Site icon Vistara News

Bangalore-Chennai Train : ನಿಜ, ಇನ್ನು ಕೇವಲ 4 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು!

Soon Bengaluru To Coimbatore Vande bharat Express train

ಬೆಂಗಳೂರು: ನೀವು ಮಧ್ಯಾಹ್ನ 2.50ಕ್ಕೆ ಬೆಂಗಳೂರಿನಿಂದ ಹೊರಟರೆ ಸಂಜೆ 6.50ಕ್ಕೆ ಚೆನ್ನೈ ತಲುಪಿಬಿಡಬಹುದು ಅಂದರೆ ನಂಬ್ತೀರಾ? ಮೊನ್ನೆ ಮೊನ್ನೆವರೆಗೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲಿಕ್ಕೇ ನಾಲ್ಕು ಗಂಟೆ ಬೇಕಿತ್ತು. ಹಾಗಿರುವಾಗ ಇದು ಹೇಗೆ ಸಾಧ್ಯ? ಬೆಂಗಳೂರು-ಚೆನ್ನೈ (Bangalore to Chennai) ನಡುವಿನ 360 ಕಿ.ಮೀ. ದೂರವನ್ನು ಇಷ್ಟು ತ್ವರಿತವಾಗಿ ಹೇಗೆ ತಲುಪಬಹುದು ಅಂತೀರಾ? ಇದು ಸಾಧ್ಯವಾಗಿದ್ದು ನಮ್ಮ ರೈಲ್ವೇ ಇಲಾಖೆಯ (Railway department) ಸೇವೆಯ (Bangalore-Chennai Train) ಮೂಲಕ.

ಎಲ್ಲರಿಗೂ ಗೊತ್ತಿರುವವಂತೆ ಬೆಂಗಳೂರಿನಿಂದ ಈಗ ಮಧ್ಯಾಹ್ನ 2.50ಕ್ಕೆ ಹೊರಡುತ್ತಲ್ವಾ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಅದು ಇನ್ನು ಮುಂದೆ ಸಂಜೆ 6.50ಕ್ಕೆ ಚೆನ್ನೈ ಸೆಂಟ್ರಲ್‌ ಸ್ಟೇಷನ್‌ ತಲುಪಲಿದೆ. ಇದು ಸಾಧ್ಯವಾಗಿದ್ದು ಅರಕ್ಕೋಣಂ ಮತ್ತು ಜೋಲಾರ್‌ ಪೇಟೆ ನಡುವಿನ ವೇಗ ಮಿತಿ ಹೆಚ್ಚಳ ಮಾಡಿದ್ದರಿಂದ.

ನೈಋತ್ಯ ರೈಲ್ವೆಯು ಈ ಮಹತ್ವದ ಉಪಕ್ರಮ ನಡೆಸಿದೆ. ಅರಕ್ಕೋಣಂ ಮತ್ತು ಜೋಲಾರ್‌ಪೇಟೆ ನಡುವಿನ ವೇಗದ ಮಿತಿ ಈಗ ಗಂಟೆಗೆ 110 ಕಿಲೋಮೀಟರ್‌ ಇದೆ. ಇದನ್ನು ಇನ್ನು ಗಂಟೆಗೆ 130 ಕಿಮೀಗೆ ಏರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ಬೆಂಗಳೂರು ಮತ್ತು ಚೆನ್ನೈ ನಡುವಿನ ರೈಲುಗಳ ವೇಗ ಹೆಚ್ಚಲಿದೆ.

ಟ್ರ್ಯಾಕ್‌ ಮತ್ತು ಸಿಗ್ನಲ್‌ ನವೀಕರಣದಿಂದ ಲಾಭ

ಚೆನ್ನೈ-ಅರಕ್ಕೋಣಂ ಮಾರ್ಗವು ಟ್ರ್ಯಾಕ್ ಮತ್ತು ಸಿಗ್ನಲ್ ನವೀಕರಣದ ವೇಗಕ್ಕೆ ಹೊಂದಿಕೊಂಡಿದ್ದು, ಇದೀಗ ಅರಕ್ಕೋಣಂ ಮತ್ತು ಜೋಲಾರ್‌ ಪೇಟೆ ನಡುವಿನ ವೇಗ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲೂ ರೈಲು 130 ಕಿ.ಮೀ. ವೇಗದಲ್ಲಿ ಸಾಗಲಿದೆ ಎಂದು ಕಾರ್ಯಾಚರಣೆ ಇಲಾಖೆ ಮತ್ತು ರೈಲು ಚಾಲಕರಿಗಾಗಿ ಬಿಡುಗಡೆ ಮಾಡಲಾದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈಗ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್‌ ರೈಲು ಪ್ರಯಾಣಕ್ಕೆ ಸುಮಾರು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಈಗ ವೇಗ ಹೆಚ್ಚಳ ಅವಕಾಶದಿಂದ ಪ್ರಯಾಣ ಅವಧಿ ನಾಲ್ಕು ಗಂಟೆಗೆ ಇಳಿಯಲಿದೆ. ಇದಷ್ಟೇ ಅಲ್ಲ, ಶತಾಬ್ದಿ ಮತ್ತು ಬೃಂದಾವನ್‌ ಎಕ್ಸ್‌ಪ್ರೆಸ್‌ ರೈಲಯಗಳ ಪ್ರಯಾಣದ ಅವಧಿಯೂ ಕಡಿಮೆ ಆಗಲಿದೆ.

ಬರಲಿವೆ ಎಲ್‌ಎಚ್‌ಬಿ ಕೋಚ್‌ಗಳು

ಈಗ ಹೆಚ್ಚಿಸಿದ ವೇಳೆ ಕೆಲವು ರೈಲುಗಳಿಗೆ ಮಾತ್ರ ಅನ್ವಯವಾಗುತ್ತದೆ. ಯಾಕೆಂದರೆ, ಯಾವ ರೈಲುಗಳಲ್ಲಿ ಎಲ್‌ಎಚ್‌ಬಿ ಕೋಚ್‌ಗಳು ಇರುತ್ತವೋ ಅವು ಮಾತ್ರ ಗಂಟೆಗೆ 130 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ಐಸಿಎಫ್‌ ವಿನ್ಯಾಸದ ಕೋಚ್‌ಗಳಿಗೆ 110 ಕಿ.ಮೀ/ಗಂಟೆ ನಿರ್ಬಂಧವಿದೆ. ಆದರೆ, ಈಗ ಹೆಚ್ಚಿನ ರೈಲುಗಳಿಗೆ ಎಲ್‌ಎಚ್‌ಬಿ ಕೋಚ್‌ಗಳು ಇವೆ. ಹೀಗಾಗಿ ವೇಗದ ವೇಗವರ್ಧನೆಯು ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ, ಕೊಚ್ಚಿ, ಕೋಝಿಕ್ಕೋಡ್, ಮಂಗಳೂರು ಮತ್ತು ಮುಂಬೈಯಂತಹ ಸ್ಥಳಗಳಿಗೆ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ.

ಇದನ್ನೂ ಓದಿ: Vande Bharat Express: ವಂದೇ ಭಾರತ್‌ ರೈಲು ದುಬಾರಿ ಎಂಬ ಬೇಸರ ಬೇಡ; ಸಿಗಲಿದೆ ಇಷ್ಟು ಡಿಸ್ಕೌಂಟ್

ಏನೇನು ಲಾಭ?

  1. ಬೆಂಗಳೂರಿನಿಂದ ಚೆನ್ನೈಗೆ, ಚೆನ್ನೈನಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಮಯ ಉಳಿತಾಯವಾಗುತ್ತದೆ.
  2. ರೈಲು ಪ್ರಯಾಣ ದೀರ್ಘಾವಧಿ ಎಂದು ಮೂಗು ಮುರಿಯಬೇಕಾಗಿಲ್ಲ. ವಂದೇ ಭಾರತ್‌ ರೈಲುಗಳಂತೂ ಇನ್ನೂ ಸುಖಕರ ಪ್ರಯಾಣ ಒದಗಿಸುತ್ತವೆ.
  3. ಮುಂದಿನ ದಿನಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಾದರೆ ಕೆಲವರು ನಿತ್ಯ ಪ್ರಯಾಣ ಮಾಡಲೂಬಹುದು.
  4. ಚೆನ್ನೈ-ಬೆಂಗಳೂರು ನಡುವಿನ ಪ್ರಯಾಣ ಮಾತ್ರವಲ್ಲ, ಅದರ ನಡುವಿನ ನಿಲ್ದಾಣಗಳ ಪ್ರಯಾಣ ಅವಧಿಯೂ ಕಡಿಮೆ ಆಗುತ್ತದೆ. ಇದರಿಂದ ಅಲ್ಲಿನ ನಿತ್ಯ ಸಂಚಾರಿಗಳಿಗೆ ಭಾರಿ ಅನುಕೂಲವಿದೆ.
  5. ರೈಲು ಮಾರ್ಗ ಬಲವಾದಷ್ಟು ಇನ್ನಷ್ಟು ಹೊಸ ಮಾದರಿಯ ರೈಲುಗಳಿಗೆ, ವೇಗದ ಚಾಲನೆಗ ಅವಕಾಶ ದೊರೆಯುತ್ತದೆ.

Exit mobile version