ಬೆಂಗಳೂರು: ಬೆಳಗ್ಗೆ ಮಡದಿ ಮಾಡಿಕೊಟ್ಟ ಬಿಸಿ ಬಿಸಿ ತಿಂಡಿ ಸವಿದು, ಯೂನಿಫಾರ್ಮ್ ಧರಿಸಿ ಆಟೋ ಚಾಲಕ ರಸ್ತೆಗಿಳಿದಿದ್ದ. ಆಟೋ ಬಾಡಿಗೆಗೆ ಯಾರಾದರೂ ಪ್ರಯಾಣಿಕರು ಸಿಗುವಷ್ಟರಲ್ಲಿ ಒಂದು ಟೀ ಕುಡಿದು ಕೆಲಸ ಶುರು ಮಾಡುವ ಎಂದುಕೊಂಡಿದ್ದರು. ಟೀ ಅಂಗಡಿ ಮುಂಭಾಗ ಆಟೋ ನಿಲ್ಲಿಸಿದ ಆ ಚಾಲಕನಿಗೆ ಆತನ ಹೃದಯವೇ (Heart Attack) ಯಮಪಾಶವಾಗಿತ್ತು.
ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಆಟೋ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಲಕ ತಿಮ್ಮೇಶ್ ಮೃತ ದುರ್ದೈವಿ. ಮೂಲತಃ ಮಂಡ್ಯ ಜಿಲ್ಲೆಯ ತಿಮ್ಮೇಶ್ ಬೆಂಗಳೂರಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಮಂಗಳವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದ ತಿಮ್ಮೇಶ್ ಟೀ ಕುಡಿಯಲು ಆಟೋ ನಿಲ್ಲಿಸಿದ್ದರು.
ಆಟೋದಿಂದ ಇಳಿಯುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಎದೆಯನ್ನು ಸಾವರಿಸಿಕೊಳ್ಳುತ್ತಲೇ ಆಟೋದಿಂದ ತಿಮ್ಮೇಶ್ ಇಳಿದಿದ್ದಾರೆ. ನಡುರಸ್ತೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ತಿಮ್ಮೇಶ್ ಅವರು ಆಟೋದಿಂದ ಇಳಿದು ಹೋಗುವ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟೀ ಕುಡಿಯಲು ಬಂದ ಚಾಲಕನಿಗೆ ಹಾರ್ಟ್ ಅಟ್ಯಾಕ್; ಇಲ್ಲಿದೆ ನೋಡಿ ವಿಡಿಯೊ
ಹೃದಯ ಹಿಡಿದು ನಡುರಸ್ತೆಯಲ್ಲಿ ಬಿದ್ದ ತಿಮ್ಮೇಶ್‌ಗೆ ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ. ಆಸ್ಪತ್ರೆಗೆ ಸೇರಿಸುವ ಮುನ್ನವೇ ಆಟೋ ಚಾಲಕ ತಿಮ್ಮೇಶ್ ಹೃದಯ ನಿಂತುಹೋಗಿದೆ. ಸಂಪಂಗಿ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಕುಟುಂಬಸ್ಥರಿಗೆ ವಿಚಾರ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ