Site icon Vistara News

Basavaraja Bommai : ಕನ್ನಡ ಹೋರಾಟಗಾರರ ಬಂಧನದಿಂದ ದುಖವಾಗಿದೆ ಎಂದ ಬೊಮ್ಮಾಯಿ

Kuvempu Basavaraja Bommi

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಅಧ್ಯಕ್ಷ ನಾರಾಯಣ ಗೌಡ (Narayana Gowda) ಸೇರಿದಂತೆ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿರುವುದು ದುಃಖವಾಗಿದೆ. ಕನ್ನಡ ಹೋರಾಟಗಾರರನ್ನು ನಾವು ಬೆಂಬಲಿಸಬೇಕು. ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಕನ್ನಡಪರ ಸಂಘಟನೆಗಳು (Kannada Organizations) ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ನವೀಕೃತ ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ (Kuvempu Birthday) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೆವು. ನಾಮಪಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು ಎಂದು ಹೇಳಿದರು.

ನಾವು ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಜಾರಿಗೊಳಿಸಿದ್ದೆವು. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷಗಳಾಗಿವೆ. ಕನ್ನಡ ನಾಡಿನಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಆದರೆ, ಈಗ ಕಾನೂನೂ ಮಾಡದಿದ್ದರೆ ನಮ್ಮ ಮಕ್ಕಳಿಗೆ ಕಷ್ಟವಾಗಲಿದೆ. ಕಾನೂನು ಅನುಷ್ಠಾನ ಮಾಡದಿದ್ದರೆ ಅದು ದುರ್ದೈವ. ಕನ್ನಡ ಅನುಷ್ಠಾನ ಆಗದಿದ್ದರಿಂದ ಕನ್ನಡ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯುವುದಿಲ್ಲ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವುದಿಲ್ಲವೋ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಹೇಳಿದರು.

ಕನ್ನಡದ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಶ್ರಮ ಹಾಕಿದೆ. ನಾನು ಮುಖ್ಯಮಂತ್ರಿ ಇದ್ದಾಗ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿಕೃತಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ, ನಾನು ಸುವರ್ಣ ಸೌಧದ ಮುಂದೆ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್ ಹಾಗೂ ಗಾಂಧಿ ಅವರ ಪ್ರತಿಮೆ ನಿಲ್ಲಿಸುವ ಕೆಲಸ ಮಾಡಿದ್ದೇನೆ ಎಂದರು.

ಕನ್ನಡ ನಿತ್ಯ ನಿರಂತರವಾಗಿರಬೇಕೆಂದರೆ ಕನ್ನಡಿಗರು ಜಾಗೃತರಾಗಿರಬೇಕು. ಜಗತ್ತು ಬದಲಾಗುತ್ತಿದೆ. ಸವಾಲುಗಳನ್ನು ಎದುರಿಸಲು ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕಿದೆ. ಇಲ್ಲಿ ಐಟಿ ಬಿಟಿ ಯಾಕೆ ಅಭಿವೃದ್ಧಿಯಾಗಿದೆ ಎಂದರೆ, ಇಲ್ಲಿನ ಮಕ್ಕಳು ಜ್ಞಾನವಂತರಿದ್ದಾರೆ. ಸಾಧನೆ ಮಾಡಿದ್ದಾರೆ. ಅದೇ ಕಾರಣಕ್ಕೆ ಐಟಿ ಬಿಟಿಯವರು ಇಲ್ಲಿಗೆ ಬಂದಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಷ್ಟ್ರಕವಿ ಕುವೆಂಪು ಅವರ ನವೀಕೃತ ಸಭಾಂಗಣವನ್ನು ಬೊಮ್ಮಾಯಿ ಉದ್ಘಾಟಿಸಿದರು

ಇದನ್ನೂ ಓದಿ : Kannada Name plate: ಧರ್ಮದ್ದಾದರೆ ಕೇಸ್‌ ವಾಪಸ್‌; ಕನ್ನಡದ ಹೋರಾಟವಾದರೆ ಯಾಕಿಲ್ಲ: ಪ್ರವೀಣ್‌ ಶೆಟ್ಟಿ ಗುಡುಗು

ಕುವೆಂಪು ವಿಶ್ವಮಾನವ, ಯುಗಪುರುಷ ಎಂದ ಬೊಮ್ಮಾಯಿ

ಕುವೆಂಪು ಅವರು ಅಪರೂಪದ ವ್ಯಕ್ತಿತ್ವ ಒಂದು ರೀತಿಯಲ್ಲಿ ಅವರು ಯುಗಪುರುಷರು ಅಂತ ಹೇಳಲು ಬಯಸುತ್ತೇನೆ. ಅವರನ್ನು ಆಳವಾಗಿ ನೋಡಿದಾಗ ಅತ್ಯಂತ ಮಾನವೀಯ ಗುಣಗಳಿರುವ ವ್ಯಕ್ತಿ. ವಿಸ್ತಾರವಾಗಿ ನೋಡಿದಾಗ ವಿಶ್ವ ಮಾನವರಾಗಿ ಕಾಣುತ್ತಾರೆ. ತಮ್ಮ ವಿಚಾರಧಾರೆಗಾಗಿ ಜಗತ್ತನ್ನು ಎದುರು ಹಾಕಿಕೊಳ್ಳುವ ಸ್ವಭಾವ ಅವರದಿತ್ತು. ಅವರು ಯಾವತ್ತೂ ಮುಲಾಜಿಗೆ ಬಿದ್ದು ಸಾಹಿತ್ಯ ರಚನೆ ಮಾಡಿಲ್ಲ. ಕರ್ನಾಟಕದ ಏಕೀಕರಣ ಆಗಬೇಕು ಎಂದು ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ನಡೆಯುತ್ತಿದ್ದಾಗ. ದಕ್ಷಿಣ ಭಾಗದಲ್ಲಿ ಆಕ್ಷೇಪ ವ್ಯಕ್ತವಾದಾಗ ಕನ್ನಡದ ಮನಸುಗಳು ಒಂದಾಗಬೇಕು ಎಂದು ಮೊದಲು ನಿಲುವು ತೆಗೆದುಕೊಂಡವರು ಕುವೆಂಪು ಅವರು. ಆ ಕಾಲದಲ್ಲಿ ಏಕೀಕರಣಕ್ಕೆ ಒತ್ತು ಕೊಟ್ಟವರು ಕುವೆಂಪು ಅವರು. ಕುವೆಂಪು ಅವರ ನಿಲುವನ್ನು ಎಲ್ಲರೂ ಒಪ್ಪಿಕೊಂಡರು ಎಂದು ಬೊಮ್ಮಾಯಿ ಹೇಳಿದರು.

ವೈಚಾರಿಕತೆಯಲ್ಲಿ ಅವರು ಜಗಜ್ಯೋತಿ ಬಸವಣ್ಣನವರ ವಿಚಾರಗಳನ್ನು ವಿಮರ್ಶೆ ಮಾಡಿದ್ದಾರೆ. ಎಲ್ಲಿ ನೋಡಿದರೂ ಅವರ ಚಿಂತನೆ ಮತ್ತು ಸಾಹಿತ್ಯ ಇದೆ. ಹೀಗಾಗಿ ಈಗಲೂ ಕುವೆಂಪು ಜೀವಂತವಾಗಿದ್ದಾರೆ. ಅವರ ಸಾಹಿತ್ಯದಲ್ಲಿ ಎಲ್ಲದಕ್ಕೂ ಪರಿಹಾರ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹಾಗೂ ಮತ್ತಿತರರು ಹಾಜರಿದ್ದರು.

Exit mobile version