Site icon Vistara News

Bangalore Kambala: ಬೆಂಗಳೂರಿಗೆ ಬಂದ ಕೋಣಗಳಿಗೆ ಕುಡಿಯಲು ಮಂಗಳೂರಿನಿಂದಲೇ ನೀರು; ಯಾಕೆ?

Buffalos from Coastal Karnataka

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಕರಾವಳಿಯನ್ನು ಹೊರತುಪಡಿಸಿದ ಜಾಗದಲ್ಲಿ ಕಂಬಳ ನಡೆಯುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace Grounds) ನವೆಂಬರ್‌ 25 ಮತ್ತು 26ರಂದು ಅದ್ಧೂರಿ ಬೆಂಗಳೂರು ಕಂಬಳಕ್ಕೆ (Bangalore Kambala) ಸಕಲವೂ ಸಿದ್ಧವಾಗಿದೆ. ಕಂಬಳದಲ್ಲಿ ಭಾಗವಹಿಸಲು ಸುಮಾರು 200 ಜೋಡಿ ಕೋಣಗಳು (200 Pair of Buffalos) ಕರಾವಳಿಯ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸಿವೆ. ಅಷ್ಟು ದೂರದಿಂದ ಬಂದರೂ ಈ ಕೋಣಗಳು ಕುಡಿಯುವುದು ಮಾತ್ರ ಕರಾವಳಿಯ ನೀರೇ.. (Water from Coastal) ಎಂದರೆ ಅಚ್ಚರಿಪಡುತ್ತೀರಾ?

ಹೌದು, ಕರಾವಳಿಯಿಂದ ಬಂದಿರುವ ಅಷ್ಟೂ ಕೋಣಗಳಿಗೆ ಕುಡಿಯಲು ಬೇಕಾದ ನೀರನ್ನು ಕರಾವಳಿಯಿಂದಲೇ ತರಲಾಗಿದೆ. ಟ್ಯಾಂಕರ್‌ಗಳಲ್ಲಿ ನೀರು ತುಂಬಿಕೊಂಡು ಬರಲಾಗಿದ್ದು, ಅವುಗಳಿಗೆ ಆ ನೀರನ್ನು ಮಾತ್ರ ನೀಡಲಾಗುತ್ತಿದೆ.

ಕೋಣಗಳ ಮಾಲೀಕರು ಕೋಣಗಳ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಬೆಂಗಳೂರು ಕಂಬಳಕ್ಕೆ ನೋಂದಣಿಯಾಗಿರುವ 228 ಜೋಡಿ ಕೋಣಗಳ ಪೈಕಿ 200 ಜೋಡಿ ಕೋಣಗಳನ್ನು ಆಯ್ಕೆ ಮಾಡಿ ತರಲಾಗಿದೆ. ಅವುಗಳ ಆರೋಗ್ಯಕ್ಕೆ ಸಂಬಂಧಿಸಿ ಈಗಾಗಲೇ ಪಶು ವೈದ್ಯರೇ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಈ ರೀತಿ ಪ್ರಮಾಣ ಪತ್ರ ನೀಡುವುದು ಪ್ರಾಣಿ ರಕ್ಷಣಾ ಕಾಯಿದೆಯಡಿ ಕೂಡಾ ಅವಶ್ಯವಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಕೋಣಗಳು ಕರಾವಳಿ ಬಿಟ್ಟು ಬೆಂಗಳೂರಿಗೆ ಬಂದಿವೆ. ಹಿಂದೆ ಮುಂಬಯಿಯಲ್ಲಿ ನಡೆದ ಕಂಬಳದಲ್ಲಿ ಕೆಲವು ಕೋಣಗಳು ಭಾಗವಹಿಸಿದ್ದು ಬಿಟ್ಟರೆ ಬೇರೆ ಕಡೆ ಹೋಗಿದ್ದು ಇದೇ ಮೊದಲು. ಹೀಗಾಗಿ ಕುಡಿಯುವ ನೀರಿನಲ್ಲಿ ವ್ಯತ್ಯಾಸವಾಗಿ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕಾಗಿ ವಿಶೇಷ ಎಚ್ಚರಿಕೆಯನ್ನು ವಹಿಸಲಾಗಿದೆ.

ಹೀಗಾಗಿ ಕೋಣಗಳಿಗೆ ಕೊಡಬೇಕಾದ ಆಹಾರ, ಬೈ ಹುಲ್ಲನ್ನು ಅಲ್ಲಿಂದಲೇ ಲಾರಿಯಲ್ಲಿ ಹಾಕಿ ತರಲಾಗಿದೆ. ಎಲ್ಲ ಕೋಣಗಳಿಗೆ ಬೇಕಾಗುವಷ್ಟು ನೀರನ್ನು ಕೂಡಾ ಅಲ್ಲಿಂದಲೇ ಟ್ಯಾಂಕರ್‌ ಮೂಲಕ ತರಲಾಗಿದೆ. ಈ ಕಂಬಳಕ್ಕೆ ಪಶುವೈದ್ಯರು ಮತ್ತು ನಾಟಿ ವೈದ್ಯರು ಕೂಡಾ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: Bangalore Kambala : ಕ್ರಿಕೆಟ್‌ಗಿಂತಲೂ ಮೊದಲೇ ಶುರುವಾಗಿತ್ತು DAY and NIGHT ಕಂಬಳ!

ಕೋಣಗಳ ಮಾಲೀಕರು ತಮ್ಮ ಆರೋಗ್ಯಕ್ಕಿಂತಲೂ ಕೋಣಗಳ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಅದರಲ್ಲೂ ನವೆಂಬರ್‌ನಿಂದ ಆರಂಭಗೊಂಡು ಏಪ್ರಿಲ್‌ವರೆಗೆ ಸಾಗುವ ಕಂಬಳದ ಋತುವಿನಲ್ಲಂತೂ ಅದು ಇನ್ನೂ ಜಾಸ್ತಿ ಇರುತ್ತದೆ. ಯಾಕೆಂದರೆ ಈ ಕೋಣಗಳು ಪ್ರತಿ ವಾರ ಒಂದೊಂದು ಕಂಬಳದಲ್ಲಿ ಎರಡು ದಿನಗಳ ಕಾಲ ಭಾಗವಹಿಸಬೇಕಾಗಿರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ನಿರಂತರವಾಗಿ ಕಂಬಳ ಇದ್ದೇ ಇರುತ್ತದೆ. ಹೀಗಾಗಿ ಅವುಗಳ ಆರೋಗ್ಯ ತುಂಬ ಮುಖ್ಯವಾಗಿರುತ್ತದೆ.

ತುಳುನಾಡಿನ ಕಂಬಳ ಸಾಧಕ ಮುನ್ನ ಬಂದಿದ್ದಾನೆ!

ತುಳುನಾಡಿನ ಕಂಬಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಭಾರಿ ಸಾಧನೆ ಮಾಡುತ್ತಿರುವ ಕೋಣ ಮುನ್ನಾ ಬೆಂಗಳೂರಿಗೆ ಆಗಮಿಸಿದ್ದು ಭಾರಿ ಆಕರ್ಷಣೆಗೆ ಒಳಗಾಗಿದ್ದಾನೆ.

ಕರೆಯಲ್ಲಿ ಇಳಿದಾಗ ಪಕ್ಕದ ಕೋಣವನ್ನು ನೋಡಿಕೊಂಡು ಓಡುವ ಸ್ಪೆಷಾಲಿಟಿ ಹೊಂದಿರುವ ಮುನ್ನಾ ಕಳೆದ ಎರಡು ವರ್ಷಗಳಲ್ಲಿ 25 ಕೂಟಗಳಲ್ಲಿ ಗೆಲುವು ಸಾಧಿಸಿದ್ದಾನೆ. ಬೆಂಗಳೂರಿನಲ್ಲೂ ಆತ ಚಾಂಪಿಯನ್‌ ಆಗ್ತಾನೆ ಎನ್ನುವ ವಿಶ್ವಾಸವನ್ನು ಮಾಲೀಕರಾಗಿರುವ ಎರ್ಮಾಳ್‌ ರೋಹಿತ್‌ ಹೆಗ್ಡೆ ವ್ಯಕ್ತಪಡಿಸಿದ್ದಾರೆ. ಹಾಗಂತ ಗೆಲ್ಲಲೇಬೇಕು ಎನ್ನುವ ಹಠವೇನೂ ಇಲ್ಲ. ಗೆದ್ದರೂ, ಸೋತರೂ ನಮಗೆ ಖುಷಿ ಇದೆ ಎಂದ ರೋಹಿತ್ ಹೆಗ್ಡೆ ಹೇಳಿದ್ದಾರೆ. ನಾವು ಕೋಣಗಳನ್ನು ದೇವರಂತೆ, ಪುಟ್ಟ ಮಕ್ಕಳಂತೆ ನೋಡಿಕೊಳ್ಳುತ್ತೇವೆ ಎನ್ನುವ ಅವರು ಅವುಗಳ ಪಾಲನೆ, ಪೋಷಣೆ ಬಗ್ಗೆ ಮಾತನಾಡಿದ್ದಾರೆ.

Exit mobile version