ಬೆಂಗಳೂರು: ನಗರದ ಸಂಚಾರ ದಟ್ಟಣೆ (Bangalore Traffic) ಇಲ್ಲಿನ ನಾಗರಿಕರಿಗೆ ಸವಾಲಿನ ಸಂಗತಿ. ನಿಗದಿ ಮಾಡಿದ ಸಮಯಕ್ಕೆ ಯಾವ ಕಾರಣಕ್ಕೂ ತಲುಪಲು ಈ ಟ್ರಾಫಿಕ್ನಿಂದಾಗಿ ಸಾಧ್ಯವಾಗುತ್ತಿಲ್ಲ. ಬಂಪರ್ ಟು ಬಂಪರ್ ವಾಹನಗಳ ಸಂಚಾರದಿಂದ ಉಂಟಾಗುವ ದಟ್ಟಣೆ ನಿವಾರಣೆ ಮಾಡುವುದಕ್ಕೆ ಟ್ರಾಫಿಕ್ ಪೊಲೀಸರು ಮಾಡುವ ಸಾಹಸಗಳೆಲ್ಲವೂ ಕೈಗೊಡುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಈ ಸುಂದರ ನಗರ ವಿಶ್ವದ ಗರಿಷ್ಠ ಟ್ರಾಫಿಕ್ ಇರುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಜಿಯೊಲೊಕೇಷನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಕಂಪನಿಯಾಗಿರುವ ಟಾಮ್ ಟಾಮ್ ಇತ್ತೀಚೆಗೆ ಜಾಗತಿಕವಾಗಿ ನಡೆಸಿದ ಸಮೀಕ್ಷೆಯ ವರದಿ ಬಿಡುಗಡೆ ಮಾಡಿದೆ. ಅದರ ವರದಿಯಂತೆ ಬೆಂಗಳೂರಿಗೆ ಎರಡನೇ ಸ್ಥಾನವಿದೆ. ಈ ನಗರದಲ್ಲಿ 10 ಕಿಲೋಮೀಟರ್ ಪ್ರಯಾಣ ಮಾಡುವುದಕ್ಕೆ 28 ನಿಮಿಷ 9 ಸೆಕೆಂಡ್ಗಳು ಬೇಕಾಗಿದೆ. ಈ ಪಟ್ಟಿಯಲ್ಲಿ ಬ್ರಿಟನ್ನ ಲಂಡನ್ ನಗರಕ್ಕೆ ಮೊದಲ ಸ್ಥಾನವಿದೆ. ಅದರಲ್ಲಿ ಇದೇ ಅಂತರದಲ್ಲಿ ಪ್ರಯಾಣ ಮಾಡುವುದಕ್ಕೆ 35 ನಿಮಿಷಗಳು ಬೇಕಾಗಿದೆ.
ಐರ್ಲೆಂಡ್ನ ರಾಜಧಾನಿ ಡಬ್ಲಿಂಗ್ ಮೂರನೇ ಸ್ಥಾನ ಪಡೆದುಕೊಂಡರೆ, ಜಪಾನ್ ಸಪ್ಪರೊ ನಾಲ್ಕನೇ ಸ್ಥಾನದಲ್ಲಿದೆ. ಇಟಲಿಯ ಮಿಲಾನ್ ಐದನೇ ಸ್ಥಾನ ಪಡೆದಿದೆ. ಈ ಸಮೀಕ್ಷೆಯಲ್ಲಿ ನಿರ್ದಿಷ್ಟ ಅಂತರವನ್ನು ತಲುಪಲು ಬೇಕಾಗಿರುವ ಪೆಟ್ರೋಲ್, ಬ್ಯಾಟರಿ, ವಾಹನಗಳು ಉಗುಳುವ ಹೊಗೆ, ನಷ್ಟವಾಗುವ ಸಮಯ ಇತ್ಯಾದಿ ಸಂಗತಿಗಳನ್ನು ಪ್ರತ್ಯೇಕವಾಗಿ ಸಮೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರ ಎಲ್ಲ ವಿಭಾಗಗಳಲ್ಲಿ ಟಾಪ್ 5ರಲ್ಲಿದೆ.
ಇದನ್ನೂ ಓದಿ : Traffic Rules : ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡ 50% ಕಡಿತ ಆಫರ್ ಫೆಬ್ರವರಿ 28ರವರೆಗೆ ವಿಸ್ತರಣೆ, ನಾಳೆ ಆದೇಶ
ಡ್ಯಾಶ್ ಕಾರ್ ನೇವಿಗೇಷನ್, ಸ್ಮಾರ್ಟ್ಫೋನ್, ಪರ್ಸನಲ್ ನೇವಿಗೇಷನ್, ಟೆಲಿಮ್ಯಾಟಿಕ್ಸ್ ಸಿಸ್ಟಮ್ ಸೇರಿದಂತೆ ಹಲವು ಡಿವೈಸ್ಗಳನ್ನು ಟಾಮ್ ಟಾಮ್ ಸಂಸ್ಥೆ ಸಮೀಕ್ಷೆಗೆ ಬಳಿಸಿದೆ. ಅದೇ ರೀತಿ 61 ಶತಕೋಟಿ ಜಿಪಿಎಸ್ ಡಿವೈಡ್ಗಳ ಲೆಕ್ಕಾಚಾರವನ್ನೂ ಬಳಸಿಕೊಂಡಿದೆ. 3.5 ಶತಕೋಟಿ ಕಿಲೋಮೀಟರ್ ಗಣನೆಗೆ ತೆಗೆದುಕೊಳ್ಳಲಾಗಿದೆ.