ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆಯನ್ನು ರಾಜಧಾನಿಯಲ್ಲಿ ಆಯೋಜಿಸಿ ಜಗತ್ತಿನ ಗಮನವನ್ನು ಸೆಳೆಯುವ ಮಹಾಪ್ರಯತ್ನವಾದ ಬೆಂಗಳೂರು ಕಂಬಳವನ್ನು (Bangalore Kambala) ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶನಿವಾರ ಸಂಜೆ ಅಧಿಕೃತವಾಗಿ ಉದ್ಘಾಟಿಸಿದರು. ಕಂಬಳದ ವೈಭವವನ್ನೂ ಕಣ್ತುಂಬಿಕೊಂಡ ಅವರು ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಕಂಬಳ ನಡೆಸಿ ಎಂದು ಸೂಚಿಸಿದರು. ಅದರ ನಡುವೆ ಒಂದು ಕೋಣ ಸಾಕಲು 15 ಲಕ್ಷ ರೂ. ಬೇಕಾ ಎಂದು ಅಚ್ಚರಿ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಾನಪದ ಕಲೆಯಾಗಿರುವ ಕಂಬಳವನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವ ಅಶೋಕ್ ರೈ ಅವರ ನೇತೃತ್ವದ ತಂಡದ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಸಿದ್ದರಾಮಯ್ಯ.
ಇಷ್ಟೊಂದು ಜನ ಬರುತ್ತಾರೆ ಅಂದುಕೊಂಡಿರಲಿಲ್ಲ
ಅಶೋಕ್ ರೈ, ಗುರುಕಿರಣ್ ಸ್ನೇಹಿತರು ಬಂದಾಗ ಇಷ್ಟೊಂದು ಜನ ಕಂಬಳ ನೋಡಲು ಬರ್ತಾರೆ ಅಂತ ತಿಳಿದಿರಲಿಲ್ಲ. ನಾನು ಅವರಿಗೆ ಹೇಳಿದೆ, ಕಂಬಳ ಕರಾವಳಿ ಪ್ರದೇಶದ ಕ್ರೀಡೆ. ಜಾನಪದ ಕಲೆಯನ್ನು ಬೆಂಗಳೂರಿನಲ್ಲಿ ಯಾಕೆ ಮಾಡ್ತಿದ್ದಿರಿ ಅಂತ. ಆಗ ಅಶೋಕ್ ರೈ ಹೇಳಿದ್ರು, ಬೆಂಗಳೂರಿನಲ್ಲಿ ಲಕ್ಷಾಂತರ ಜನರಿದ್ದಾರೆ. ನೀವು ಬನ್ನಿ, ಎಷ್ಟು ಜನರ ಬರ್ತಾರೆ ನೋಡಿ., ಬೆಂಗಳೂರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಿಂದ ಬರ್ತಾರೆ ಅಂದರು. ಇವತ್ತು ನನಗೆ ಬಹಳ ಆಶ್ಚರ್ಯ ಆಯ್ತು. ಬಹಳ ಜನ ಈ ಕ್ರೀಡೆ ನೋಡಲು ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ʻʻನಾನು ಹಿಂದೆ ಮೂಡುಬಿದ್ರೆಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಬಂಟ್ವಾಳಕ್ಕೂ ಹೋಗಿದ್ದೆʼʼ ಎಂದು ನೆನಪಿಸಿಕೊಂಡರು.
ಕೋಣಕ್ಕೆ ಖರ್ಚೆಷ್ಟು 1.5 ಲಕ್ಷಾನಾ ಎಂದು ಕೇಳಿದ ಸಿಎಂ
ʻʻಈಗ ಕೋಣ ಸಾಕೋದು ಬಹಳ ಕಷ್ಟ. ಒಂದು ಕೋಣ ಸಾಕೋಕೆ ಒಂದುವರೆ ಲಕ್ಷ ರೂ. ಆಗುತ್ತದೆʼʼʼ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆಗ ಆಯೋಜಕರು, ಒಂದುವರೆ ಲಕ್ಷ ಅಲ್ಲ, 15 ಲಕ್ಷ ರೂ. ಎಂದು ಕರೆಕ್ಷನ್ ಹಾಕಿದರು. ಆಗ ಸಿಎಂ ಸಿದ್ದರಾಮಯ್ಯ ಅವರು, ಹೌದಾ, ಶ್ರೀಮಂತರ ಕ್ರೀಡೆ ಆಗೋಯ್ತಲ್ಲಯ್ಯ ಎಂದು ನಕ್ಕರು.
ʻʻಕಂಬಳದಲ್ಲಿ ಓಡೋನಿಗೆ ಶಕ್ತಿ ಇರಬೇಕು. ಓಡೋನು ಬಲಿಷ್ಠನಾಗಿದ್ದರೆ ಮಾತ್ರ ಓಡಲು ಸಾಧ್ಯ. ನಾನು ನೋಡ್ತಾ ಇದ್ದ ಹಾಗೇ ಅನೇಕರು ಬಿದ್ದು ಹೋದ್ರುʼʼ ಎಂದು ಹೇಳಿದ ಸಿದ್ದರಾಮಯ್ಯ, ಕಂಬಳ ಕ್ರೀಡೆಯನ್ನು ಇಲ್ಲಿಗೆ ತಂದು ಅನೇಕರು ಸೇರಿ ಮಾಡಿದ್ದೀರಿ. ಪ್ರತಿ ವರ್ಷ ಮುಂದುವರಿಸುವ ಕೆಲಸ ಮಾಡಿ, ಒಂದೇ ಸಾರಿ ಮಾಡಿ ನಿಲ್ಲಿಸಬೇಡಿʼʼ ಎಂದು ಸೂಚಿಸಿದರು.
ʻʻವಿಶೇಷವಾಗಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಾಡಿʼʼ ಅಂತ ಸೂಚಿಸಿದ ಸಿಎಂ, ಕರಾವಳಿ, ಹೊರಗಿನ ಜನ, ಬೆಂಗಳೂರು ಜನರೂ ಬಂದು ನೋಡ್ತಾರೆ ಎಂದರು.
ನಮ್ಮ ಸರ್ಕಾರದಲ್ಲೇ ಸುಗ್ರೀವಾಜ್ಞೆ ಮಾಡಿದ್ದೆವು
ಸುಪ್ರೀಂಕೋರ್ಟನ್ನು ಜಲ್ಲಿಕಟ್ಟನ್ನು ನಿಷೇಧಿಸಿದ ಸಂದರ್ಭದಲ್ಲಿ ಪ್ರಾಣಿ ದಯಾ ಸಂಘ ಕಂಬಳವನ್ನೂ ಸೇರ್ಪಡೆಗೊಳಿಸಲು ಪಟ್ಟು ಹಿಡಿದು ನಿಷೇಧಿಸಿತ್ತು. ಆಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕಂಬಳಕ್ಕೆ ಬಲ ತುಂಬಿತ್ತು. ಅಂದು ಈ ರೀತಿ ಕಂಬಳವನ್ನು ಬೆಂಬಲಿಸಿದ್ದು ಸಿಎಂ ಸಿದ್ದರಾಮಯ್ಯ ಅವರು. ಕಂಬಳಕ್ಕೆ ಬಂದ ವೇಳೆ ಈ ವಿಚಾರವನ್ನು ಅವರು ನೆನಪು ಮಾಡಿಕೊಂಡರು.
ʻʻಸ್ಪೇನ್ ನಲ್ಲಿ ಗೂಳಿ ಹಿಡಿಯುವ ಕ್ರೀಡೆ ನಡೆಯುತ್ತದೆ. ಇದು ಇದು ಅಷ್ಟೇನೂ ಕೆಟ್ಟ ಕ್ರೀಡೆ ಅಲ್ಲ. ಹಾಗಾಗಿ ಸುಗ್ರೀವಾಜ್ಞೆ ತಂದು ರಕ್ಷಿಸುವ ಕೆಲಸ ಮಾಡಿದ್ದೇನೆʼʼ ಎಂದರು.
ಬೆಂಗಳೂರಿನಲ್ಲಿ ತುಳು ಸಮುದಾಯ ಭವನ ನಿರ್ಮಿಸಲು ಸೈಟ್ ನೀಡಲಾಗುವುದು ಎಂದು ಹೇಳಿದ ಅವರು, ತುಳು ಭಾಷೆಗೆ ಮಾನ್ಯತೆ ನೀಡುವ ವಿಚಾರವನ್ನೂ ಪರಿಶೀಲಿಸುವುದಾಗಿ ಹೇಳಿದರು.
ಇದನ್ನೂ ಓದಿ: Bangalore Kambala : ಬಂದಿದ್ದಾರೆ ಉಸೇನ್ ಬೋಲ್ಟ್ ಮೀರಿಸುವ ರನ್ನರ್ಸ್ ; ಬರೀತಾರಾ ಹೊಸ ರೆಕಾರ್ಡ್?
ಇಬ್ಬರು ಕರಾವಳಿಯವರು ಸೇರಿದ್ರೆ ತುಳು ಮಾತಾಡ್ತಾರೆ!
ʻʻಇಬ್ಬರು ಕರಾವಳಿಯವರು ಸೇರಿದ್ರೆ ಅವರ ಮಾತೃಭಾಷೆ ಮಾತಾಡ್ತಾರೆ. ನಾವು ಕಣ್ಣು ಕಣ್ಣು ಬಿಟ್ಟು ನೋಡಬೇಕು, ಹಾಗಾಗಿದೆ. ಬೇರೆ ಯಾವುದೇ ಭಾಷೆ ಬಂದ್ರೂ ಮಾತಾಡಲ್ಲʼʼ ಎಂದು ಹೇಳಿದ ಸಿದ್ದರಾಮಯ್ಯ, ತುಳುಗೆ ಲಿಪಿ ಇದೆಯಾ ಅಂತ ಕೇಳಿದರು. ಆಗ ಜನರು ಹೌದು ಹೌದು ಎಂದರು.
ತುಳುವಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಮಾತಾಡ್ತೀನಿ ಎಂದರು ಸಿಎಂ. ಹಿಂದೆ ನಿಮ್ಮವರೇ ಕನ್ನಡ ಸಂಸ್ಕೃತಿ ಸಚಿವರಿದ್ರು, ಅವರು ಮಾಡಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಸುನಿಲ್ ಕುಮಾರ್‌ಗೆ ಟಾಂಗ್ ನೀಡಿದರು. ತುಳುಗೆ ಮಾನ್ಯತೆ ಸಿಗುವಂತೆ ಮಾಡ್ತೀವಿ ಅಂತ ಭರವಸೆ ನೀಡಿದರು.
ಕರಾವಳಿಯ ಚುರುಮುರಿ ಸವಿದ ಸಿದ್ದರಾಮಯ್ಯ
ಈ ನಡುವೆ, ಕರಾವಳಿಯ ಹಿರಿಯ ಮಹಿಳೆಯರು ತಯಾರಿಸಿದ ಚುರುಮುರಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಯಿತು. ಮಹಿಳೆಯರು ಸಿಎಂ ಸಿದ್ದರಾಮಯ್ಯ ಅವರಿಗೆ ತಂದು ಕೊಟ್ಟು ಕಾಲಿಗೆ ಬಿದ್ದರು. ಸ್ಪೀಕರ್ ಯು.ಟಿ. ಖಾದರ್ ಅವರು ಅವರನ್ನೆಲ್ಲ ಪಕ್ಕದಲ್ಲಿ ಕೂರಿಸಿ ಫೋಟೊ ತೆಗೆಸಿದರು.