Site icon Vistara News

Bangalore Kambala: ಕೋಣಗಳು ತಿನ್ನೋ ಪೌಷ್ಟಿಕ ತಿಂಡಿಗಳನ್ನು ಪ್ರಾಣಿ ದಯಾ ಸಂಘದವರು ಜೀವಮಾನದಲ್ಲಿ ತಿಂದಿರಲಿಕ್ಕಿಲ್ಲ!

DV Sadananda Gowda in Bangalore Kambala

ಬೆಂಗಳೂರು: ʻʻನಮ್ಮ ಕಂಬಳದ ಕೋಣಗಳನ್ನು (Buffalos of Kambala) ನಾವು ಹೇಗೆ ಸಾಕುತ್ತೇವೆ ಎಂದರೆ ಕಂಬಳದ ಕೋಣಗಳು ತಿನ್ನುವ ಪೌಷ್ಟಿಕ ತಿಂಡಿಗಳನ್ನು ಕಂಬಳ ವಿರೋಧಿಗಳಾದ ಪ್ರಾಣಿ ದಯಾ ಸಂಘದವರು (Animal Care trust) ತಮ್ಮ ಜೀವಮಾನದಲ್ಲಿ ಎಂದೂ ತಿಂದಿರಲಿಕ್ಕಿಲ್ಲʼʼ; ಹೀಗೆಂದು ಹೇಳಿದ್ದಾರೆ ಕೇಂದ್ರದ ಮಾಜಿ ಸಚಿವ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ (DV Sadananda Gowda) ಅವರು.

ಶನಿವಾರ (ನವೆಂಬರ್‌ 25) ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ಆರಂಭಗೊಂಡ ಬೆಂಗಳೂರು ಕಂಬಳದ (Bangalore Kambala) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತುಳುನಾಡಿನ ಜಾನಪದ, ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ತಡೆಯಲು ಪ್ರಾಣಿದಯಾ ಸಂಘದವರು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ ಯಾವ ಪ್ರಯತ್ನವೂ ಇದುವರೆಗೆ ಸಫಲವಾಗಿಲ್ಲ ಎಂದು ಹೇಳಿದರು.

ನಾವು ಕೋಣಗಳಿಗೆ ಹಿಂಸೆ ನೀಡುತ್ತೇವೆ ಎನ್ನುವುದು ಅವರ ದೂರು. ಈ ಕಾರಣಕ್ಕಾಗಿ ಕಂಬಳವನ್ನೇ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದರು. ನಾವು ಕಾನೂನು ಹೋರಾಟ ಮಾಡಿ, ಸರ್ಕಾರದ ಸುಗ್ರೀವಾಜ್ಞೆಗಳ ಮೂಲಕ ಕಂಬಳದ ಅಸ್ಮಿತೆಯನ್ನು ರಕ್ಷಿಸಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಪ್ರಾಣಿ ದಯಾ ಸಂಘದವರು ಎ.ಸಿ ಕೋಣೆಯಲ್ಲಿ ಕುಳಿತು ಕೋಣಗಳು ಮತ್ತು ಕಂಬಳದ ಬಗ್ಗೆ ಮಾತನಾಡುತ್ತಾರೆ. ಅವರು ಕಂಬಳಕ್ಕೆ ಬಂದು ನೋಡಬೇಕು, ಕಂಬಳವನ್ನು ನಾವು ಹೇಗೆ ಸಾಕುತ್ತೇವೆ ಅಂತ ಮನೆಗೆ ಬಂದು ನೋಡಬೇಕು. ನಿಜ ಹೇಳ್ತೇನೆ. ಕಂಬಳದ ಕೋಣಗಳು ತಿನ್ನುವಷ್ಟು ಪೌಷ್ಟಿಕವಾದ ಆಹಾರವನ್ನು ಈ ಪ್ರಾಣಿ ದಯಾ ಸಂಘದವರು ತಮ್ಮ ಜೀವಮಾನದಲ್ಲಿ ತಿಂದಿರಲಿಕ್ಕಿಲ್ಲ ಎಂದರು. ಕೋಣಗಳನ್ನು ನಾವು ಮಕ್ಕಳಂತೆ ಪ್ರೀತಿಸುತ್ತೇವೆ ಎಂದು ಡಿ.ವಿ. ಸದಾನಂದ ಗೌಡರು ಹೇಳಿದ್ದಾರೆ.

ಬೆಂಗಳೂರು ಕಂಬಳವನ್ನು ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು ಕೆರೆ ಆರತಿ ಮೂಲಕ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್‌.ಆರ್‌. ವಿಶ್ವನಾಥ್‌, ಸಂಸದ ಪಿ.ಸಿ. ಮೋಹನ್‌, ಚಿತ್ರನಟಿ ಸಂಜನಾ ಗಲ್ರಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್‌ ಶೆಟ್ಟಿ, ಅಧ್ಯಕ್ಷರಾದ ಶಾಸಕ ಅಶೋಕ್‌ ರೈ, ಉಪಾಧ್ಯಕ್ಷರಾದ ಸಂಗೀತ ನಿರ್ದೇಶಕ ಗುರುಕಿರಣ್‌ ಕಾರ್ಯಕ್ರಮ ಸಾರಥ್ಯ ವಹಿಸಿದ್ದರು.

ಪ್ರತಿ ವರ್ಷವೂ ಬೆಂಗಳೂರು ಕಂಬಳ ನಡೆಯಲಿ ಎಂದ ಸಂಜನಾ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರ ನಟಿ ಸಂಜನಾ ಗಲ್ರಾನಿ ಅವರು ಕಂಬಳದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಲ್ಲದೆ, ಪ್ರತಿ ವರ್ಷವೂ ಬೆಂಗಳೂರು ಕಂಬಳ ನಡೆಸುವಂತೆ ವಿನಂತಿಸಿದರು.

ಇದನ್ನೂ ಓದಿ: Bangalore Kambala : ಬೆಂಗಳೂರು ಕಂಬಳಕ್ಕೆ ಅದ್ಧೂರಿ ಚಾಲನೆ; ಇಲ್ಲೇ LIVE ಆಗಿ ನೋಡಿ!

ಬೆಂಗಳೂರು ಕಂಬಳಕ್ಕೆ ಜನಸಾಗರ

ಬೆಂಗಳೂರು ಕಂಬಳಕ್ಕೆ ಆಗಲೇ ಜನಸಾಗರ ಹರಿದುಬರುತ್ತಿದ್ದು, ಈ ಹಬ್ಬ ಭಾನುವಾರ ಸಂಜೆ ಐದು ಗಂಟೆಯವರೆಗೆ ನಡೆಯಲಿದೆ. ಹಗ್ಗ ಹಿರಿಯ ಮತ್ತು ಕಿರಿಯ, ನೇಗಿಲು ಹಿರಿಯ ಮತ್ತು ಕಿರಿಯ, ಅಡ್ಡ ಹಲಗೆ ಮತ್ತು ಕನಹಲಗೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸುಮಾರು 200 ಜೋಡಿ ಕೋಣಗಳು ಕೂಟದಲ್ಲಿ ಭಾಗವಹಿಸಿವೆ.

Exit mobile version