Site icon Vistara News

Bangalore Kambala : ಕಂಬಳ ನೋಡಲು ಹೋಗ್ತೀರಾ? ಹಾಗಿದ್ದರೆ ಈ ಸಂಗತಿಗಳನ್ನು ತಿಳಿದುಕೊಳ್ಳಿ

Bangalore Kambala

ಬೆಂಗಳೂರು: ಉದ್ಯಾನ ನಗರಿಯಲ್ಲಿ ನವೆಂಬರ್‌ 25 ಮತ್ತು 26ರಂದು ನಡೆಯಲಿರುವ ಬೆಂಗಳೂರು ಕಂಬಳಕ್ಕೆ (Bangalore Kambala) ಸಕಲ ಸಿದ್ಧತೆಗಳು ನಡೆದಿವೆ. ಕರಾವಳಿಯಿಂದ ಈಗಾಗಲೇ ಸುಮಾರು 200 ಜೋಡಿ ಕೋಣಗಳು ಮತ್ತು ಅದರ ಪರಿಚಾರಕರಾಗಿ ಐದು ಸಾವಿರ ಮಂದಿ ಆಗಮಿಸಿದ್ದಾರೆ. ಇನ್ನು ರಾಜಕಾರಣಿಗಳು, ಸಿನಿಮಾ ನಟರು ಮತ್ತು ಕಂಬಳ ಅಭಿಮಾನಿಗಳು, ಕುತೂಹಲಿಗಳು ಸೇರಿ ಎರಡು ದಿನದಲ್ಲಿ ಆರರಿಂದ ಏಳು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇಷ್ಟು ಜನರಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ನಡೆಯಲಿರುವ ಕಂಬಳಕ್ಕೆ ಬರುವವರಿಗಾಗಿ ಸಂಚಾರಿ ಪೊಲೀಸರು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು

  1. ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್.
  2. ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ.
  3. ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ರಲ್ಲಿ ಪ್ರವೇಶ.
  4. ಕ್ಯಾಬ್‌ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶ. ಗೇಟ್ ನಂಬರ್ 3ರ ಮೂಲಕ ಕ್ಯಾಬ್‌ಗಳಿಗೆ ಎಕ್ಸಿಟ್‌ಗೆ ಸೂಚನೆ ನೀಡಲಾಗಿದೆ.
  5. ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮಿಸಬೇಕು.
  6. ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದ್ದು, ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್‌ನಲ್ಲಿ ಹೋಗುವವರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.

ವಿವಿಐಪಿ ಎಂಟ್ರಿ ಬೇರೆ, ಸಾರ್ವಜನಿಕರಿಗೆ ಬೇರೆ

ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ನೀಡಲಾಗುತ್ತಿದೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಇರಲಿದೆ. ವಿವಿಐಪಿಗಳಳಿಗೆ ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶ ಮಾಡಲು ಅವಕಾಶವಿದೆ.

ಕಂಬಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ. ಯಾವುದೇ ಟಿಕೆಟ್‌ ಇಲ್ಲದೆ ಉಚಿತವಾಗಿ ಬರಬಹುದು. ಸಾರ್ವಜನಿಕರು ಪಾಸ್‌ ತೋರಿಸುವ ಅಗತ್ಯವೂ ಇಲ್ಲ. ಆದರೆ, ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಂಬಳ ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.

ಇದನ್ನೂ ಓದಿ : Bangalore Kambala : ಅರಮನೆ ಮೈದಾನಲ್ಲಿ ಕೋಣಗಳ ದರ್ಬಾರ್‌; ಎಷ್ಟು ಹೊತ್ತಿಗೆ ಶುರು, ಹೇಗೆ ನಡೆಯುತ್ತೆ ಕಂಬಳ?

ಕಂಬಳ : ಎಷ್ಟು ಹೊತ್ತಿಗೆ ಯಾವ ಇವೆಂಟ್‌?

ಕಂಬಳ ಆರು ವಿಭಾಗಗಳಲ್ಲಿ ನಡೆಯಲಿದೆ. ಹಗ್ಗದ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಎಂಬ ಎರಡು ವರ್ಗಗಳಿವೆ. ನೇಗಿಲು ವಿಭಾಗದಲ್ಲೂ ಹಿರಿಯ ಮತ್ತು ಕಿರಿಯ ವರ್ಗಗಳಿವೆ. ಉಳಿದಂತೆ ಅಡ್ಡಹಲಗೆ ಮತ್ತು ಕನಹಲಗೆ ವಿಭಾಗಗಳಿವೆ.

ಬೆಳಗ್ಗೆ 10.30ರಿಂದಲೇ ಕೋಣಗಳ ಓಟ ಶುರುವಾಗಲಿದೆ. ಆರಂಭದಲ್ಲಿ ಹಗ್ಗ ಮತ್ತು ನೇಗಿಲಿನ ಕಿರಿಯ ವಿಭಾಗದ ಕೋಣಗಳ ಒಂಟಿ ಓಟವಿರುತ್ತದೆ. ಈ ಕೋಣಗಳು 155 ಮೀಟರ್‌ ಓಡಲು ತೆಗೆದುಕೊಳ್ಳುವ ಸಮಯವನ್ನು ನೋಟ್‌ ಮಾಡಲಾಗುತ್ತದೆ. ಇದು ಅವುಗಳ ನಡುವೆ ಓಟದ ಸ್ಪರ್ಧೆಯನ್ನು ಆಯೋಜಿಸಲು ಅನುಕೂಲವಾಗುತ್ತದೆ.

ಅದೇ ರೀತಿ ಹಗ್ಗ ಮತ್ತು ನೇಗಿಲಿನ ಹಿರಿಯ ವಿಭಾಗದ ಕೋಣಗಳ ಒಂಟಿ ಓಟ ನಡೆದು ಅಲ್ಲೂ ಸಾಲುಗಳ ನಿರ್ಣಯ ಮಾಡಲಾಗುತ್ತದೆ. ಅಡ್ಡಹಲಗೆಯಲ್ಲಿ ಕೂಡಾ ಇದೇ ರೀತಿಯಲ್ಲಿ ಸಾಲು ನಿರ್ಣಯವಾಗುತ್ತದೆ. ಕನಹಲಗೆಯ ಕೋಣಗಳಿಗೆ ಸ್ಪರ್ಧೆ ಇರುವುದಿಲ್ಲ. ಅವು ಒಂಟಿಯಾಗಿ ಓಡುತ್ತಲೇ ನಿಶಾನೆಗೆ ನೀರು ಹಾರಿಸುವ ಸ್ಪರ್ಧೆ.

ಸಾಮಾನ್ಯವಾಗಿ ಸಂಜೆಯವರೆಗೆ ಒಂಟಿ ಓಟವೇ ಹೆಚ್ಚಾಗಿದ್ದು, ಸಂಜೆ ಮತ್ತು ಕತ್ತಲಿನ ಹೊತ್ತಿಗೆ ಕನಹಲಗೆ ಓಟ ಗಮನ ಸೆಳೆಯಲಿದೆ. ಅದಾದ ಬಳಿಕ ಇತರ ವಿಭಾಗಗಳಲ್ಲಿ ಸ್ಪರ್ಧೆ ಆರಂಭವಾಗುತ್ತದೆ.

ಶನಿವಾರ ಮಧ್ಯಾಹ್ನ ಆರಂಭವಾಗುವ ಕಂಬಳ ಮರುದಿನ ಸಂಜೆ ಐದು ಗಂಟೆಗೆ ಮುಕ್ತಾಯವಾಗಬಹುದು ಎಂಬ ನಿರೀಕ್ಷೆ ಇದೆ. ಕೋಣಗಳ ನಡುವಿನ ಓಟಗಳು ಹಂತ ಹಂತವಾಗಿ ನಡೆದು ಒಂದು ಹಂತದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಎಂಟು ಜೋಡಿ ಕೋಣಗಳು ಆಯ್ಕೆಯಾಗುತ್ತವೆ.

ಹಗ್ಗ ಹಿರಿಯ/ಕಿರಿಯ ಮತ್ತು ನೇಗಿಲಿನಲ್ಲಿ ಕ್ವಾರ್ಟರ್‌ ಫೈನಲ್‌ ನಡೆದು ಬಳಿಕ ಸೆಮಿಫೈನಲ್‌, ಆ ಬಳಿಕ ಫೈನಲ್‌ ನಡೆಯಲಿದೆ. ಎಲ್ಲ ವಿಭಾಗಗಳಲ್ಲೂ ಈ ಹಂತಗಳು ಒಂದಾದನಂತರ ಇನ್ನೊಂದು ನಡೆಯುತ್ತವೆ. ಅಂತಿಮವಾಗಿ ನಡೆಯುವುದು ಕೂಟದಲ್ಲೇ ಅತ್ಯಂತ ಪ್ರತಿಷ್ಠಿತವಾದ ಹಗ್ಗ ಹಿರಿಯ ವಿಭಾಗದ ಕೋಣಗಳ ಓಟ. ಇದು ನಡೆಯುವಾಗ ಭಾನುವಾರ ಸಂಜೆ 5 ಗಂಟೆ ಆಗುವ ನಿರೀಕ್ಷೆ ಇದೆ.

Exit mobile version