ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2022ರ ಜೂನ್ ಕೊನೆಯ ವಾರಾಂತ್ಯದ ವೇಳೆಗೆ ಒಟ್ಟು 25 ಕೋಟಿ ಪ್ರಯಾಣಿಕರಿಗೆ ಸೇವೆ ನೀಡಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ವಿಮಾನ ನಿಲ್ದಾಣವು 2008ರಲ್ಲಿ ಪ್ರಾರಂಭವಾದಾಗಿನಿಂದಲೂ ಈವರೆಗೆ ಇಪ್ಪತ್ತು ಲಕ್ಷ ಏರ್ ಟ್ರಾಫಿಕ್ ಚಲನೆ (ATM) ಸಾಧನೆ ಮಾಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ PPP ಮಾದರಿಯಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಈ ಸಾಧನೆಯನ್ನು ಮಾಡಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ಮೈಲುಗಲ್ಲೇ ಸಾಕ್ಷಿಯಾಗಿದೆ. 2018ರಲ್ಲಿ 3.23 ಕೋಟಿ, 2019ರಲ್ಲಿ 3.36 ಕೋಟಿ ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣ ಸೇವೆಯನ್ನು ನೀಡಿದೆ. ಇದಲ್ಲದೆ, ಕೆಂಪೇಗೌಡ ವಿಮಾನ ನಿಲ್ದಾಣ 2೦ ಲಕ್ಷ ಏರ್ ಟ್ರಾಫಿಕ್ ಮೂವ್‌ಮೆಂಟ್‌ಗಳ ಮೈಲುಗಲ್ಲನ್ನು ಸಾಧಿಸಿದೆ. ಇದು ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ದಾಖಲೆ ಸಾಧಿಸಿದ ವಿಮಾನ ನಿಲ್ದಾಣವಾಗಿದೆ ಎಂದು ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.
ʻʻನಮ್ಮ ಏರ್‌ಲೈನ್ ಪಾಲುದಾರರು ಈ ಸ್ಥಿರವಾದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಪ್ರಯಾಣಿಕರಿಗೆ ವಿಮಾನ ನಿಲ್ದಾಣವು ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನೀಡುತ್ತದೆ. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಪ್ರಾರಂಭಿಸಲಾದ 80 ಲಾಂಜ್‌ಗಳು ಮತ್ತು ಟ್ರಾನ್ಸಿಟ್ ಹೋಟೆಲ್‌ಗಳನ್ನೂ ನೋಡಬಹುದು. ಅತ್ಯಾಧುನಿಕ ಟರ್ಮಿನಲ್ 2 ಅನ್ನು ತೆರೆಯುವುದರೊಂದಿಗೆ, ವಿಮಾನ ನಿಲ್ದಾಣವು ‘ಭಾರತಕ್ಕೆ ಹೊಸ ಗೇಟ್‌ವೇ’ ಆಗುವ ಗುರಿಯನ್ನು ಹೊಂದಿದೆʼʼ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ತಿಳಿಸಿದೆ.
ಬೆಂಗಳೂರು ವಿಮಾನ ನಿಲ್ದಾಣವನ್ನು 2022ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಪ್ರಯಾಣಿಕರು ಇತ್ತೀಚೆಗೆ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ| ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಸಹಕರಿಸಲು 10 ರೊಬೊಟ್‌ಗಳು ರೆಡಿ