Site icon Vistara News

Bangalore Kambala : ಚಿನ್ನ ಗೆದ್ದ ಮಲೆಕುಡಿಯರ ಕೋಣಗಳು: ಇತಿಹಾಸದಲ್ಲೇ ಮೊದಲು

Buffalos of Narayana Malekudiya

ಬೆಂಗಳೂರು: ನವೆಂಬರ್‌ 25 ಮತ್ತು 26ರಂದು ನಡೆದ ಬೆಂಗಳೂರು ಕಂಬಳ (Bangalore Kambala) ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದೆ. ಕರಾವಳಿಯನ್ನು ಬಿಟ್ಟು ಹೊರಗಡೆ ನಡೆದ ಮೊದಲ ಕಂಬಳ ಇದು. ಲಕ್ಷಾಂತರ ಜನರು ಈ ಕಂಬಳವನ್ನು ನೋಡಿ ಆನಂದಿಸಿದ್ದಾರೆ. ಇದರ ಜತೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಲೆಕುಡಿಯ ಸಮುದಾಯದ (Malekudiya community) ಯಜಮಾನರೊಬ್ಬರ ಕೋಣಗಳು ಚಿನ್ನದ ಪದಕ ಪಡೆದು ವಿಜ್ರಂಭಿಸಿವೆ. ಈ ಮೂಲಕ ಕಂಬಳ ಎನ್ನುವುದು ಸರ್ವ ಜನಾಂಗದ ಕೂಟ ಎಂಬ ತನ್ನ ಹೆಗ್ಗಳಿಕೆಯನ್ನು ಇನ್ನಷ್ಟು ವಿಸ್ತರಿಸಿಕೊಂಡಿವೆ.

ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ (Narayana Malekudiya) ಅವರ ಕೋಣಗಳು ಈ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿವೆ. ಪಾರಂಬೇರಿನ ಗುಂಡ ಮತ್ತು ಬಿಳಿಯೂರು ದಾಸ ಎಂಬ ಕೋಣಗಳು ಮಹಾರಾಜ ಕರೆಯಲ್ಲಿ ಓಡಿ ಹೊಸ ದಾಖಲೆಯನ್ನು ಬರೆದವು. ಸರಪಾರಿ ಧನಂಜಯ ಗೌಡ ಅವರು ಈ ಕೋಣಗಳನ್ನು ಓಡಿಸಿದ್ದರು. ಅಂತಿಮ ಸ್ಪರ್ಧೆ ಬೋಳದ ಗುತ್ತು ಸತೀಶ್‌ ಶೆಟ್ಟಿ ಮತ್ತು ನಾರಾಯಣ ಮಲೆಕುಡಿಯರ ನಡುವಿನ ಕೋಣಗಳ ನಡುವೆ ನಡೆದಿತ್ತು. ಬೋಳದ ಗುತ್ತು ಸತೀಶ್‌ ಶೆಟ್ಟಿ ಅವರ ಕೋಣಗಳು ಅತ್ಯಂತ ಪ್ರಬಲವಾಗಿದ್ದು, ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡ ಖ್ಯಾತಿಯನ್ನು ಹೊಂದಿವೆ.

ಕೋಣಗಳ ಜತೆಗೆ ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳೆಪಾಡಿ

ಈ ಮೂಲಕ ನಾರಾಯಣ ಮಲೆಕುಡಿಯ ಅವರ ಕೋಣಗಳು ಪ್ರಥಮ ಸ್ಥಾನ ವಿಜೇತರಿಗೆ ನೀಡಲಾಗುವ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನಕ್ಕೆ ಭಾಜನವಾಗಿವೆ.

ಕಂಬಳ ಎನ್ನುವುದು ಸರ್ವ ಜನಾಂಗದ ಶಾಂತಿಯ ಕೂಟ

ಕಂಬಳ ಎಂದ ಕೂಡಲೇ ಅದು ಬಲಿಷ್ಠರ ಕೂಟ, ಶ್ರೀಮಂತರು ಮಾತ್ರ ಕೋಣ ಕಟ್ಟಬಹುದು, ಮೇಲ್ವರ್ಗದವರು ಮಾತ್ರ ಕೋಣಗಳ ಮಾಲೀಕರು ಎಂಬ ತಪ್ಪು ಕಲ್ಪನೆಯೂ ಕೆಲವು ಕಡೆ ಇದೆ. ಆದರೆ, ಕಂಬಳದಲ್ಲಿ ಎಲ್ಲ ಜನ ವರ್ಗವೂ ಮಿಳಿತವಾಗಿದೆ ಎನ್ನುವುದು ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರ ಹೆಸರುಗಳನ್ನು ನೋಡಿದರೇ ಸ್ಪಷ್ಟವಾಗುತ್ತದೆ. ಇಲ್ಲಿ ಜೈನರು, ಬಂಟರು ಮತ್ತು ಬಿಲ್ಲವರ ಕೋಣಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದು ನಿಜವಾದರೂ ಬ್ರಾಹ್ಮಣರು, ಪರಿಶಿಷ್ಟ ಜಾತಿ ಮತ್ತು ವರ್ಗದವರು ಕೂಡಾ ಕೋಣ ಕಟ್ಟುತ್ತಿದ್ದಾರೆ. ಮುಸ್ಲಿಂ ಮತ್ತು ಕ್ರೈಸ್ತ ಜನಾಂಗದವರ ಕೋಣಗಳನ್ನೂ ಕಾಣಬಹುದು.

Buffalos of Narayana Malekudiya winning gold medal

ಈ ನಡುವೆ, ಕರಾವಳಿಯಲ್ಲಿ ಅತ್ಯಂತ ಸಣ್ಣ ಸಮುದಾಯಗಳಲ್ಲಿ ಒಂದಾದ ಮಲೆಕುಡಿಯರ ಸಮುದಾಯದಿಂದ ಮೊದಲ ಬಾರಿಗೆ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ ಅವರು ಕೋಣ ಕಟ್ಟಿದ್ದಾರೆ. ತಳ ಸಮುದಾಯವಾಗಿರುವ ಮಲೆಕುಡಿಯರ ಈ ಕೋಣಗಳು ಬೆಳ್ತಂಗಡಿ ಆಸುಪಾಸಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದವು. ಮತ್ತು ದೊಡ್ಡ ಯಶಸ್ಸನ್ನೇನೂ ಕಂಡಿರಲಿಲ್ಲ. ಆದರೆ, ಈಗ ಬೆಂಗಳೂರು ಕಂಬಳದಲ್ಲಿ ಅವರು ಚಿನ್ನವನ್ನೇ ಗೆದ್ದಿವೆ.

ಮಲೆಕುಡಿಯರಿಗೆ ಬೆಂಬಲವಾಗಿ ನಿಂತದ್ದು ನ್ಯಾಯವಾದಿ ದಿನೇಶ್‌ ಹೆಗ್ಡೆ

ನಾರಾಯಣ ಮಲೆಕುಡಿಯರ ಈ ಕೋಣಗಳು ಬೆಂಗಳೂರಿನ ಕಂಬಳದಲ್ಲಿ ಪಾಲ್ಗೊಳ್ಳಲು ನೆರವಾದವರು ಮತ್ತು ಚಿನ್ನದ ಪದಕ ಪಡೆಯುವಲ್ಲಿ ಸ್ಫೂರ್ತಿ ತುಂಬಿದವರು ಮಂಗಳೂರಿನ ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳೆಪಾಡಿ ಅವರು. ಕರಾವಳಿಯಲ್ಲಿ ತಳ ಸಮುದಾಯದ ನೋವುಗಳಿಗೆ ಸದಾ ಸ್ಪಂದಿಸುವ, ಅವರೂ ಸಬಲೀಕರಣಗೊಂಡು ಪ್ರಧಾನ ವಾಹಿನಿಗೆ ಬರಬೇಕೆಂದು ಪ್ರಯತ್ನ ಮಾಡುತ್ತಿರುವವರು ದಿನೇಶ್‌ ಹೆಗ್ಡೆ ಉಳೆಪಾಡಿ.

ದಿನೇಶ್‌ ಹೆಗ್ಡೆ ಉಳೆಪಾಡಿ ಅವರು ಇತ್ತೀಚೆಗೆ ಬಂಗಾಡಿಯ ಪಾರಂಬೇರಿಗೆ ಭೇಟಿ ನೀಡಿದ್ದರು. ಆಗ ನಾರಾಯಣ ಮಲೆಕುಡಿಯರು ಸಿಕ್ಕಿದಾಗ ಬೆಂಗಳೂರು ಕಂಬಳಕ್ಕೆ ಹೋಗುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಆಗ ನಾರಾಯಣ ಅವರು, ಅದಕ್ಕೆ ಬಹಳಷ್ಟು ಖರ್ಚು ವೆಚ್ಚ ತಗಲುತ್ತದೆ. ಹೊಂದಿಸುವುದು ಕಷ್ಟ ಎಂದು ಹೇಳಿದ್ದರು.

ಆಗ ದಿನೇಶ್‌ ಹೆಗ್ಡೆ ಉಳೆಪಾಡಿ ಅವರು ಬೆಂಗಳೂರಿಗೆ ಕರೆದುಕೊಂಡು ಹೋಗಲೇಬೇಕು. ಬೆಂಗಳೂರು ಕಂಬಳದಲ್ಲಿ ಮಲೆಕುಡಿಯರ ಕೋಣಗಳು ಪ್ರಾತಿನಿಧ್ಯ ಪಡೆಯಲೇಬೇಕು ಎಂದು ಗಂಟುಬಿದ್ದರು. ಮಾತ್ರವಲ್ಲ ಬೆಂಗಳೂರಿಗೆ ಕಳುಹಿಸುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ಅದರೊಂದಿಗೆ ಕೋಣಗಳನ್ನು ಬೆಂಗಳೂರಿಗೆ ಕಳುಹಿಸುವ ಕನಸು ನನಸಾಯಿತು.

ದಿನೇಶ್‌ ಹೆಗ್ಡೆಯವರು ಸ್ವತಃ ತಾವೇ ಕೋಣಗಳ ಜತೆಗೆ ಬಂದು, ಅವು ಚಿನ್ನ ಗೆಲ್ಲುವವರೆಗೂ ಜತೆಗಿದ್ದರು. ಈ ಮೂಲಕ ಮಲೆಕುಡಿಯರ ಕೋಣಗಳು ರಾಜ್ಯ ಮಟ್ಟದಲ್ಲಿ ಸದ್ದು ಮಾಡುವಂತಾಗಿದೆ.

ಇದನ್ನೂ ಓದಿ: Bangalore Kambala : ಬೆಂಗಳೂರು ಕಂಬಳ ಸಂಪನ್ನ, ಅಂತಿಮ ಫಲಿತಾಂಶ ಇಲ್ಲಿದೆ

ಬಂಗಾಡಿಯಲ್ಲಿ ಸಂಭ್ರಮಾಚರಣೆ

ನಾರಾಯಣ ಮಲೆಕುಡಿಯ ಅವರ ಕೋಣಗಳ ಗೆಲುವಿಗಾಗಿ ಬಂಗಾಡಿಯಲ್ಲಿ ಮೆರವಣಿಗೆ ಮೂಲಕ ಸಂಭ್ರಮಾಚರಣೆ ನಡೆದಿದೆ. ಭಾನುವಾರ ಮಧ್ಯರಾತ್ರಿಯ ಬಳಿಕ ಹೊರಟ ಕೋಣಗಳು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಊರು ತಲುಪಿದ್ದು, ಅಲ್ಲಿ ದೊಡ್ಡ ಮಟ್ಟದಲ್ಲಿ ಸ್ವಾಗತ ನೀಡಲಾಗಿದೆ. ಈ ಕೋಣಗಳ ಜತೆಗೆ ಬಂದ ತಂಡದಲ್ಲಿ ಮಲೆಕುಡಿಯರೇ ಹೆಚ್ಚಾಗಿದ್ದರು ಎನ್ನುವುದು ಇನ್ನೊಂದು ವಿಶೇಷ.

Exit mobile version