ಬೆಂಗಳೂರು: ಆಪ್ (AAP) ರಾಜ್ಯ ಯುವ ಘಟಕದ ಉಪಾಧ್ಯಕ್ಷರ ಮೇಲೆ ಹಲ್ಲೆ ಯತ್ನ ನಡೆದಿದೆ. ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಜಕ್ಕೂರು ಮುಖ್ಯರಸ್ತೆಯಲ್ಲಿ ಬಿಯರ್ ಬಾಟಲಿಯ ಗಾಜಿನಿಂದ ಹಲ್ಲೆಗೆ ಯತ್ನ ನಡೆದಿದೆ.
ಯಲಹಂಕದಿಂದ ಕೆ.ಆರ್.ಪುರಂ ಆಸ್ಪತ್ರೆಗೆ ಯುವಘಟಕದ ಉಪಾಧ್ಯಕ್ಷ ಗಿರೀಶ್ ಕುಮಾರ್ ನಾಯ್ಡು ಕಾರಿನಲ್ಲಿ ತೆರಳುತ್ತಿದ್ದಾಗ, ಮಾರ್ಗ ಮಧ್ಯೆ 2 ಡಿಯೋ ಬೈಕ್ ನಲ್ಲಿ ಬಂದಿದ್ದ ನಾಲ್ವರು ಯುವಕರು ಅಡ್ಡಗಟ್ಟಿದ್ದಾರೆ. ನಂತರ ರಸ್ತೆ ಮೇಲೆ ಬಿಯರ್ ಬಾಟಲ್ ಹೊಡೆದು, ಗಾಜನ್ನು ಕೈಯಲ್ಲಿ ಹಿಡಿದು ಹಲ್ಲೆಗೆ ಯತ್ನ ನಡೆಸಿದ್ದಾರೆ.
ಈ ವೇಳೆ ಗಿರೀಶ್ ಕುಮಾರ್ ಜೊತೆಯಲ್ಲಿದ್ದವರಿಗೂ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿದೆ. ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರಿಂದ ಆರೋಪಿಗಳ ಪತ್ತೆಗಾಗಿ ತಲಾಶ್ ನಡೆದಿದೆ.
ಈ ಹಿಂದೆ ಓರ್ವ ಬಿಲ್ಡರ್ ಸೇರಿ ಬಿಬಿಎಂಪಿ ಬಿಡಿಎ ಅಧಿಕಾರಿಗಳ ವಿರುದ್ದ ಆಪ್ ಮುಖಂಡ ದೂರು ನೀಡಿದ್ದರು. ಇದುವರೆಗೂ ಸರ್ಕಾರಿ ಅಧಿಕಾರಿಗಳು ಉದ್ಯಮಿಗಳು ರಾಜಕಾರಣಿಗಳ ವಿರುದ್ದ 430 ಕ್ಕೂ ಹೆಚ್ಚಿನ ದೂರು ನೀಡಿದ್ದಾರೆ. ಗಿರೀಶ್ ಕುಮಾರ್ ನೀಡಿದ್ದ ದೂರಿನ ಅನ್ವಯ ಬೆಂಗಳೂರಿನ 3600 ಕ್ಕೂ ಅಧಿಕ ಅಕ್ರಮ ಕಟ್ಟಡ ತೆರವಿಗೆ ಕೋರ್ಟ್ ಆದೇಶಿಸಿತ್ತು.