ಬೆಂಗಳೂರು: ರಾತ್ರಿ ಕಳೆದ ಬೆಳಗಾಗುವಷ್ಟರಲ್ಲಿ ಆ ಏರಿಯಾ ಜನರು ಶಾಕ್ ಆಗಿದ್ದರು. ಯಾಕೆಂದರೆ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಜಖಂ (Assault Case) ಆಗಿದ್ದವು. ಬೆಂಗಳೂರಿನ ಲಗ್ಗೆರೆಯ ರಾಜೀವ್ ಗಾಂಧಿ ನಗರದಲ್ಲಿ ರಾತ್ರೋ ರಾತ್ರಿ ಒಂದಲ್ಲ ಎರಡಲ್ಲ ಬರೋಬ್ಬರಿ 28ಕ್ಕೂ ಹೆಚ್ಚು ಕಾರುಗಳು ಧ್ವಂಸ ಆಗಿದ್ದವು. ಕೆಲ ಕಿಡಿಗೇಡಿಗಳು ಕಾರಿನ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿದ್ದರು. ರಾತ್ರಿ 2 ರಿಂದ 3 ಸುಮಾರಿಗೆ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಲಾಂಗ್ ಮತ್ತು ಮಚ್ಚುಗಳಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿ ಪರಾರಿಯಾಗಿದ್ದರು.
ಮೇಲ್ನೋಟಕ್ಕೆ ಇದು ಸ್ಥಳೀಯ ಯುವಕರದ್ದೇ ಕೃತ್ಯ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಕೂಡ ಒಂದಷ್ಟು ಜನರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಗಾಂಜಾ ಮತ್ತಿನಲ್ಲಿ ಯುವಕರು ಮುಖಕ್ಕೆ ಗೊಂಬೆಯ ಮುಖವಾಡ ಧರಿಸಿ ಈ ಕೃತ್ಯವನ್ನು ಎಸಗಿದ್ದಾರೆಂದು ಆರೋಪಿಸಿದ್ದಾರೆ. ಈ ಘಟನೆಗೆ ಕಾರಣವಾದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಪೊಲೀಸರಲ್ಲಿ ವಿನಂತಿಸಿದ್ದಾರೆ. ಇನ್ನು ಸಿಗರೇಟ್ ವಿಚಾರಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾರ್ಯಕರ್ತರ ಕಿತ್ತಾಟ
ಸ್ಥಳೀಯರು ಕೃತ್ಯದ ಬಗ್ಗೆ ಪೊಲೀಸರಿಗೆ ಹಾಗೂ ಏರಿಯಾದ ಮುಖಂಡರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಆರ್.ಆರ್ ನಗರದ ಶಾಸಕ ಮುನಿರತ್ನ ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ಕೊಡುವ ರೀತಿಯಲ್ಲಿ ಮಾತನಾಡಿದರು. ಅವರ ಮಾತಿಗಳಿಂದ ಕಾಂಗ್ರೆಸ್‌ನ ಕೆಲ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು.ಕೆಲವರು ಶಾಸಕ ಮುನಿರತ್ನರಿಗೆ ಏಕವಚನದಲ್ಲಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಸದ್ಯ ರಾಜಗೋಪಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ