Site icon Vistara News

ಬಿಎಂಟಿಸಿ ಬಸ್‌ ಸಂಖ್ಯೆ ಹೆಚ್ಚಿಸಿ, ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ ಒದಗಿಸಿ: ಸಿಎಂಗೆ ಮನವಿ

BMTC bus

ಬೆಂಗಳೂರು: ಬಿಎಂಟಿಸಿ ಬಸ್‌ಗಳ (BMTC Bus) ಸಂಖ್ಯೆಯನ್ನು (ಫ್ಲೀಟ್ ಗಾತ್ರ) ಹೆಚ್ಚಿಸಲು ಮತ್ತು ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಿರ್ದಿಷ್ಟವಾಗಿ ಸಾರಿಗೆ ಸೌಕರ್ಯದ ಅಭಿವೃದ್ಧಿಗೆಂದೇ ಪ್ರತ್ಯೇಕ ಸಾರ್ವಜನಿಕ ಸಾರಿಗೆ ನಿಧಿಯನ್ನು ಕಾಯ್ದಿರಿಸಲು ರಾಜ್ಯ ಸರ್ಕಾರವನ್ನು ಸ್ಲಂ ನಿವಾಸಿಗಳ ಒಕ್ಕೂಟ (ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌) ಮತ್ತು ಗ್ರೀನ್‌ಪೀಸ್ ಇಂಡಿಯಾ ಆಗ್ರಹಿಸಿವೆ.

ರಾಜ್ಯ ಸರ್ಕಾರವು 2024-25ನೇ ಸಾಲಿನ ಕರ್ನಾಟಕ ಬಜೆಟ್‌ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುವ ಮತ್ತು ನಗರದ ರಸ್ತೆಗಳನ್ನು ಸಂಚಾರ ದಟ್ಟಣೆಯಿಂದು ಮುಕ್ತಗೊಳಿಸಲು ಸರ್ಕಾರವು ಕಾರ್ಯ ತತ್ಪರವಾಗಬೇಕು ಎಂಬ ಆಶಯದೊಂದಿಗೆ ಈ ಎರಡೂ ಸಂಸ್ಥೆಗಳು ಸರ್ಕಾರಕ್ಕೆ ಪತ್ರ ಬರೆದಿವೆ. ಇದರಲ್ಲಿ ಸಾರ್ವಜನಿಕ ಸಾರಿಗೆ ಕುರಿತ ವಿವಿಧ ಅಂಶಗಳ ಕುರಿತಾಗಿ ಸರ್ಕಾರದ ಗಮನ ಸೆಳೆದಿವೆ.

ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸಿದ ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾದ ಪ್ರತಿನಿಧಿಗಳು, ಪ್ರಸ್ತುತ ನಗರದಲ್ಲಿ ಸಾರಿಗೆ ಸೌಲಭ್ಯ ಒದಗಿಸುತ್ತಿರುವ 6200 ಬಿಎಂಟಿಸಿ ಬಸ್ಸುಗಳು ದಿನವೊಂದಕ್ಕೆ ಮಹಾನಗರದಲ್ಲಿ ಪ್ರಯಾಣಿಸುತ್ತಿರುವ 27 ರಿಂದ 30 ಲಕ್ಷ ಪ್ರಯಾಣಿಕರ ಸಾರಿಗೆ ಬೇಡಿಕೆಗಳನ್ನು ಪೂರೈಸಲು ಹೇಗೆ ಅಸಮರ್ಥವಾಗಿವೆ ಎಂಬುದನ್ನು ಸಿಎಂಗೆ ವಿವರಿಸಿವೆ.

ಇದನ್ನೂ ಓದಿ | Karnataka Budget Session 2024 : ರಾಜ್ಯಪಾಲರ ಮೂಲಕವೇ ಕೇಂದ್ರಕ್ಕೆ ಕೌಂಟರ್‌ ಕೊಟ್ಟ ಕಾಂಗ್ರೆಸ್‌!

ʻʻಶಕ್ತಿ ಯೋಜನೆ ಸರ್ಕಾರದ ಅತ್ಯುತ್ತಮ ಯೋಜನೆಗಳಲ್ಲಿ ಒಂದು. ಈ ಯೋಜನೆಯನ್ನು ತೃತೀಯ ಲಿಂಗಿಗಳಿಗೂ ವಿಸ್ತರಿಸುವ ಅಗತ್ಯವಿದೆ. ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಮೂಲಕ ಬೆಂಗಳೂರು ನಗರದ ಟ್ರಾಫಿಕ್‌ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಈ ಮೂಲಕ ಎಲ್ಲರ ಅಗತ್ಯಗಳನ್ನು ಪೂರೈಸಬಲ್ಲ ಸುಸ್ಥಿರ ನಗರದ ನಿರ್ಮಾಣ ಸಾಧ್ಯʼʼ ಎನ್ನುತ್ತಾರೆ ಗ್ರೀನ್‌ಪೀಸ್‌ ಇಂಡಿಯಾದ ಪ್ರಚಾರಕ ಎಂ. ಎಸ್‌. ಶರತ್‌.

ಹೀಗಾಗಿ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬಸ್‌ಗಳ ಸಂಖ್ಯೆಗೆ ಹೊಸದಾಗಿ 4000 ಹೊಸ ಬಸ್‌ಗಳನ್ನು ಸೇರಿಸುವ ಮೂಲಕ ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು 10,000ಕ್ಕೆ ಹೆಚ್ಚಿಸುವಂತೆ ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾ ಪ್ರತಿನಿಧಿಗಳು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಇದರೊಂದಿಗೆ ಈ ಸಂಘಟನೆಗಳು ಮುಂಬರುವ 2024-25 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬಸ್ ನಿಲ್ದಾಣಗಳು, ಬಸ್ ಡಿಪೋಗಳು ಮತ್ತು ಬಸ್‌ ಆದ್ಯತಾ ಪಥಗಳು(ಬಸ್ ಲೇನ್‌) ಸೇರಿದಂತೆ ನಗರದಲ್ಲಿನ ಸಾರ್ವಜನಿಕ ಸಾರಿಗೆ ಮೂಲಸೌಕರ್ಯಗಳನ್ನು ಸುಧಾರಿಸಲು ಸಾರ್ವಜನಿಕ ಸಾರಿಗೆ ನಿಧಿಯನ್ನು ಮೀಸಲಿಡುವಂತೆ ಸಿದ್ದರಾಮಯ್ಯನವರನ್ನು ಆಗ್ರಹಿಸಿದವು.

ಸಂಘಟನೆಗಳು ತಮ್ಮ ಬಹು ದಿನದ ಬೇಡಿಕೆಯಾದ ನಗರದಲ್ಲಿ ಪ್ರತ್ಯೇಕ ಬಸ್‌ ಆದ್ಯತಾ ಪಥ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಇನ್ನೊಮ್ಮೆ ನೆನಪಿಸಿ, ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಪ್ರಸ್ತಾಪಿಸಿದ 10 ಬಸ್ ಲೇನ್‌ಗಳನ್ನು ಜಾರಿಗೆ ತರಲು ಮತ್ತು ಕೋವಿಡ್‌ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಹೊರವರ್ತುಲ ರಸ್ತೆಯಲ್ಲಿರುವ ಪ್ರತ್ಯೇಕ ಬಸ್ಸು ಆದ್ಯತಾ ಪಥವನ್ನು ಪುನರಾರಂಭಿಸಲು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.

ಇದನ್ನೂ ಓದಿ | Karnataka Budget Session 2024: ಗೃಹಲಕ್ಷ್ಮಿಗೆ 17500 ಕೋಟಿ ರೂ. ನಿಗದಿ; ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮ: ಲಕ್ಷ್ಮಿ ಹೆಬ್ಬಾಳ್ಕರ್

ಇದೇ ಸಂದರ್ಭದಲ್ಲಿ ಮಾತನಾಡಿದ ಸ್ಲಂ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಜಾನ್ ಸ್ಯಾಮ್ಯುಯೆಲ್ ಅವರು, ʻನಮ್ಮ ಬಸ್‌ ನಮ್ಮ ಹಕ್ಕುʼ. ಸರ್ಕಾರವು ಬಸ್‌ ಪ್ರಯಾಣಿಕರ ದೈನಂದಿನ ಪ್ರಮುಖ ಸವಾಲುಗಳಾದ ಬಸ್‌ ಅಲಭ್ಯತೆ, ನಿಗದಿಪಡಿಸಿದ ಸಂಚಾರದಲ್ಲಿ ಕಡಿತ, ಬಸ್‌ಗಳಲ್ಲಿ ಹೆಚ್ಚಿದ ಜನಸಂದಣಿ, ಬಸ್‌ ನಿಯಮಿತವಾಗಿ ಬಾರದಿರುವುದು, ಬಸ್‌ನಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳ ಸುರಕ್ಷತೆ, ಗುಣಮಟ್ಟದ ಬಸ್‌ ನಿಲ್ದಾಣಗಳು ಮತ್ತು ಬಸ್ ಶೆಲ್ಟರ್‌ಗಳ ಕೊರತೆ ಮುಂತಾದ ಸಮಸ್ಯೆಗಳ ಕುರಿತಾಗಿ ಗಮನಹರಿಸಿ ಆದ್ಯತೆಯ ಮೇರೆಗೆ ಅವುಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ಅನೂಕೂಲ ಕಲ್ಪಿಸಬೇಕು ಎಂದರು.

ಪತ್ರದಲ್ಲಿನ ಇತರೆ ಪ್ರಮುಖ ಅಂಶಗಳು

Exit mobile version