ್ ಹಾಗೂ ಕಾರಿನ ಕೀ ಕಿತ್ತುಕೊಂಡಿದ್ದರು. ನಿಧಿ ಎಂಬಾಕೆಗೆ ಮಾಡಿದ ಮೆಸೇಜ್ ತೋರಿಸಿ ನಿಮ್ಮ ಮೇಲೆ ದೂರು ಬಂದಿದೆ, ಎಫ್‌ಐಆರ್ ಆಗಿದೆ ಎಂದಿದ್ದರು. ನಂತರ ಹಣ ಕೇಳಿದ್ದರು.
ಬೆದರಿದ ಸತ್ಯನಾರಾಯಣ್ ಮೊದಲಿಗೆ 3.40 ಲಕ್ಷ ರೂ. ಹಣ ಕೊಟ್ಟಿದ್ದರು. ನಂತರ ಹೆಚ್‌ಎಸ್‌ಆರ್ ಲೇಔಟ್‌ನ ಅವರ ಮನೆಗೆ ಬಂದು ಮತ್ತೆ 6 ಲಕ್ಷಕ್ಕೆ ಬೇಡಿಕೆ ಮಂಡಿಸಿದ್ದರು. ಎರಡು ದಿನಗಳ ಬಳಿಕ ಮತ್ತೆ ಐದು ಲಕ್ಷ ಡಿಮ್ಯಾಂಡ್ ಮಾಡಿ, ವಿಡಿಯೋ ಮನೆಯವರಿಗೆ ಕಳಿಸುತ್ತೇನೆಂದು ಬೆದರಿಕೆ ಹಾಕಿದ್ದರು. ಸತ್ಯನಾರಾಯಣ ಆತಂಕದಿಂದ ಅವರು ಕೇಳಿದಂತೆಲ್ಲಾ ಹಣವನ್ನು ಕೊಟ್ಟಿದ್ದಾರೆ. ಹೀಗೆ 14 ಲಕ್ಷ ರೂ.ನಷ್ಟು ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ನಂತರ ಇವರು ನಕಲಿ ಪೊಲೀಸರು ಎಂಬ ಅನುಮಾನ ಬಂದ ಹಿನ್ನೆಲೆಯಲ್ಲಿ ಸತ್ಯನಾರಾಯಣ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಹನಿ ಟ್ರ್ಯಾಪ್ ಮೂಲಕ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ನಾಯಕ ನಟ ಯುವರಾಜ್ ಅರೆಸ್ಟ್