ಬೆಂಗಳೂರು: ಟೊಮ್ಯಾಟೋ ಬೆಲೆ ಏರಿಕೆಯ (Tomato Price Hike) ಬಿಸಿ ಮುಟ್ಟಿಸಿ ಈಗ ಸ್ವಲ್ಪ ತಣ್ಣಗಾಗಿದೆ. ಈಗ ಮಾರುಕಟ್ಟೆಯಲ್ಲಿ ಇನ್ನೊಂದು ವಸ್ತು ಸಿಕ್ಕಾಪಟ್ಟೆ ರೇಟು ಏರಿಸಿಕೊಂಡು ಕುಳಿತಿದೆ. ಅದುವೇ ಬಾಳೆ ಹಣ್ಣು (Banana fruit). ಬಾಳೆ ಹಣ್ಣಿಗೆ ಕಳೆದ ಒಂದು ತಿಂಗಳಿನಿಂದಲೇ ಭಾರಿ ಬೆಲೆ (Banana price hike) ಏರಿಕೆ ಆಗಿದೆ. ಆದರೆ, ಈಗ ಏಲಕ್ಕಿ ಬಾಳೆ ಶತಕ (Yelakki Bale Century) ದಾಟಿ ಸುದ್ದಿ ಮಾಡಿದೆ. ಮಾತ್ರವಲ್ಲ, ಈ ಧಾರಣೆ ಇನ್ನಷ್ಟು ಹೆಚ್ಚಲಿದೆ ಎಂಬ ಮುನ್ಸೂಚನೆ ನೀಡಿದೆ.
ಟೊಮ್ಯಾಟೋ ಬೆಲೆ ಸಾಮಾನ್ಯ ಮಾರುಕಟ್ಟೆಯಲ್ಲಿ 160, 180 ರೂ.ಗಳಿಗೇರಿತ್ತು. ಬೇರೆ ರಾಜ್ಯಗಳಿಗೆ ಸರಬರಾಜು ಮಾಡುವ ಮಂಡಿಗಳಲ್ಲಿ ಅದು ಕೆಜಿಗೆ 260 ರೂ.ಗಳ ವರೆಗೂ ಏರಿತ್ತು. ಈಗ ಅದು ಸ್ವಲ್ಪ ಕಡಿಮೆಯಾಗಿದೆ. ಆದರೆ, ಶ್ರಾವಣ ಮಾಸದ ಆರಂಭದಲ್ಲೇ ಜನರ ಜೇಬಿಗೆ ಕತ್ತರಿ ಹಾಕಿದ್ದು ಬಾಳೆಹಣ್ಣು. ಏಲಕ್ಕಿ ಬಾಳೆಹಣ್ಣಂತೂ ಈಗ ಕೆಜಿಗೆ 100 ರೂ.ಗಿಂತ ಮೇಲೆಯೇ ಇದೆ. ರೋಬಸ್ಟಾ ಎಂದು ಕರೆಯಲಾಗುವ ಪಚ್ಚೆ ಬಾಳೆಯೂ 40 ರೂ.ನಷ್ಟಾಗಿದೆ.
ಇದಕ್ಕೆ ಪ್ರಮುಖ ಕಾರಣ ಬೇಡಿಕೆ ಮತ್ತು ಪೂರೈಕೆ ನಡುವೆ ಇರುವ ದೊಡ್ಡ ಪ್ರಮಾಣದ ವ್ಯತ್ಯಾಸ. ಒಂದು ನಿರ್ದಿಷ್ಟ ಮಾರ್ಕೆಟ್‌ಗೆ ತಿಂಗಳ ಹಿಂದೆ 1500 ಕ್ವಿಂಟಲ್ ಏಲಕ್ಕಿ ಬಾಳೆ ಬರುತ್ತಿತ್ತು ಎಂದರೆ ಈಗ ಅದರ ಪ್ರಮಾಣ 1000 ಕ್ವಿಂಟಲ್‌ಗೆ ಇಳಿದಿದೆ.
ಏಲಕ್ಕಿ ಬಾಳೆಯ ಹೋಲ್‌ಸೇಲ್ ಮಾರಾಟ ದರವೇ 80 ರೂ. ಇದೆ. ಇದೇ ಪಚ್ಚೆ ಬಾಳೆಗೆ ಕೆಜಿಗೆ ಕನಿಷ್ಠ 20 ರೂ. ಇದೆ. ಇದರ ಸಾಗಾಣಿಕೆ ಮತ್ತು ಮಾರುಕಟ್ಟೆ ವೆಚ್ಚವನ್ನು ಸೇರಿಸಿದರೆ ಒಂದು ಕೆಜಿ ಬಾಳೆ ಹಣ್ಣಿನ ಮಾರಾಟ ದರ ತಲಾ 100 ಮತ್ತು 40 ರೂ. ಆಗುತ್ತದೆ. ಬೆಂಗಳೂರಿಗೆ ಪ್ರಮುಖವಾಗಿ ಬಾಳೆ ಹಣ್ಣು ಬರುವುದು ತುಮಕೂರು, ಚಿಕ್ಕಬಳ್ಳಾಪುರ, ಆನೆಕಲ್, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ. ತಮಿಳುನಾಡಿನ ಹೊಸೂರು ಮತ್ತು ಕೃಷ್ಣಗಿರಿಯಿಂದಲೂ ಬರುತ್ತದೆ. ಆದರೆ ಅಲ್ಲೇ ಬೆಳೆ ಕಡಿಮೆಯಾಗಿದ್ದರಿಂದ ಪೂರೈಕೆ ಕಡಿಮೆಯಾಗಿದೆ.
ಇನ್ನು ಹೆಚ್ಚು ಬೇಡಿಕೆ, ದರವೂ ಏರಿಕೆಯಾಗುವ ಸಮಯ!
ನಿಜವೆಂದರೆ, ಶ್ರಾವಣ ಮಾಸದಲ್ಲಿ ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚುತ್ತದೆ. ಇನ್ನು ನಾಗರಪಂಚಮಿ, ಗಣೇಶ ಚತುರ್ಥಿ ಮೊದಲಾಗಿ ಸಾಲು ಸಾಲು ಹಬ್ಬಗಳು ಬರಲಿವೆ. ಆಗ ಬಾಳೆ ಹಣ್ಣು ಅನಿವಾರ್ಯ. ಹೀಗಾಗಿ ಆಗ ಬೆಲೆ ಇನ್ನಷ್ಟು ಹೆಚ್ಚಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Health Tips: ದಿನಕ್ಕೊಂದು ಬಾಳೆಹಣ್ಣು: ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಆಹಾರ!
ಈಗಲೂ ಬಾಳೆ ಹಣ್ಣಿನ ಬೇಡಿಕೆ ಎಷ್ಟಿದೆ ಎಂದರೆ ಅಂಗಡಿಯವರು ತಂದಿಟ್ಟ ಕೂಡಲೇ ಮಾರಾಟವಾಗುತ್ತದೆ. ಇದಕ್ಕೆ ಒಂದು ಕಾರಣ ಅವರು ಮಾರುಕಟ್ಟೆಯಿಂದ ತರುವ ಪ್ರಮಾಣವೇ ಕಡಿಮೆ. ಇದೇ ವೇಳೆ ಅಂಗಡಿಯವರಿಗೆ ಸಮಾಧಾನ ತರುವ ಇನ್ನೊಂದು ಅಂಶವೇನೆಂದರೆ, ಈಗ ವೇಸ್ಟೇಜ್ ಪ್ರಮಾಣ ತುಂಬ ಕಡಿಮೆಯಾಗಿದೆ. ಮೊದಲೆಲ್ಲ 100 ಕೆಜಿ ಬಾಳೆಹಣ್ಣು ತಂದರೆ ಅದರಲ್ಲಿ ಸುಮಾರು ಕನಿಷ್ಠ 20 ಕೆಜಿ ಆದರೂ ವಿಪರೀತ ಹಣ್ಣಾಗಿ ಒಂದೋ ಎಸೆಯುವ ಇಲ್ಲವೇ ಕಡಿಮೆ ರೇಟಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು. ಆದರೆ, ಈಗ ಆ ಸಮಸ್ಯೆ ಪರಿಹಾರವಾಗಿದೆ.