Site icon Vistara News

Bangalore Bandh: ತಮಿಳುನಾಡು ಬಸ್‌ಗಳು ಗಡಿ ಭಾಗದಿಂದಲೇ ವಾಪಸ್‌, ಬಾಯ್‌ ಬಾಯ್‌ ಎಂದ ಕಂಡಕ್ಟರ್

Bangalore bandh Attibele border

ಆನೇಕಲ್‌ ಬೆಂಗಳೂರು: ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು (Cauvery water Dispute) ಎಂದು ಆಗ್ರಹಿಸಿ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ, ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಬಸ್‌ಗಳು (Tamilnadu-Bangalore bus) ಗಡಿ ಭಾಗದಿಂದಲೇ ಹಿಂದಕ್ಕೆ ಮರಳುತ್ತಿವೆ (Buses returning from border).

ತಮಿಳುನಾಡು-ಕರ್ನಾಟಕ ಗಡಿಭಾಗವಾದ ಅತ್ತಿಬೆಲೆಯಲ್ಲಿ (Attibele Border) ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡು ಕಡೆಯಿಂದ ಬರುತ್ತಿರುವ ಬಸ್‌ಗಳು ಅತ್ತಿ ಬೆಲೆಯ ಗಡಿ ಭಾಗದಿಂದಲೆ ವಾಪಸ್‌ ತೆರಳುತ್ತಿವೆ. ಹೀಗೆ ತಿರುಗಿಸಿಕೊಂಡು ಹೋಗುವಾಗ ತಮಿಳುನಾಡು ಬಸ್ಸಿನ ಕಂಡಕ್ಟರ್‌ ಅವರು ಒಬ್ಬರು ಕರ್ನಾಟಕದವರ ಕಡೆಗೆ ಕೈ ಬೀಸಿ ಬಾಯ್‌ ಬಾಯ್‌ ಎನ್ನುತ್ತಲೇ ಶುಭ ಹಾರೈಸಿದ್ದು ಕಂಡುಬಂತು.

ತಮಿಳುನಾಡಿಗೆ ಟರ್ನ್‌ ತೆಗೆದುಕೊಳ್ಳುತ್ತಿರುವ ಬಸ್.‌ ಬಾಯ್‌ ಎನ್ನುತ್ತಿರುವ ಕಂಡಕ್ಟರ್‌

ತಮಿಳುನಾಡಿನಿಂದ ಬರುವ ಬಸ್ ಗಳು ಗಡಿಭಾಗದವರೆಗೆ ಪ್ರಯಾಣಿಕರನ್ನ ಬಿಟ್ಟು ಅಲ್ಲಿಂದ ವಾಪಸ್ ಆದರೆ, ಇತ್ತ ಅತ್ತಿಬೆಲೆಯಿಂದ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ಬೆಂಗಳೂರಿನತ್ತ ಬರುತ್ತಿದ್ದಾರೆ.

ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳು ಸಹ ಅತ್ತಿಬೆಲೆ ಗಡಿಭಾಗದವರೆಗೆ ಮಾತ್ರ ಸಂಚಾರ ಮಾಡುತ್ತಿವೆ. ಅಲ್ಲಿಂದ ಆಚೆಗೆ ತಮಿಳುನಾಡಿನ ಬಸ್‌ಗಳನ್ನೇ ಆಶ್ರಯಿಸುತ್ತಿದ್ದಾರೆ.

ಇದನ್ನೂ ಓದಿ : Bangalore Bandh : ಬೆಂಗಳೂರಿನ ಈ ಭಾಗದಲ್ಲಿ ಪ್ರತಿಭಟನೆ ಜೋರು, ಆ ಕಡೆ ಹೋಗುವಾಗ ಹುಷಾರು

ಹೇಗೆ ನಡೆಯುತ್ತಿದೆ ಬೆಂಗಳೂರು ಬಂದ್‌?

ಕಾವರಿ ನೀರಿನ ವಿಚಾರದಲ್ಲಿ (Cauvery protest) ಕನ್ನಡಿಗರಿಗೆ ಆಗಿರುವ ಅನ್ಯಾಯ ಹಾಗೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿದ್ದು, ಬೆಂಗಳೂರು ಬಂದ್‌ (Bangalore Bandh) ಇಂದು ಮುಂಜಾನೆಯಿಂದ ಆರಂಭವಾಗಿದೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮತ್ತು ಇತರ ಸಂಘಟನೆಗಳು ಇಂದು (ಸೆ.26) ಬೆಂಗಳೂರು ಬಂದ್ (Bangalore Bandh) ಆಚರಿಸುತ್ತಿದೆ. ಈ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ ಹಾಗೂ ಜೆಡಿಎಸ್‌ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಪ್ರತಿಭಟನೆಯ ಕಾವು ಜೋರಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಬಂದ್ ಆಚರಿಸಲಾಗುತ್ತಿದ್ದು, ಸಂಜೆ 6 ಗಂಟೆಯವರೆಗೂ ಬಂದ್ ಮುಂದುವರಿಯಲಿದೆ.

ಮೆಟ್ರೋ ಎಂದಿನಂತೆ ಕಾರ್ಯಾಚರಿಸಿತು. ಮೆಟ್ರೋದ ಎಲ್ಲ ಲೈನ್‌ಗಳೂ ಪೂರ್ಣವಾಗಿ ಕಾರ್ಯಾಚರಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಬಸ್‌ಗಳು ಎಂದಿನಂತೆ ಸಂಚಾರಕ್ಕೆ ಸಿದ್ಧಚಾಗಿದ್ದರೂ ಜನ ಬೀದಿಗಿಳಿಯಲಿಲ್ಲ. ಸದ್ಯ ಬಸ್‌ಗಳ ಸಂಖ್ಯೆ ಇಳಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇವನಹಳ್ಳಿ ವಿಮಾನ ನಿಲ್ದಾಣ

ಅತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಸಂದಣಿ ತುಂಬಿ ತುಳುಕಿತು. ಮಧ್ಯಾಹ್ನ ಹಾಗೂ ಸಂಜೆ ವಿಮಾನ ಪ್ರಯಾಣದ ಸಮಯ ಹೊಂದಿದ್ದವರು ಕೂಡ, ಬಂದ್‌ ಜೋರಾದರೆ ಎಂಬ ಆತಂಕದಿಂದ ಮುಂಜಾನೆ ಆರು ಗಂಟೆಗೇ ನಿಲ್ದಾಣಕ್ಕೆ ಧಾವಿಸಿ ಬೀಡುಬಿಟ್ಟರು. ಯಾವುದೇ ವಿಮಾನ ಹಾರಾಟ ವ್ಯತ್ಯಯವಾಗಿಲ್ಲ. ಟ್ಯಾಕ್ಸಿ ಹಾಗೂ ಕ್ಯಾಬ್‌ಗಳು ಕಾರ್ಯಾಚರಿಸುತ್ತಿವೆ.

ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕೆಆರ್ ಮಾರ್ಕೆಟ್ ಇಂದು ಬಿಕೋ ಎನ್ನುತ್ತಿದೆ. ವಿರಳ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದೆ. ಬೀದಿ ಬದಿ ವ್ಯಾಪಾರಿಗಳಿಗೆ ಬಂದ್ ಬಿಸಿ ತಟ್ಟಿದ್ದು, ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಬೀದಿಬದಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ಹೂ, ಸೊಪ್ಪು, ತರಕಾರಿ ವ್ಯಾಪಾರ ಕೂಡ ಡಲ್ ಆಗಿದೆ.

bangalore Bandh kuruburu deatained

ಫ್ರೀಡಂ ಪಾರ್ಕ್‌ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಆಯೋಜನೆಯಾಗಿದ್ದು, ಅವರನ್ನು ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನಾಕಾರರಿಂದ ಅರೆ ಬೆತ್ತಲೆ ಪ್ರತಿಭಟನೆ ನಡೆಯಿತು. ಫ್ರೀಡಂ ಪಾರ್ಕ್‌ಗೆ ಖಾಲಿ ಬಿಂದಿಗೆ ಹಿಡಿದು ಬಂದ ಪ್ರತಿಭಟನಾಕಾರರು ಅರೆ ಬೆತ್ತಲೆಯಾಗಿ ಪ್ರತಿಭಟಿಸಿದರು. ಫ್ರೀಡಂ ಪಾರ್ಕ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾವೇರಿ ಹೋರಾಟ ಒಕ್ಕೂಟದಿಂದ ಟೌನ್ ಹಾಲ್‌ಗೆ ರ್ಯಾಲಿ ಏರ್ಪಡಿಸಲಾಗಿದ್ದು, ಅಲ್ಲಿಯೂ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಹೋರಾಟಗಾರರು ಬಾಪೂಜಿನಗರ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

Exit mobile version