ಬೆಂಗಳೂರು: ಕರಾವಳಿಯ ಜಾನಪದ ಕಲೆಯಾಗಿರುವ ಕಂಬಳವನ್ನು (Kambala Sport) ಇಡೀ ಜಗತ್ತಿನ ಮುಂದೆ ಪ್ರದರ್ಶಿಸುವ ಭಾಗವಾಗಿ ಆಯೋಜನೆಗೊಂಡಿರುವ ಎರಡು ದಿನಗಳ ಬೆಂಗಳೂರು ಕಂಬಳ (Bangalore Kambala) ಶನಿವಾರ ಅದ್ಧೂರಿಯಾಗಿ ಆರಂಭಗೊಂಡಿತು. ಕೋಣಗಳ ಅಬ್ಬರ ನೋಡಲು ಮೊದಲ ದಿನವೇ ಲಕ್ಷಾಂತರ ಜನರು ಭಾಗವಹಿಸಿ ಸಂಭ್ರಮಿಸಿದರು.
ಬೆಳಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Punit Rajkumar) ಅವರು ಕರೆ ಪೂಜೆಯನ್ನು ನೆರವೇರಿಸಿ ಶುಭ ಹಾರೈಸಿದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಕಂಬಳವನ್ನು ಉದ್ಘಾಟಿಸಿದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ಖುಷಿಪಟ್ಟರು. ಇದರೊಂದಿಗೆ ಇತಿಹಾಸದಲ್ಲೇ ಮೊದಲು ಬಾರಿಗೆ ಕರಾವಳಿಯ ಹೊರಗಡೆ ನಡೆದ ಕಂಬಳ ಹೊಸ ಇತಿಹಾಸ ಸೃಷ್ಟಿಯಾಗಿದೆ.
ಶನಿವಾರ (ನವೆಂಬರ್ 25) ಬೆಳಗ್ಗೆ ಆರಂಭಗೊಂಡಿರುವ ಈ ಕಂಬಳ ಭಾನುವಾರ ಸಂಜೆ ಐದು ಗಂಟೆಯವರೆಗೆ ನಿರಂತರವಾಗಿ ಸುಮಾರು 30 ಗಂಟೆಗಳ ಕಾಲ ನಡೆಯಲಿದೆ. ಸಂಜೆ ಐದು ಗಂಟೆಗೆ ಪ್ರಧಾನ ಸಭಾ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ಸಚಿವರು ಭಾಗವಹಿಸಲಿದ್ದಾರೆ.
ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್, ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕರವೇ ಪ್ರವೀಣ್ ಶೆಟ್ಟಿ, ಸಂಸದ ಪಿ.ಸಿ ಮೋಹನ್ ಮತ್ತಿತರ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಮದ್ದಳೆ ಹಾಗು ಕರಾವಳಿ ಶೈಲಿಯ ಗೀತೆಯೊಂದಿಗೆ ಕಂಬಳ ಶುರುವಾಗಿದೆ. ಗಣ್ಯರ ವೀಕ್ಷಣೆಗಾಗಿ ಪ್ರಾಯೋಗಿಕ ಓಟವನ್ನೂ ನಡೆಸಲಾಯಿತು.
ಕಾರ್ಯಕ್ರಮ ಆರಂಭಕ್ಕೆ ಮುನ್ನ ರಜೌರಿ ಎನ್‌ಕೌಂಟರ್‌ನಲ್ಲಿ ವೀರ ಮರಣ ಹೊಂದಿದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರಿಗೆ ಗೌರವ ಸಲ್ಲಿಸುವ ಭಾಗವಾಗಿ ಒಂದು ನಿಮಿಷದ ಮೌನ ಆಚರಿಸಲಾಯಿತು. ಕಂಬಳ ಉದ್ಘಾಟನೆಯ ಹೊತ್ತಿಗೆ ಎಂ.ವಿ. ಪ್ರಾಂಜಲ್ ಅವರು ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ಆರಂಭಗೊಂಡಿದೆ.
ಅರಮನೆ ಮೈದಾನದಲ್ಲಿ ನಿರ್ಮಾಣವಾಗಿರುವ 155 ಮೀಟರ್ ಉದ್ದದ ಕರೆಯಲ್ಲಿ ಕಂಬಳ ನಡೆಯಲಿದೆ. ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡಲಾಗಿದ್ದರೆ, ಕೋಣಗಳು ಓಡುವ ಜೋಡಿ ಕರೆಗಳಿಗೆ ರಾಜ, ಮಹಾರಾಜ ಎಂದು ಹೆಸರಿಡಲಾಗಿದೆ. ಇನ್ನು ಕಂಬಳದ ಗ್ಯಾಲರಿಯಲ್ಲಿ ಸುಮಾರು 8 ಸಾವಿರ ಮಂದಿಗೆ ಕುಳಿತುಕೊಳ್ಳಲು ಅವಕಾಶವಿದೆ. ಸುಮಾರು 57 ಎಕರೆ ಪ್ರದೇಶವನ್ನು ಕಂಬಳ ವ್ಯಾಪಿಸಿದ್ದು, ಇದರಲ್ಲಿ ನೂರಾರು ಆಹಾರ ಮಳಿಗೆಗಳು ಕೂಡಾ ಇರಲಿವೆ.
30 ಗಂಟೆಗಳ ಮೆಗಾ ಇವೆಂಟ್ ಹೀಗೆ ನಡೆಯುತ್ತದೆ…
ಕಂಬಳ ಆರು ವಿಭಾಗಗಳಲ್ಲಿ ನಡೆಯಲಿದೆ. ಹಗ್ಗದ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಎಂಬ ಎರಡು ವರ್ಗಗಳಿವೆ. ನೇಗಿಲು ವಿಭಾಗದಲ್ಲೂ ಹಿರಿಯ ಮತ್ತು ಕಿರಿಯ ವರ್ಗಗಳಿವೆ. ಉಳಿದಂತೆ ಅಡ್ಡಹಲಗೆ ಮತ್ತು ಕನಹಲಗೆ ವಿಭಾಗಗಳಿವೆ.
ಆರಂಭದಲ್ಲಿ ಹಗ್ಗ ಮತ್ತು ನೇಗಿಲಿನ ಕಿರಿಯ ವಿಭಾಗದ ಕೋಣಗಳ ಒಂಟಿ ಓಟವಿರುತ್ತದೆ. ಈ ಕೋಣಗಳು 155 ಮೀಟರ್ ಓಡಲು ತೆಗೆದುಕೊಳ್ಳುವ ಸಮಯವನ್ನು ನೋಟ್ ಮಾಡಲಾಗುತ್ತದೆ. ಇದು ಅವುಗಳ ನಡುವೆ ಓಟದ ಸ್ಪರ್ಧೆಯನ್ನು ಆಯೋಜಿಸಲು ಅನುಕೂಲವಾಗುತ್ತದೆ.
ಅದೇ ರೀತಿ ಹಗ್ಗ ಮತ್ತು ನೇಗಿಲಿನ ಹಿರಿಯ ವಿಭಾಗದ ಕೋಣಗಳ ಒಂಟಿ ಓಟ ನಡೆದು ಅಲ್ಲೂ ಸಾಲುಗಳ ನಿರ್ಣಯ ಮಾಡಲಾಗುತ್ತದೆ. ಅಡ್ಡಹಲಗೆಯಲ್ಲಿ ಕೂಡಾ ಇದೇ ರೀತಿಯಲ್ಲಿ ಸಾಲು ನಿರ್ಣಯವಾಗುತ್ತದೆ. ಕನಹಲಗೆಯ ಕೋಣಗಳಿಗೆ ಸ್ಪರ್ಧೆ ಇರುವುದಿಲ್ಲ. ಅವು ಒಂಟಿಯಾಗಿ ಓಡುತ್ತಲೇ ನಿಶಾನೆಗೆ ನೀರು ಹಾರಿಸುವ ಸ್ಪರ್ಧೆ.
ಇದನ್ನೂ ಓದಿ: Bangalore Kambala: ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ ಸೇರಿ ಹಲವು ತಾರೆಯರು ಕಂಬಳಕ್ಕೆ ಭಾಗಿ!
ಸಾಮಾನ್ಯವಾಗಿ ಸಂಜೆಯವರೆಗೆ ಒಂಟಿ ಓಟವೇ ಹೆಚ್ಚಾಗಿದ್ದು, ಸಂಜೆ ಮತ್ತು ಕತ್ತಲಿನ ಹೊತ್ತಿಗೆ ಕನಹಲಗೆ ಓಟ ಗಮನ ಸೆಳೆಯಲಿದೆ. ಅದಾದ ಬಳಿಕ ಇತರ ವಿಭಾಗಗಳಲ್ಲಿ ಸ್ಪರ್ಧೆ ಆರಂಭವಾಗುತ್ತದೆ.
ಶನಿವಾರ ಮಧ್ಯಾಹ್ನ ಆರಂಭವಾಗುವ ಕಂಬಳ ಮರುದಿನ ಸಂಜೆ ಐದು ಗಂಟೆಗೆ ಮುಕ್ತಾಯವಾಗಬಹುದು ಎಂಬ ನಿರೀಕ್ಷೆ ಇದೆ. ಕೋಣಗಳ ನಡುವಿನ ಓಟಗಳು ಹಂತ ಹಂತವಾಗಿ ನಡೆದು ಒಂದು ಹಂತದಲ್ಲಿ ಕ್ವಾರ್ಟರ್ ಫೈನಲ್‌ಗೆ ಎಂಟು ಜೋಡಿ ಕೋಣಗಳು ಆಯ್ಕೆಯಾಗುತ್ತವೆ.
ಹಗ್ಗ ಹಿರಿಯ/ಕಿರಿಯ ಮತ್ತು ನೇಗಿಲಿನಲ್ಲಿ ಕ್ವಾರ್ಟರ್ ಫೈನಲ್ ನಡೆದು ಬಳಿಕ ಸೆಮಿಫೈನಲ್, ಆ ಬಳಿಕ ಫೈನಲ್ ನಡೆಯಲಿದೆ. ಎಲ್ಲ ವಿಭಾಗಗಳಲ್ಲೂ ಈ ಹಂತಗಳು ಒಂದಾದನಂತರ ಇನ್ನೊಂದು ನಡೆಯುತ್ತವೆ. ಅಂತಿಮವಾಗಿ ನಡೆಯುವುದು ಕೂಟದಲ್ಲೇ ಅತ್ಯಂತ ಪ್ರತಿಷ್ಠಿತವಾದ ಹಗ್ಗ ಹಿರಿಯ ವಿಭಾಗದ ಕೋಣಗಳ ಓಟ.