ಬೆಂಗಳೂರು: ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ನಡೆಯಲಿರುವ ಅದ್ಧೂರಿ ಬೆಂಗಳೂರು ಕಂಬಳಕ್ಕೂ (Bangalore Kambala) ಕನ್ನಡದ ಕಣ್ಮಣಿ ದಿ. ಪುನೀತ್ ರಾಜ್ ಕುಮಾರ್ (Punit Rajkumar) ಅವರಿಗೂ ಸಂಬಂಧವಿದೆ ಎಂದರೆ ನಂಬುತ್ತೀರಾ?
ಬಾಲಿವುಡ್ ಸಿನಿಮಾ ತಾರೆಯರು, ರಾಜ್ಯದ ಗಣ್ಯಾತಿಗಣ್ಯರು, ಜನಪ್ರತಿನಿಧಿಗಳು, ಸ್ಯಾಂಡಲ್‌ವುಡ್ ನಟ-ನಟಿಯರು ಸೇರಿದಂತೆ ನಾಡಿನಾದ್ಯಂತ ಸುಮಾರು 8 ಲಕ್ಷ ಜನರು ಸಾಕ್ಷೀಕರಿಸಲಿರುವ ಈ ಮಹಾ ಪ್ರಯೋಗದಲ್ಲಿ 200 ಜೋಡಿ ಕೋಣಗಳು ಭಾಗವಹಿಸಲಿವೆ. ನವೆಂಬರ್ 25ರ ಶನಿವಾರ ಬೆಳಗ್ಗೆ 10.30ಕ್ಕೆ ಕಂಬಳ ಆರಂಭವಾಗಲಿದ್ದು, ಭಾನುವಾರ ಸಂಜೆಯವರೆಗೂ ಮುಂದುವರಿಯಲಿದೆ. ನಡುವೆ ಕಂಬಳದ ಓಟವಲ್ಲದೆ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳಗಳು ನಡೆಯಲಿವೆ ಎಂದು ಸಮಿತಿಯ ಪದಾಧಿಕಾರಿಗಳು ಬುಧವಾರ ಬೆಂಗಳೂರಿನಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ರಾಜ-ಮಹಾರಾಜ ಕಂಬಳ, ಯಾಕೆ ಈ ಹೆಸರು?
ಕಂಬಳದಲ್ಲಿ ಎರಡು ಕರೆಗಳಿರುತ್ತದೆ. ಅದರಲ್ಲಿ ಕೋಣಗಳು ಸ್ಪರ್ಧೆಯಲ್ಲಿ ಓಡುತ್ತವೆ. ಯಾವ ಕರೆಯ ಕೋಣ ಗೆದ್ದಿದೆ ಎನ್ನುವುದನ್ನು ಸೂಚಿಸುವುದಕ್ಕಾಗಿ ಕರೆಗಳಿಗೆ ಪ್ರತ್ಯೇಕ ಹೆಸರು ಇಡಲಾಗುತ್ತದೆ. ಸಾಮಾನ್ಯವಾಗಿ ಕೋಟಿ-ಚೆನ್ನಯ್ಯ, ಕಾಂತಾಬಾರೆ ಬೂದಬಾರೆ ಮೊದಲಾದ ತುಳುನಾಡಿನ ಕಾರಣಿಕ ಸಹೋದರರ ಹೆಸರು ಇಡುವ ವಾಡಿಕೆ ಹೆಚ್ಚು. ಲವ-ಕುಶ, ವೀರೇಂದ್ರ-ಸುರೇಂದ್ರ, ಸತ್ಯ-ಧರ್ಮ ಮೊದಲಾದ ಹೆಸರುಗಳೂ ಇವೆ. ಬೆಂಗಳೂರಿನ ಕಂಬಳಕ್ಕೆ ರಾಜ ವೈಭವ ಇರುವುದರಿಂದ ಇಲ್ಲಿನ ಕರೆಗಳಿಗೆ ರಾಜ-ಮಹಾರಾಜ ಎಂಬ ಹೆಸರು ಇಡಲಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಹೇಳಿದರು.
ಕಂಬಳ ನಡೆಯುವ ಮುಖ್ಯ ವೇದಿಕೆಗೆ ಕನ್ನಡ ಚಿತ್ರರಂಗವನ್ನು ಆಳಿ, ಅಲ್ಪಾವಧಿಯಲ್ಲೇ ಅಮರರಾದ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡಲಾಗಿದೆ ಎಂದು ಅಶೋಕ್ ರೈ ತಿಳಿಸಿದರು. ಪುನೀತ್ ರಾಜ್‌ಕುಮಾರ್ ಅವರನ್ನು ನಾವು ಸಾರ್ವಕಾಲಿಕವಾಗಿ ನೆನಪಿಟ್ಟುಕೊಂಡು ಅವರ ನೆನಪಿನ ನೆರಳಲ್ಲೇ ಕಾರ್ಯಕ್ರಮ ಮಾಡುತ್ತೇವೆ ಎಂದು ಸಂಘಟಕರು ತಿಳಿಸಿದರು.
ಮುಖ್ಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತದೆ, ಕಂಬಳ ನಡೆಯುತ್ತಿರುವ ನಡುವೆಯೇ ಗಣ್ಯರು ವೇದಿಕೆಗೆ ಬರುತ್ತಾರೆ. ಇದಕ್ಕೆ ಪರ್ಯಾಯವಾಗಿ ಸಾಂಸ್ಕೃತಿಕ ವೇದಿಕೆ ಇರುತ್ತದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಈ ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕರಾವಳಿಯ ಕಂಬಳಕ್ಕೂ ಮೈಸೂರು ಮಹಾರಾಜರಿಗೂ ಸಂಬಂಧವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಡೆದ ಅರಸು ಕಂಬಳಕ್ಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಮ್ಮೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಗಳಿಗೆ ರಾಜ-ಮಹಾರಾಜ ಎಂಬ ಹೆಸರು ಇಡಲಾಗಿದೆ. ಮತ್ತು ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ.
ಕೋಣಗಳು ಕುಡಿಯುವ ನೀರು ಕೂಡಾ ಊರಿಂದಲೇ!
ಬೆಂಗಳೂರು ಕಂಬಳಕ್ಕೆ 228 ಕೋಣಗಳ ಜೋಡಿಗಳ ನೋಂದಣಿಯಾಗಿದೆ. ಅವುಗಳ ಪೈಕಿ 180 ಕೋಣಗಳು ಆಗಲೇ ಫೈನಲ್ ಆಗಿವೆ. ನಾವೂ ಬರುತ್ತೇವೆ ಎಂಬ ಒತ್ತಡ ಜೋರಾಗಿರುವುದರಿಂದ ಅಂತಿಮವಾಗಿ 200 ಜೋಡಿ ಕೋಣಗಳು ಬರಬಹುದು ಎಂಬ ನಿರೀಕ್ಷೆ ಇದೆ.
ನವೆಂಬರ್ 23ರ ಬೆಳಗ್ಗೆ 10.30ಕ್ಕೆ ಉಪ್ಪಿನಂಗಡಿಯಿಂದ 150ಕ್ಕೂ ಅಧಿಕ ಲಾರಿಗಳ ಮೂಲಕ ಕೋಣಗಳು ಏಕಕಾಲದಲ್ಲಿ ಬೆಂಗಳೂರು ಕಡೆಗೆ ಹೊರಡಲಿವೆ. ಮಧ್ಯಾಹ್ನ ಹಾಸನ ಬಳಿ ಆಹಾರ ಸೇವಿಸಿದ ಬಳಿಕ ಮತ್ತೆ ಬೆಂಗಳೂರು ಪಯಣ ಆರಂಭವಾಗಲಿದೆ. ಕತ್ತಲಾಗುವ ಹೊತ್ತಿಗೆ ಕೋಣಗಳ ಮೆರವಣಿಗೆ ನಾಗಮಂಗಲ ತಲುಪಲಿದೆ. ಅಲ್ಲಿ ವಿಶ್ರಾಂತಿ ಪಡೆದು ಬಳಿಕ ಮಧ್ಯರಾತ್ರಿಯ ಹೊತ್ತಿಗೆ ಕೋಣಗಳು ಅರಮನೆ ಮೈದಾನ ತಲುಪಲಿವೆ.
ಮರುದಿನ ಇಡೀ ದಿನ ಕೋಣಗಳು ಅರಮನೆ ಮೈದಾನದಲ್ಲಿ ವಿಶ್ರಾಂತಿ ಪಡೆಯಲಿವೆ. ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಣಗಳಿಗೆ ಬೇಕಾಗುವ ಎಲ್ಲ ಬೈ ಹುಲ್ಲನ್ನು ಕೂಡಾ ಲಾರಿಗಳ ಮೂಲಕವೇ ತರಲಾಗುತ್ತದೆ.
ವಿಶೇಷವೇನೆಂದರೆ ಕೋಣಗಳಿಗೆ ಕುಡಿಯಲು ಕೊಡುವ ನೀರನ್ನು ಕೂಡಾ ಕರಾವಳಿಯಿಂದಲೇ ತರಲಾಗುತ್ತದೆ. ಆಹಾರ ಮತ್ತು ನೀರಿನ ಎಲ್ಲ ವಿಚಾರಗಳನ್ನು ಕೋಣಗಳ ಯಜಮಾನರೇ ತೀರ್ಮಾನ ಮಾಡುತ್ತಾರೆ. ನೀರು ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗಬಹುದು ಎಂಬ ಕಾರಣಕ್ಕಾಗಿ ಅಲ್ಲಿಂದಲೇ ನೀರು ತರಲಾಗುತ್ತಿದೆ ಎಂದು ಅಶೋಕ್ ರೈ ತಿಳಿಸಿದರು. ಪ್ರಾಣಿಗಳ ರಕ್ಷಣಾ ಕಾಯಿದೆ (Animal protection act) ಉಲ್ಲಂಘನೆಯಾಗದಂತೆ ಕಂಬಳ ಆಯೋಜಿಸಲಾಗುತ್ತದೆ ಎಂದು ಅಶೋಕ್ ರೈ ತಿಳಿಸಿದರು.
155 ಮೀಟರ್ ಉದ್ದದ ಕರೆ, 7 ಸಾವಿರ ಜನರಿಗೆ ಗ್ಯಾಲರಿ ಅವಕಾಶ
ಅರಮನೆ ಮೈದಾನದ 55 ಎಕರೆ ಪ್ರದೇಶದಲ್ಲಿ ಕಂಬಳ ನಡೆಯಲಿದೆ. ಕಂಬಳದ ಓಟದ ಕರೆಯ ಉದ್ದ 155 ಮೀಟರ್ ಇರುತ್ತದೆ. ಇಲ್ಲಿ ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯುತ್ತಿರುವಂತೆಯೇ ಜೋಡಿ ಕೋಣಗಳ ಒಂಟಿ ಓಟ ಆರಂಭವಾಗುತ್ತದೆ. ಅಂದರೆ ಅವುಗಳು ಓಡುವ ವೇಗವನ್ನು ದಾಖಲಿಸಿಕೊಳ್ಳಲಾಗುತ್ತದೆ. ಅದಾದ ಬಳಿಕ ವೇಗದ ಆಧಾರದಲ್ಲಿ ಕೋಣಗಳ ಸಾಲು (ಓಟದ ಸ್ಪರ್ಧೆ) ನಿರ್ಧಾರವಾಗುತ್ತದೆ. ಸಂಜೆಯ ನಂತರ ಜೋಡಿ ಕೋಣಗಳ ಸ್ಪರ್ಧೆ ಆರಂಭವಾಗುತ್ತದೆ.
ಕಂಬಳದ ಆಹ್ವಾನಿತರು, ವಿವಿಐಪಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರುತ್ತದೆ. ಕಂಬಳದ ಕರೆಗಳ ಎರಡೂ ಭಾಗದಲ್ಲಿ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 7000 ಜನ ಕುಳಿತು ವೀಕ್ಷಣೆ ಮಾಡಬಹುದು. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ, ಒಟ್ಟಾರೆಯಾಗಿ 8 ಲಕ್ಷ ಜನರು ಕಂಬಳಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಂಗಳೂರು ಕಂಬಳ, ನಮ್ಮ ಕಂಬಳ ಥೀಮ್
ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಥೀಮ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಚಿತ್ರ ನಟರಾದ ಶಿವರಾಜ್ ಕುಮಾರ್, ಸುದೀಪ್, ದರ್ಶನ್ ಮೊದಲಾದವರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Bangalore Kambala : ಬೆಂಗಳೂರು ಕಂಬಳಕ್ಕೆ ರೆಡಿ; 300 ಕೋಣಗಳ ಅಬ್ಬರ, 8 ಲಕ್ಷ ಜನರ ಸಂಭ್ರಮ
ಕಂಬಳವನ್ನು ಪಕ್ಷಾತೀತವಾಗಿ ನಡೆಸಲಾಗುತ್ತಿದೆ. ಎಲ್ಲ ಪಕ್ಷದವರನ್ನೂ ಆಹ್ವಾನಿಸಿದ್ದೇವೆ. ಬೆಂಗಳೂರಿನಲ್ಲಿರುವ 69 ಸಂಘ ಸಂಸ್ಥೆಗಳು ಈ ಕಂಬಳಕ್ಕೆ ಕೈಜೋಡಿಸಿವೆ. ಒಟ್ಟು 180 ಆಹಾರದ ಸ್ಟಾಲ್‌ಗಳಿದ್ದು ಕರಾವಳಿಯ ಫುಡ್ ವಿಶೇಷ ಇಲ್ಲಿರುತ್ತದೆ.
700 ವರ್ಷಗಳ ಇತಿಹಾಸ ಇರುವ ಕಂಬಳಕ್ಕೆ 12 ವರ್ಷಗಳ ಹಿಂದೆ ಕಂಟಕ ಎದುರಾಗಿತ್ತು. ಆಗ ಸಿಎಂ ಆಗಿದ್ದ ಸಿದ್ಧರಾಮಯ್ಯ ಸುಗ್ರಿವಾಜ್ಞೆ ಮಾಡುವ ಮೂಲಕ ಕಂಬಳ ಪರವಾಗಿ ನ್ಯಾಯ ಒದಗಿಸಿದ್ದರು ಎಂದು ಸಂಘಟಕರು ನೆನಪಿಸಿಕೊಂಡಿದ್ದಾರೆ.