ನವದೆಹಲಿ: ಬೆಂಗಳೂರಿನಲ್ಲಿ ಬಾಳೆ ಹಣ್ಣಿನ ದರ ಗಗನಕ್ಕೇರಿದ್ದು, ಗ್ರಾಹಕರು ಬೆಲೆ ಹೆಚ್ಚಳದ ಶಾಕ್‌ಗೆ ತತ್ತರಿಸಿದ್ದಾರೆ. ಪ್ರತಿ ಕೆ.ಜಿ ಬಾಳೆ ಹಣ್ಣಿನ ದರ ೯೦-೧೦೦ ರೂ.ಗೆ ಏರಿಕೆಯಾಗಿದೆ. ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನೂ ೬ ತಿಂಗಳು ಬಾಳೆ ಹಣ್ಣಿನ ದರ ಏರುಗತಿಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.
ಕಳೆದ ಎರಡು ವರ್ಷ ಕೋವಿಡ್-೧೯ ಬಿಕ್ಕಟ್ಟಿನ ಪರಿಣಾಮ ಮಾರುಕಟ್ಟೆ ಅಸ್ತವ್ಯಸ್ತವಾಗಿ ಬಾಳೆ ಹಣ್ಣಿನ ದರ ಕುಸಿದಿತ್ತು. ಇದೀಗ ಮಾರುಕಟ್ಟೆ ಪರಿಸ್ಥಿತಿ ಚೇತರಿಸಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದಿರುವುದರಿಂದ ದರ ಗಗನಕ್ಕೇರಿದೆ.
ಬಾಳೆ ಬೆಳೆಯುವವರ ಸಂಖ್ಯೆ ಇಳಿಕೆಯಾಗಿರುವುದರಿಂದ ಏಲಕ್ಕಿ ಬಾಳೆ ಹಣ್ಣಿನ ದರ ಗಗನಕ್ಕೇರಿದೆ. ಕಾಂಡ ಕೊರೆಯುವ ಹುಳದ ಬಾಧೆಯೂ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಹಲವಾರು ರೈತರು ಬಾಳೆ ಬೆಳೆಯುವುದನ್ನು ಕೈಬಿಟ್ಟಿದ್ದರು.