ಬೆಂಗಳೂರು: ವಿಧಾನಸಭೆಯಲ್ಲಿ (Assembly Session) ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಹಾಗೂ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕ 2024 ಸರ್ವಾನುಮತದಿಂದ ಅಂಗೀಕಾರಗೊಂಡಿವೆ. ಸುದೀರ್ಘ ಚರ್ಚೆ ಬಳಿಕ ವಿಪಕ್ಷಗಳ ವಿರೋಧದ ನಡುವೆಯೂ ಎರಡು ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ. ಇನ್ನು ವಿಧಾನ ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಅಂಗೀಕಾರಗೊಂಡು, ಕಾಯ್ದೆ ಜಾರಿಯಾದರೆ ಸಿನಿಮಾ ಪ್ರಿಯರಿಗೆ ದರ ಏರಿಕೆ ಬಿಸಿ ತಟ್ಟಲಿದೆ.
ಏನಿದು ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024?
ರಾಜ್ಯ ಸರ್ಕಾರ, ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಅನ್ನು ಮಂಗಳವಾರ ಮಂಡಿಸಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದೆ. ಈ ಮಸೂದೆಯಲ್ಲಿ ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇಕಡ 1ರಿಂದ 2ರಷ್ಟು ಹೊಸ ಸೆಸ್ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಇಎಸ್ಐ, ಪಿಎಫ್ ಸೇರಿದಂತೆ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ.
ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ ಎಂಬ ನಿಧಿ ಸ್ಥಾಪಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರಿಂದ ಸಿನಿಮಾ ಟಿಕೆಟ್ ಹಾಗೂ ಒಟಿಟಿ ಚಂದಾದಾರಿಕೆ ಮೇಲೆ ಶೇಕಡ 2 ಪರ್ಸೆಂಟ್ ಮೀರದಂತೆ ಶೇಕಡ 1 ಪರ್ಸೆಂಟ್ಗಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲಿದೆ. ಈ ಸೆಸ್ ಅನ್ನು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ.
ಪೆಟ್ರೋಲ್, ಡೀಸೆಲ್ ಏರಿಕೆ ಬೆನ್ನಲ್ಲೇ ಇದೀಗ ಮನರಂಜನೆ ಕ್ಷೇತ್ರದ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟು, ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ಸರ್ಕಾರ ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ಸಿದ್ದರಾಮಯ್ಯ ಸರ್ಕಾರ, ಇದೀಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ (Movie ticket price hike) ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿತ್ತು. ಇದೀಗ ವಿಪಕ್ಷ ನಾಯಕರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ ಮಸೂದೆ ಅಂಗೀಕಾರಗೊಂಡಿದೆ.
ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ
ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕ 2024 ಕೂಡ ಅಂಗೀಕಾರಗೊಂಡಿದೆ. ವಿಪಕ್ಷ ಶಾಸಕರ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಸಿಎಂ ರಾಜಕೀಯ ಸಲಹೆಗಾರ, ಕಾನೂನು ಸಲಹೆಗಾರ ಹುದ್ದೆಗಳ ಅನರ್ಹತೆಗೆ ಕಡಿವಾಣ ಹಾಕುವ ವಿಧೇಯಕ ಇದಾಗಿದೆ.
ಇದನ್ನೂ ಓದಿ | Union Budget 2024: ಇನ್ನೊಂದು ವರ್ಷದಲ್ಲಿ ಹಳೇ ತೆರಿಗೆ ಪದ್ಧತಿ ರದ್ದು? ಕೇಂದ್ರ ವಿತ್ತ ಸಚಿವೆ ಹೇಳಿದ್ದಿಷ್ಟು
ಶಾಸಕ ಸುನೀಲ್ ಕುಮಾರ್ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ನವರು ವಿಪಕ್ಷದಲ್ಲಿ ಇದ್ದಾಗ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಲಹೆ ಕೊಟ್ಟಿದ್ದರು. ಈಗ ಆರ್ಥಿಕ ಸಲಹೆಗಾರು, ರಾಜಕೀಯ ಸಲಹೆಗಾರರ ನೇಮಕ ದುಂದು ವೆಚ್ಚದ ಭಾಗವಲ್ಲವೇ? ಅವರಿಗೆ ಕಾರು, ಮನೆ ಸೌಲಭ್ಯ ಕೊಡಬೇಕಾಗುತ್ತದೆ. ಇದು ದುಂದು ವೆಚ್ಚವಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿ, ನಾನು ಸರ್ಕಾರದಿಂದ ಸಂಬಳ, ಭತ್ಯೆ ತೆಗೆದುಕೊಳ್ಳುವುದಿಲ್ಲ ಅಂತ ತಿರುಗೇಟು ನೀಡಿದರು. ನಂತರ ವಿರೋಧ ಪಕ್ಷದ ಸದಸ್ಯರ ಆಕ್ಷೇಪದ ನಡುವೆ ವಿಧೇಯಕ ಅಂಗೀಕಾರವಾಯಿತು.