Site icon Vistara News

Assault Case : ಕೈಯಲ್ಲಿ ಮಚ್ಚು ಹಿಡಿದು ರೌಡಿಸಂಗಿಳಿದ ಪೊಲೀಸ್‌!

Magadiroad ASI Srinivas Attacked

ಬೆಂಗಳೂರು: ಕಳ್ಳಕಕಾರಿಗೆ, ರೌಡಿಸಂ ಮಾಡುವವರಿಗೆ ಸಿಂಹಸ್ವಪ್ನವಾಗಿರಬೇಕಾದ ಪೊಲೀಸ್‌ ಅಧಿಕಾರಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಯುವಕರನ್ನು ಅಟ್ಟಾಡಿಸಿರುವ ಘಟನೆ (Assault Case) ಬೆಂಗಳೂರಲ್ಲಿ ನಡೆದಿದೆ. ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು, ಯಾವ ರೌಡಿಗೂ ಕಮ್ಮಿ ಇಲ್ಲದಂತೆ ಇಬ್ಬರು ಯುವಕರ ಮೇಲೆ ಎಎಸ್‌ಐ ಮಚ್ಚು ಬೀಸಿರುವ ಘಟನೆ ನಡೆದಿದೆ.

ಮಾಗಡಿ ರಸ್ತೆ ಪೊಲೀಸ್ ಠಾಣೆಯ‌ ASI ಶ್ರೀನಿವಾಸ್ ಎಂಬುವವರು ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ. ಪೊಲೀಸ್‌ ಅಧಿಕಾರಿ ರೌಡಿಯಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿದೆ.

ಎಎಸ್‌ಐ ಶ್ರೀನಿವಾಸ್‌ ಮಚ್ಚಿ ಹಿಡಿದು ಬರುತ್ತಿರುವ ಚಿತ್ರಣ

ಉಲ್ಟಾ ಮಚ್ಚಿನಿಂದ ಹಲ್ಲೆ

ಇಷ್ಟಕ್ಕೂ ಎಎಸ್‌ಐ ಶ್ರೀನಿವಾಸ್‌ ಮಚ್ಚು ಝಳಪಿಸಲು ಕಾರಣವಾಗಿದ್ದು ಅವರ ಅಣ್ಣನ ಮಗ. ಅ. 27ರ ರಾತ್ರಿ ಬೆಂಗಳೂರಿನ ವಿಜಯನಗರದಲ್ಲಿ ಎಎಸ್‌ಐ ಶ್ರೀನಿವಾಸ್‌ ಅವರ ಅಣ್ಣನ ಮಗ ಆನಂದ್‌ ಎಂಬಾತ ತೇಜಸ್ವಿನಿ ಬಾರ್‌ನಲ್ಲಿ ಮದ್ಯ ಸೇವನೆಗೆ ಹೋಗಿದ್ದ. ಅದೇ ಬಾರ್‌ಗೆ ಬಿಯರ್ ಕುಡಿಯಲು ದಯಾನಂದ್ ಮತ್ತು ಶಶಿಧರ್ ಎಂಬುವವರು ಹೋಗಿದ್ದರು.

ಕ್ಷುಲ್ಲಕ ಕಾರಣಕ್ಕೆ ಆನಂದ್ ಮತ್ತು ದಯಾನಂದ್, ಶಶಿಧರ್ ಮೂವರ ನಡುವೆ ಮಾತಿಗೆ ಮಾತು ಬೆಳೆದು ಸಣ್ಣ ಗಲಾಟೆ ಆಗಿದೆ. ಈ ವೇಳೆ ಆನಂದ್‌ ನಿಮ್ಮಿಬ್ಬರದ್ದು ಯಾವ ಏರಿಯಾ ಎಂದು ಕೇಳಿದ್ದಾನೆ. ಈ ವೇಳೆ ದಯಾನಂದ್‌ ನಮ್ಮದು ಇದೇ ಏರಿಯಾ, ನಿಂದು ಯಾವ ಏರಿಯಾ ಎಂದು ಕೇಳಿದ್ದಾನೆ. ನಂದು ಇದೇ ಏರಿಯಾನೇ ಬೇಕಾದರೆ ಬಾ ಮನೆ ತೋರಿಸುತ್ತೀನಿ ಎಂದು ಆನಂದ್‌ ಹೇಳಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಅವರಿಬ್ಬರನ್ನು ಆನಂದ್‌ ತನ್ನ ಆಟೋದಲ್ಲೇ ಕರೆದುಕೊಂಡು ನೇರವಾಗಿ ಆರ್‌ಪಿಸಿ ಲೇಔಟ್‌ನಲ್ಲಿರುವ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದಾನೆ.

ಇದನ್ನೂ ಓದಿ: Recruitment Exam : ಹಿಜಾಬ್ ಗದ್ದಲದ ನಡುವೆಯೇ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಶುರು

ಇಲ್ಲಿಂದಲೇ ಆನಂದ್‌ನ ಡ್ರಾಮಾ ಶುರುವಾಗಿತ್ತು. ಆಟೋದಿಂದ ಇಳಿದ ಆನಂದ್‌ ಜೋರಾಗಿ ಕೂಗಾಡಲು ಶುರು ಮಾಡಿದ್ದ. ಇವರಿಬ್ಬರು ಕಳ್ಳರು‌ ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿಕೊಂಡಿದ್ದಾನೆ. ತಕ್ಷಣ ASI ಶ್ರೀನಿವಾಸ್ ಒಂದ್‌ ಕೈಯಲ್ಲಿ ಮಚ್ಚು, ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಓಡಿ ಬಂದಿದ್ದಾರೆ.

ಇತ್ತ ಆನಂದ್ ಕೂಗಾಟ ಕೇಳಿ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ದಯಾನಂದ್, ಶಶಿಧರ್‌ನನ್ನು ಓಡಿ ಹೋಗಿ ಶ್ರೀನಿವಾಸ್ ಮತ್ತು ಆನಂದ್ ಹಿಡಿದುಕೊಂಡಿದ್ದಾರೆ. ಬಳಿಕ ಮಾತನಾಡಲು ಬಿಡದೆ ಏಕಾಏಕಿ ಇಬ್ಬರ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿದ್ದಾರೆ. ಇತ್ತ ದಯಾನಂದ್‌, ಶಶಿಧರ್‌ ಕೆಳಗೆ ಬೀಳುತ್ತಿದ್ದಂತೆ ಲಾಠಿಯಿಂದ ಶ್ರೀನಿವಾಸ್‌ ಥಳಿಸಿದ್ದಾರೆ.

ಇತ್ತ ಅಪ್ಪ ಲಾಠಿಯಲ್ಲಿ ಹೊಡೆಯುತ್ತಿದ್ದರೆ, ಮಗಳು ಮಚ್ಚು ಹಿಡಿದುಕೊಂಡಿದ್ದಳು. ಅಪ್ಪನೊಂದಿಗೆ ಸೇರಿ ಮಗನೂ ಯುವಕರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಎಲ್ಲ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ವಿಜಯನಗರ ಹೊಯ್ಸಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಶ್ರೀನಿವಾಸ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಶ್ರೀನಿವಾಸ್‌ ಪರಾರಿ ಆಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version