Site icon Vistara News

Assembly Session: ರೈತರ ಸಾಲಮನ್ನಾ ನಷ್ಟ ಎಂದಾದರೆ, ಉದ್ಯಮಿಗಳ ಸಾಲಮನ್ನಾ ಲಾಭಕರವೇ?: ತೇಜಸ್ವಿ ಸೂರ್ಯ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

assembly-session-siddaramaiah defends farmers loan waiver scheme

ವಿಧಾನಸಭೆ: ರೈತರ ಸಾಲ ಮನ್ನಾ ಮಾಡುವುದು ಆರ್ಥಿಕತೆಗೆ ನಷ್ಟ ಎಂದಾದರೆ ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡುವುದು ಲಾಭಕವೇ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ (Assembly Session) ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯ ವೇಳೆ ಭಾಗವಹಿಸಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣವು ಸುಳ್ಳುಗಳಿಂದ ತುಂಬಿದೆ ಎಂದರು.

ರಾಜ್ಯಪಾಲರು ಈ ತಿಂಗಳ 10ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸುಮಾರು 82 ಪ್ಯಾರಗಳಿರುವ ಅವರ ಭಾಷಣ ನೋಡಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿನ ರಾಜಭವನಗಳು ವಿವಾದದ ಕೇಂದ್ರಗಳಾಗಿವೆ, ಆದರೆ ಕರ್ನಾಟಕದಲ್ಲಿ ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್‌ ಅವರು ಯಾವುದೇ ವಿವಾದದ ಸುಳಿಗೆ ಸಿಕ್ಕಿಹಾಕಿಕೊಳ್ಳದೆ ರಾಜಭವನದ ಗೌರವ‌, ಘನತೆಯನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದರು.

ರಾಜ್ಯಪಾಲರ ಭಾಷಣವನ್ನು ರಾಜ್ಯಪಾಲರು ಸಿದ್ಧಪಡಿಸಿಕೊಳ್ಳುವುದಿಲ್ಲ, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಅವರು ಓದುವುದು ಸಂಪ್ರದಾಯ. ನನ್ನ ರಾಜಕೀಯ ಜೀವನದ 40 ವರ್ಷಗಳಲ್ಲಿ ಇಷ್ಟೊಂದು ಕೆಟ್ಟ ಭಾಷಣವನ್ನು ನಾನು ಈ ಹಿಂದೆ ಕೇಳಿರಲಿಲ್ಲ. ಅವರ ಇಡೀ ಭಾಷಣದಲ್ಲಿ ಸರ್ಕಾರ ಸುಳ್ಳನ್ನು ಹೇಳಿಸಿದೆ ಎಂದರು.

ಇದನ್ನೂ ಓದಿ: ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರಾ ತೇಜಸ್ವಿ ಸೂರ್ಯ?-ಅಂದು ಜತೆಗಿದ್ದ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್‌ ಜಿಹಾದ್‌, ಹಿಜಾಬ್‌ ಬಗ್ಗೆ ಮಾತನಾಡಿ ಎಂದಿದ್ದಾರೆ. ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೆ, ಅಬ್ಬಕ್ಕ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದಿದ್ದಾರೆ. ಇದು ಈ ದೇಶದ ಗೃಹ ಮಂತ್ರಿ ಆಡುವ ಮಾತಾ? ಮಹಾತ್ಮಾ ಗಾಂಧಿ ವರ್ಸಸ್‌ ಸಾವರ್ಕರ್‌ ನಡುವಿನ ಚುನಾವಣೆ ಎನ್ನುತ್ತಾರೆ. ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದೆಯಾ?

ಅಡಿಕೆ ಆಮದು ಕುರಿತಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಕೇಳಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರ ಹೀಗಿದೆ, 65,000 ಟನ್‌ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಕಡಿಮೆ ಬೆಲೆಗೆ ವಿದೇಶದಿಂದ ಅಡಿಕೆ ಆಮದು ಮಾಡಿಕೊಂಡರೆ ನಮ್ಮ ದೇಶದ ಅಡಿಕೆಗೆ ಹೆಚ್ಚು ಬೆಲೆ ಸಿಗುತ್ತದಾ? ಎಂದರು.

ರೈತರ ಸಮಸ್ಯೆ ಕುರಿತು ಮಾತನಾಡುವಾಗ, ಇತ್ತೀಚೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಡಿದ ಮಾತನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗ ಇಲ್ಲ ಎಂದಿದ್ದಾರೆ. ಹಾಗಾದರೆ ಉದ್ಯಮಿಗಳು, ಬಂಡವಾಳಶಾಹಿಗಳ 12 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಮನ್ನಾ ಮಾಡಿದ್ದಾರಲ್ಲ ಇದು ದೇಶಕ್ಕೆ ಒಳ್ಳೆಯದಾ? ಇದು ಬಿಜೆಪಿಯವರಿಗೆ ರೈತರ ಬಗ್ಗೆ ಇರುವ ಧೋರಣೆ. ರೈತರ ಬಗ್ಗೆ ಸರ್ಕಾರದ ಧೋರಣೆ. ಬಾಯಲ್ಲಿ ಒಂದು, ಕೃತಿಯಲ್ಲಿ ಒಂದು ಇದೆ, ಇದೇ ಕಾರಣಕ್ಕೆ ನಾನು ರಾಜ್ಯಪಾಲರದ್ದು ಸುಳ್ಳು ಭಾಷಣ ಎಂದು ಹೇಳಿದ್ದು ಎಂದರು.

ಇದನ್ನೂ ಓದಿ: Assembly Session: ಸತ್ಯ ಹೇಳೋದು ಗಾಂಧಿವಾದ-ಸುಳ್ಳು ಹೇಳೋದು ಮನುವಾದ: ತಾನು ದೇವರ ವಿರೋಧಿ ಅಲ್ಲ ಎಂದ ಸಿದ್ದರಾಮಯ್ಯ

ಪಶುಸಂಗೋಪನಾ ಇಲಾಖೆಯ ನಿರ್ದೇಶಕರು 2019ರಲ್ಲಿ 1 ಕೋಟಿ 29 ಲಕ್ಷ ಜಾನುವಾರುಗಳು ರಾಜ್ಯದಲ್ಲಿದ್ದಾವೆ ಎಂದು ಉತ್ತರ ನೀಡಿದ್ದರು, 2022ರಲ್ಲಿ 1 ಕೋಟಿ 14 ಲಕ್ಷ ಜಾನುವಾರಿವೆ ಎಂದು ಉತ್ತರ ನೀಡಿದ್ದಾರೆ. ಬರೀ ಮೂರೇ ವರ್ಷದಲ್ಲಿ 15 ಲಕ್ಷ ಜಾನುವಾರುಗಳು ಕಾಣೆಯಾಗಿವೆ ಎಂದರೆ ಇದನ್ನು ನಂಬಬಹುದಾ? ನಾವು ಗೋಹತ್ಯೆ ನಿಷೇದ ಮಾಡಿ, ಗೋಶಾಲೆ ತೆರೆದು ಗೋಸಂಪತ್ತು ಅಭಿವೃದ್ಧಿ ಆಗಿದೆ ಎಂದಿದ್ದೀರಿ, ಎಲ್ಲಪ್ಪ ಅಭಿವೃದ್ಧಿ ಆಗಿರುವುದು ಕಡಿಮೆ ಆಗಿದೆಯಲ್ವಾ? 123 ಸರ್ಕಾರಿ, 200 ಖಾಸಗಿ ಗೋಶಾಲೆಗಳಿವೆ. ಒಂದು ಹಸು ಸಾಕಲು ದಿನಕ್ಕೆ 17 ರೂ. ನಂತೆ ಸರ್ಕಾರ ನೀಡುತ್ತದೆ, ಕನಿಷ್ಠ ಒಂದು ಹಸುವಿಗೆ ನಿತ್ಯ 60 ರೂ. ಮೇವು ಬೇಕು.

ಹೀಗಾದರೆ ಹಸುವಿಗೆ ಹೊಟ್ಟೆತುಂಬ ಮೇವು ನೀಡೋಕೆ ಸಾಧ್ಯವೇ? ಮೊದಲೆಲ್ಲ ರೈತರು ಉಪಯುಕ್ತವಿಲ್ಲದ ಜಾನುವಾರುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು, ಈಗ ಅದನ್ನು ನಿಷೇಧ ಮಾಡಲಾಗಿದೆ. ಸರ್ಕಾರವಾದರೂ ಈ ಜಾನುವಾರುಗಳನ್ನು ಖರೀದಿ ಮಾಡುವುದಾದರೆ ತೊಂದರೆಯಿಲ್ಲ, ಅದನ್ನೂ ಮಾಡುತ್ತಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸಾಗಿರುವ, ರೋಗ ಬಂದಿರುವ, ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸದೆ ಇರುವುದು ರೈತರಿಗೆ ದೊಡ್ಡ ತಲೆ ನೋವಾಗಿದೆ. ಕೋಮುವಾದಿ ಉದ್ದೇಶದೊಂದಿಗೆ ಜಾರಿಗೆ ತಂದಿರುವ ಈ ಕಾಯ್ದೆಯನ್ನು ಮೊದಲು ತೆಗೆದುಹಾಕಬೇಕು ಎಂದರು.

Exit mobile version