Site icon Vistara News

ವಿಶ್ವದ ಬೃಹತ್‌ ವಿಮಾನದಲ್ಲಿ ಕನ್ನಡದಲ್ಲೇ ಸ್ವಾಗತ; ಪೈಲಟ್‌ಗೆ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅಭಿನಂದನೆ

ಏರ್‌ಬಸ್ ಎ-380

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ ಎಮಿರೇಟ್ಸ್ ಏರ್‌ಬಸ್ ಎ380ರಲ್ಲಿ ಪ್ರಯಾಣಿಕರಿಗೆ ಕನ್ನಡದಲ್ಲಿ ಸ್ವಾಗತ ಕೋರಿ ಕನ್ನಡ ಅಭಿಮಾನ ಮೆರೆದಿದ್ದ ಪೈಲಟ್ ಸಂದೀಪ್‌ ಪ್ರಭು ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಪರವಾಗಿ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಭಿನಂದಿಸಿದ್ದಾರೆ.

ಅ.14ರಂದು ದುಬೈದಿಂದ ಬೆಂಗಳೂರಿಗೆ ಬೃಹತ್ ಎಮಿರೇಟ್ಸ್‌ ವಿಮಾನ ಆಗಮಿಸಿತ್ತು. ಉಡುಪಿ ಮೂಲದ ಪೈಲಟ್‌ ಆಗಿರುವ ಸಂದೀಪ್‌ ಪ್ರಭು ಅವರು ವಿಮಾನ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಕನ್ನಡದಲ್ಲಿ ಎಲ್ಲ ಪ್ರಯಾಣಿಕರಿಗೆ ಸ್ವಾಗತ ಕೋರಿದ್ದರು. ಹೀಗಾಗಿ ಪೈಲಟ್‌ಗೆ ಡಾ. ಮಹೇಶ ಜೋಶಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ | Fit At Any Age | ನಿವೃತ್ತ ಯೋಧ ಅಯ್ಯರ್‌ ಪುಸ್ತಕ ಲೋಕಾರ್ಪಣೆ,‌ ಫಿಟ್ನೆಸ್‌ ಸರಳ ಮಂತ್ರಗಳಿಗೆ ಬುಕ್ ಕನ್ನಡಿ

ಬೆಂಗಳೂರಿಗೆ ಆಗಮಿಸುವ ಎಲ್ಲ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆಗಳನ್ನು ನೀಡಬೇಕು ಎಂದು ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್‌ ಆಗ್ರಹಪಡಿಸಿತ್ತು. ಈ ಕುರಿತು ವಿಮಾನಯಾನ ಸಚಿವಾಲಯದೊಂದಿಗೆ ಪತ್ರ ವ್ಯವಹಾರವನ್ನು ನಡೆಸುತ್ತಿದೆ. ಅದಕ್ಕೆ ಸಚಿವಾಲಯದ ಅಧಿಕಾರಿಗಳು ವಿಮಾನದಲ್ಲಿ ಏನೆಲ್ಲ ಪ್ರಕಟಣೆಗಳನ್ನು ಕನ್ನಡದಲ್ಲಿ ಹೊರಡಿಸಬೇಕು ಎನ್ನುವುದನ್ನು ಧ್ವನಿಮುದ್ರಣ ಮಾಡಿಕೊಡುವಂತೆ ಕನ್ನಡ ಸಾಹಿತ್ಯ ಪರಿಷತ್‌ ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಧ್ವನಿ ಮುದ್ರಿಸಲು ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಕಳೆದ 15 ವರ್ಷಗಳಿಂದ ಪೈಲಟ್‌ ಆಗಿರುವ ಸಂದೀಪ್‌ ಪ್ರಭು ಅವರು ಕನ್ನಡ ಸಾಹಿತ್ಯ ಪರಿಷತ್‌ನ ಆಶಯಕ್ಕೆ ಇಂಬು ಕೊಡುವಂತೆ ವಿಮಾನದಲ್ಲಿ ಕನ್ನಡ ಬಳಸುವಲ್ಲಿ ಮೊದಲಿಗರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಎಲ್ಲ ವಿಮಾನಗಳಲ್ಲಿ ಕನ್ನಡದ ಕಂಪು ಪಸರಿಸಲು ಪೈಲಟ್ ಸಂದೀಪ ಪ್ರಭು ಅವರು ನಾಂದಿ ಹಾಡಿದ್ದಾರೆ. ಇದೊಂದು ಪರಂಪರೆಯಾಗಿ ಬೆಳೆಯಲಿ ಎಂದು ಆಶಿಸಿರುವ ಡಾ.ಮಹೇಶ್ ಜೋಶಿ ಅವರು, ಈ ಹಿನ್ನೆಲೆಯಲ್ಲಿ ಸದ್ಯವೇ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಸಂಪರ್ಕಿಸಿ ಅವರನ್ನು ಗೌರವಿಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Teacher Transfer | ಶಿಕ್ಷಕರ ವರ್ಗಾವಣೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

Exit mobile version