ಮಂಗಳೂರು/ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace Grounds) ನವೆಂಬರ್ 25 ಮತ್ತು 26ರಂದು ನಡೆಯಲಿರುವ ಬೆಂಗಳೂರು ಕಂಬಳದ (Bangalore Kambala) ಸಂಭ್ರಮ ಆಗಲೇ ಶುರುವಾಗಿದೆ. ಒಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಸುಮಾರು 150 ಜೋಡಿ ಕೋಣಗಳ (150 Pair of Buffallos) ವೈಭವದ ಮೆರವಣಿಗೆ ರಾಜಧಾನಿ ಕಡೆಗೆ ಶುರುವಾಗಿದ್ದರೆ, ಇತ್ತ ಬೆಂಗಳೂರಿನ ಮೈದಾನದಲ್ಲಿ ಗುರುವಾರ ಕುದಿ ಕಂಬಳ (Kudi Kambala) ನಡೆಯಿತು.
ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಉಪ್ಪಿನಂಗಡಿಯಿಂದ ಸುಮಾರು 150ರಷ್ಟು ಲಾರಿಗಳಲ್ಲಿ ಕಂಬಳದ ಕೋಣಗಳನ್ನು ಹೊರಡಿಸಲಾಯಿತು. ಕೋಣಗಳ ಜತೆಗೆ ಅವುಗಳ ಮಾಲೀಕರು ಮತ್ತು ಪರಿಚಾರಕರ ದಂಡು ಕೂಡಾ ಹೊರಟಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಾನಾ ಭಾಗಗಳಿಂದ ಬಂದ ಕೋಣಗಳನ್ನು ಉಪ್ಪಿನಂಗಡಿ ಪದವಿ ಕಾಲೇಜು ಮೈದಾನದಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ತುಳುನಾಡಿನ ಧ್ವಜ ನಿಶಾನೆ ತೋರಿಸಿ ಕೋಣಗಳನ್ನು ಬೆಂಗಳೂರಿಗೆ ಬೀಳ್ಕೊಡಲಾಯಿತು. ಕಂಬಳದಲ್ಲಿ ಪಾಲ್ಗೊಳ್ಳುವ ಎಲ್ಲಾ ಕೋಣಗಳಿಗೆ ಪಶುಸಂಗೋಪನಾ ಇಲಾಖೆ ವೈದ್ಯರಿಂದ ದೃಢೀಕರಣ ಪತ್ರವನ್ನು ನೀಡಲಾಯತು. ಕೋಣಗಳಿಗೆ ಬೇಕಾದ ನೀರನ್ನು ಕೂಡಾ ಕರಾವಳಿಯಿಂದ ಕಳುಹಿಸಿಕೊಡಲಾಯಿತು.
ಹಾಸನದಲ್ಲಿ ಕೋಣಗಳನ್ನು ನೋಡಲು ನೂಕುನುಗ್ಗಲು
ಉಪ್ಪಿನಂಗಡಿಯಿಂದ ಹೊರಟ ಕೋಣಗಳು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಹಾಸನ ನಗರಕ್ಕೆ ಆಗಮಿಸಿದ್ದು, ಇಲ್ಲಿನ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೋಣಗಳ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ. ಸುಮಾರು ನಾಲ್ಕು ಗಂಟೆಗಳ ವಿಶ್ರಾಂತಿ ಬಳಿಕ ಬೆಂಗಳೂರಿನ ಕಡೆಗೆ ಪ್ರಯಾಣ ಮುಂದುವರಿಯಲಿದೆ. ವಿಶ್ರಾಂತಿಯ ಜತೆಗೆ ಹಾಸನದಲ್ಲಿ ಸಣ್ಣ ಅಭಿನಂದನಾ ಕಾರ್ಯಕ್ರಮವೂ ಆಯೋಜನೆಯಾಗಿತ್ತು. ಕೋಣಗಳನ್ನು ನೋಡಲು ಹಾಸನದ ಜನ ಮುಗಿಬಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುದಿ ಕಂಬಳ ವಿಶೇಷ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಪ್ರಧಾನ ಕಂಬಳಕ್ಕೆ ಪೂರ್ವಭಾವಿಯಾಗಿ ಕುದಿ ಕಂಬಳ ಏರ್ಪಡಿಸಲಾಗಿತ್ತು.
ಸಾಮಾನ್ಯವಾಗಿ ಕರಾವಳಿಯ ಕಂಬಳ ಆರಂಭಕ್ಕೆ ಮುನ್ನ ಹತ್ತಾರು ಕುದಿ ಕಂಬಳಗಳು ನಡೆಯುತ್ತವೆ. ಕುದಿ ಕಂಬಳ ಎಂದರೆ ಕೋಣಗಳನ್ನು ಪ್ರಧಾನ ಸ್ಪರ್ಧೆಗೆ ಸಿದ್ಧಪಡಿಸುವ ಪ್ರಕ್ರಿಯೆ. ಕಂಬಳದ ಋತುಮಾನ ಸಾಮಾನ್ಯವಾಗಿ ನವೆಂಬರ್ ಮಧ್ಯಭಾಗದಿಂದ ಏಪ್ರಿಲ್ ತಿಂಗಳ ವರೆಗೆ ಇರುತ್ತದೆ (ದಕ್ಷಿಣ ಕನ್ನಡದಲ್ಲಿ ಪ್ರತಿ ವಾರ ಎಂಬಂತೆ 24 ಆಧುನಿಕ ಕಂಬಳಗಳು ನಡೆಯುತ್ತವೆ). ಅದಕ್ಕೆ ಪೂರ್ವಭಾವಿಯಾಗಿ ಕುದಿ ಕಂಬಳಗಳು ನಡೆಯುತ್ತವೆ. ಇದರ ಹಿಂದೆ ಎರಡು ಉದ್ದೇಶ ಒಂದು ಕಂಬಳದ ಕರೆಯನ್ನು ಹದಗೊಳಿಸುವುದು, ಇನ್ನೊಂದು ಸುಮಾರು ಆರು ತಿಂಗಳ ವಿಶ್ರಾಂತಿಯ ಬಳಿಕ ಕೋಣಗಳನ್ನು ಮತ್ತೆ ಓಟಕ್ಕೆ ಸಿದ್ಧಗೊಳಿಸುವುದು. ಸಾಮಾನ್ಯವಾಗಿ ಈ ಹಂತದಲ್ಲಿ ಕೋಣಗಳು ಹೇಗೆ ಓಡುತ್ತವೆ, ಎಷ್ಟು ದೂರವನ್ನು ಎಷ್ಟು ಸೆಕೆಂಡುಗಳನ್ನು ತಲುಪುತ್ತವೆ ಎನ್ನುವುದರ ಲೆಕ್ಕಾಚಾರವೂ ನಡೆಯುತ್ತವೆ. ಕೋಣಗಳನ್ನು ಓಡಿಸುವವರಿಗೂ ಇದು ಮೈಕೈ ಸಿದ್ಧಪಡಿಸಿಕೊಳ್ಳುವ ವೇದಿಕೆ.
ಬೆಂಗಳೂರು ಕಂಬಳಕ್ಕೆ ಆಗಲೇ ಕೆಲವು ಜೋಡಿ ಕೋಣಗಳನ್ನು ಬುಧವಾರವೇ ಕರೆಸಲಾಗಿದ್ದು, ಗುರುವಾರ ಕುದಿ ಕಂಬಳ ನಡೆಯಿತು. ಹಲವು ಜೋಡಿ ಕೋಣಗಳನ್ನು ಕರೆಗಳಲ್ಲಿ ಒಂಟಿಯಾಗಿ ಓಡಿಸಲಾಯಿತು. ಈ ಕೋಣಗಳ ಓಟವನ್ನು ಅಲ್ಲಿ ಸೇರಿದ್ದ ಜನರು ಮತ್ತು ಮಾಧ್ಯಮದವರು ಕಣ್ತುಂಬಿಕೊಂಡರು.
ಕಂಬಳಕ್ಕೆ ಸರ್ವ ಸಿದ್ಧತೆ
ಬೆಂಗಳೂರು ಕಂಬಳಕ್ಕಾಗಿ ಸರ್ವ ರೀತಿಯ ಸಿದ್ಧತೆಗಳನ್ನು ಆಗಲೇ ನಡೆಸಲಾಗಿದೆ. ಕರೆಗಳು ಸಿದ್ಧವಾಗಿವೆ. ಅವುಗಳಲ್ಲಿ ನೀರು ಬಿಟ್ಟು ಓಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋಣಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕರೆಗಳ ಎರಡೂ ಭಾಗಗಳಲ್ಲಿ ವೀಕ್ಷಣಾ ಗ್ಯಾಲರಿಗಳನ್ನು ಮಾಡಲಾಗಿದೆ.
ಇನ್ನು ಕೋಣಗಳನ್ನು ಬಿಡುವುದು, ಅವುಗಳು ಅಂತಿಮ ಗೆರೆಯನ್ನು ಮುಟ್ಟುವ ಸಂದರ್ಭವನ್ನು ದಾಖಲಿಸುವ ತಂತ್ರಜ್ಞಾನ ವ್ಯವಸ್ಥೆಯನ್ನು ಕೂಡಾ ಸಜ್ಜುಗೊಳಿಸಲಾಗುತ್ತಿದೆ.
ರಾತ್ರಿಯ ವೇಳೆ ತಲುಪಲಿವೆ 150ಕ್ಕೂ ಅಧಿಕ ಜೋಡಿ ಕೋಣಗಳು
ಉಪ್ಪಿನಂಗಡಿಯಿಂದ ಹೊರಟಿರುವ 150ಕ್ಕೂ ಅಧಿಕ ಜೋಡಿ ಕೋಣಗಳು ಗುರುವಾರ ರಾತ್ರಿ ಬೆಂಗಳೂರನ್ನು ತಲುಪಲಿವೆ. ಹಾಗೆ ಬಂದ ಕೋಣಗಳಿಗೆ ವಿಶ್ರಾಂತಿ ಪಡೆಯಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಣಗಳ ಜತೆಗೆ ಬರಲಿರುವ 5000ಕ್ಕೂ ಅಧಿಕ ಸಿಬ್ಬಂದಿಗಳಿಗೆ ಆಹಾರ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕಂಬಳ ಸಮಿತಿ ತಿಳಿಸಿದೆ.
ಇದನ್ನೂ ಓದಿ: Bangalore kambala : ಪುನೀತ್ ನೆನಪಿನಲ್ಲಿ ಬೆಂಗಳೂರು ಕಂಬಳ, ಕರೆಗಳ ಹೆಸರೇನು?