ಬೆಂಗಳೂರು: ಬೆಂಗಳೂರಿನಲ್ಲಿ ಮಣ್ಣಿಗೆ ಬಂಗಾರವನ್ನೂ ಮೀರಿದ ಬೆಲೆ ಇದೆ. ಹೀಗಾಗಿಯೇ ಭೂಗಳ್ಳರ ಹಾವಳಿಯೂ ಹೆಚ್ಚಾಗಿದೆ. ಯಾರದ್ದೋ ಭೂಮಿಗೆ ಇನ್ಯಾರೋ ವಾರಸುದಾರರಾಗುತ್ತಾರೆ. ಅದನ್ನು ಪ್ರಶ್ನೆ ಮಾಡಿದರೆ ಕೊನೆಗೆ ಮಚ್ಚಿನೇಟು ಬೀಳುತ್ತೆ. ಇಂತಹದ್ದೆ ಒಂದು ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. ಇತ್ತ ರಕ್ಷಣೆ ನೀಡಬೇಕಾದ ಪೊಲೀಸರು ಭೂಗಳ್ಳರ ಪರ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಾಡಹಗಲೇ ಉದ್ಯಮಿ ಮೇಲೆ ಕೆಲ ಭೂಗಳ್ಳರು ಮಚ್ಚು ಬೀಸಿದ ಹಲ್ಲೆಗೆ (Assault case) ಯತ್ನಿಸಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಗೊಂಡನಹಳ್ಳಿಯಲ್ಲಿ ನಡೆದಿದೆ. ಕೆ.ಆರ್. ಪುರಂ ಮೂಲದ ಉದ್ಯಮಿಯೊಬ್ಬರು ಕೆಲ ವರ್ಷಗಳ ಹಿಂದೆ ಮಾರ್ಗೊಂಡನಹಳ್ಳಿ ಬಳಿ ಜಮೀನು ಖರೀದಿಸಿದ್ದರು. ಒಂದು ಎಕರೆ ಭೂಮಿ ಖರೀದಿ ಮಾಡಿ ಸುತ್ತಲು ಕಾಂಪೌಂಡ್ ನಿರ್ಮಿಸಿ, ಜಾಗ ನೋಡಿಕೊಳ್ಳಲು ಸೆಕ್ಯುರಿಟಿಯನ್ನು ನೇಮಿಸಿದ್ದರು. ಆದರೆ ಆ ಸ್ಥಳ ನಮ್ಮದು ಎಂದು ಕೆಲವರು ಕಿರಿಕ್ ತೆಗೆದು ಕಂಬಲಿಸಲು ಮುಂದಾಗಿದ್ದಾರೆ. ಉದ್ಯಮಿ ಮೇಲೆ ಪದೇಪದೆ ದಾಳಿ ಮಾಡುತ್ತಿದ್ದಾರೆ.
ತಾವು ಖರೀದಿಸಿದ ಜಮೀನಿನ ಕಾವಲಿಗೆ ಸೆಕ್ಯೂರಿಟಿ ನೇಮಿಸಿದ್ದರೆ ಅವರಿಗೂ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ರಾಜಾರೋಷವಾಗಿ ಸೆಕ್ಯುರಿಟಿ ವಾಸವಾಗಿದ್ದ ಕಂಟೇನರ್ ಮನೆಗೂ ಬೆಂಕಿ ಹಚ್ಚಿದ್ದಾರೆ. ಖರೀದಿಸಿರುವ ಜಮೀನಿನಲ್ಲಿ ಕೆಲಸ ಮಾಡಿಸಲು ಹೋದ ಉದ್ಯಮಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಉದ್ಯಮಿ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ. ಸದ್ಯ ಎಸ್ಪಿ ಸೂಚನೆ ನೀಡಿದ ನಂತರ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆದರೆ 307 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲು ಇನ್ಸ್ ಪೆಕ್ಟರ್ ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಇಷ್ಟೆಲ್ಲ ಸಾಕ್ಷಿಗಳು ಇದ್ದರೂ 307 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸದೇ, ಸಂಬಂಧ ಇಲ್ಲದವರ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎನ್ನಲಾಗಿದೆ. ಕಾರು ಬಿಡಿಸಿಕೊಳ್ಳಲು ಹೋದರೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಭೂಗಳ್ಳರ ಜತೆ ಪೊಲೀಸರು ಕೈಜೋಡಿಸಿ ಭೂ ಮಾಲೀಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಉದ್ಯಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: Murder Case : ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವವೊಂದು ಹಾಸನ ನಗರದ ಹೊರವಲಯದ ರಾಜೀವ್ ಕಾಲೇಜು ಬಳಿ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಶವ ಪತ್ತೆಯಾಗಿದ್ದು, ಸತ್ತು ಸುಮಾರು 10 ರಿಂದ 15 ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. 25 ರಿಂದ 30 ವಯಸ್ಸಿನ ಶವ ಎಂದು ಗುರುತಿಸಲಾಗಿದ್ದು, ಯಾರೋ ಕಿಡಿಗೇಡಿಗಳು ಕೊಲೆ ಮಾಡಿ ತಂದು ಹಾಕಿ ಪರಾರಿ ಆಗಿದ್ದಾರೆ.
ಪೊಲೀಸರು ನಾಪತ್ತೆ ಪ್ರಕರಣ ದಾಖಲಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವೋ, ಕೊಲೆಯೋ ಅಥವಾ ಸಹಜ ಸಾವು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ.
ವಿಷ ಸೇವಿಸಿ ರೈತ ಆತ್ಮಹತ್ಯೆ!
ಬರಗಾಲ ಹಾಗೂ ಸಾಲಭಾದೆಗೆ ಬೇಸತ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ನಂದಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಿದ್ದನಗೌಡ ಬಿರಾದಾರ (32) ಮೃತ ದುರ್ದೈವಿ.
ಸಿದ್ದನಗೌಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆಯಾಗದೇ ಬರದಿಂದ ಬೆಳೆ ಬಂದಿಲ್ಲವೆಂದು ನೊಂದಿದ್ದರು, ಫಸಲು ಬಾರದ ಕಾರಣ ಸಾಲ ತೀರಿಸಲಾಗದೇ ವಿಷ ಸೇವಿಸಿದ್ದಾರೆ. ಖಾಸಗಿ ವ್ಯಕ್ತಿಗಳ ಬಳಿ 6 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸದ್ಯ ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ