ಬೆಂಗಳೂರು: ಪುನೀತ್ ರಾಜ್ ಅವರನ್ನು ʻಗೆಳೆಯʼ ಎಂದೇ ಸಂಬೋಧಿಸುವ ಖ್ಯಾತ ತೆಲುಗು ಚಿತ್ರ ನಟ ಜ್ಯೂನಿಯರ್ ಎನ್‌ಟಿಆರ್ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಸಂಜೆ ೪ ಗಂಟೆಗೆ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಕನ್ನಡಿಗರ ಕಣ್ಮಣಿ, ಪ್ರೀತಿಯ ಮನೆ ಮಗನಂತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯದ ಅತ್ಯುನ್ನತ ಗೌರವವನ್ನು ನೀಡುವ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಮಂದಿ ಆಗಮಿಸಿದ್ದಾರೆ.
ರಾಜರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಮೂವರು ಮುಖ್ಯ ಅತಿಥಿಗಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂನಿಯರ್ ಎನ್‌ಟಿಆರ್ ಮತ್ತು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರಾಗಿರುವ ಸುಧಾ ಮೂರ್ತಿ. ಈ ಪೈಕಿ ಸೂಪರ್‌ಸ್ಟಾರ್ ರಜನೀಕಾಂತ್ ಅವರು ಈಗಾಗಲೇ ಬೆಂಗಳೂರು ತಲುಪಿದ್ದರೆ, ಜ್ಯೂನಿಯರ್ ಎನ್‌ಟಿಆರ್ ಅವರು ಮಧ್ಯಾಹ್ನ ಮೂರು ಗಂಟೆಗೆ ಆಗಮಿಸಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ಆವರನ್ನು ರಾಜ್ಯದ ಆರೋಗ್ಯ ಸಚಿವ ಕೆ. ಸುಧಾಕರ್ ಮತ್ತು ತೋಟಗಾರಿಕಾ ಸಚಿವ ಮುನಿರತ್ನ ಅವರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು. ಜ್ಯೂನಿಯರ್ ಎನ್‌ಟಿಆರ್ ಅವರು ಹಿಂದಿನ ಒಂದು ಕಾರ್ಯಕ್ರಮದಲ್ಲಿ ಪುನೀತ್ ಅವರನ್ನು ಗೆಳೆಯ ಗೆಳೆಯಾ ಎಂದು ಹಾಡಿ ಹೊಗಳಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಏನು ಮಾತನಾಡುತ್ತಾರೆ ಎಂಬ ಕುತೂಹಲ ಎಲ್ಲ ಕಡೆ ಮನೆ ಮಾಡಿದೆ.
ಟ್ರಾಫಿಕ್ ನಿರ್ಬಂಧ
ಭವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದ ರಸ್ತೆಯನ್ನು ಮಧ್ಯಾಹ್ನ ಪೂರ್ಣ ಬಂದ್ ಮಾಡಲಾಗಿದೆ. ಬಾಳೆಕುಂದ್ರಿ ಸರ್ಕಲ್ ಹಾಗೂ ಮೀಸೆ ತಿಮ್ಮಯ್ಯ ಸರ್ಕಲ್‌ನಿಂದ ಮತ್ತು ಕೆ.ಆರ್ ವೃತ್ತದಿಂದ ವಿಧಾನಸೌಧದ ಕಡೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ ವಾಹನ ಸವಾರರು ಈ ರಸ್ತೆಗಳನ್ನು ಬಳಸದಿರಲು ಮತ್ತು ಪರ್ಯಾಯ ಮಾರ್ಗಗಳನ್ನು ಬಳಸಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿಧಾನಸೌಧದ ಮುಂಭಾಗದ ಡಾ.ಬಿಆರ್ ಅಂಬೇಡ್ಕರ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಬಹುದು. ಈ ಸಂದರ್ಭದಲ್ಲಿ ಅಂಬೇಡ್ಕರ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಆಲಿ ಆಸ್ಕರ್ ರಸ್ತೆ, ಅರಮನೆ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಕ್ಲೀನ್ಸ್ ರಸ್ತೆ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಸಂಜೆ ನಾಲ್ಕು ಗಂಟೆಗೆ ವಿಜಯಪ್ರಕಾಶ್ ಅವರ ನೇತೃತ್ವದಲ್ಲಿ ಪುನೀತ್ ಹಾಡುಗಳ ಗಾಯನ ಆರಂಭವಾಗಲಿದೆ.
ಇದನ್ನು ಓದಿ | Appu Namana | ಬೆಂಗಳೂರಿಗೆ ಸೂಪರ್ ಸ್ಟಾರ್ ರಜನಿಕಾಂತ್, ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ