ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಬೆಂಗಳೂರು ಕಂಬಳಕ್ಕೆ (Bangalore Kambala) ಕಂಬಳ ಲೋಕದ ಫಾಸ್ಟೆಸ್ಟ್ ಓಟಗಾರರು (Fastest Runners) ಮಾತ್ರವಲ್ಲ, ಒಂದು ಹಂತದಲ್ಲಿ ಅತಿವೇಗದ ಓಟಗಾರ ಉಸೇನ್ ಬೋಲ್ಟ್‌ನನ್ನೇ (Usain Bolt) ಮೀರಿಸಿದ ಅನಧಿಕೃತ ದಾಖಲೆ ಹೊಂದಿರುವ ಪ್ರಚಂಡ ವೇಗಿಗಳು ಬಂದಿದ್ದಾರೆ. ಬೆಂಗಳೂರಿನ ಟ್ರ್ಯಾಕ್ ಹೊಸದಾಗಿದೆ ಮತ್ತು ಕರಾವಳಿಯ ಟ್ರ್ಯಾಕ್‌ಗಿಂತಲೂ ಉತ್ತಮವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಿದ್ದರೆ ಈ ಟ್ರ್ಯಾಕ್‌ನಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತದಾ? ಯಾರು ಈ ದಾಖಲೆ ನಿರ್ಮಿಸಬಹುದು ಎಂಬ ಕುತೂಹಲ ಜೋರಾಗಿದೆ.
ಕಂಬಳ ಲೋಕದಲ್ಲಿ ಅತಿ ವೇಗದ ಓಟಗಾರ ಎಂಬ ಹೆಸರನ್ನು ಮೊದಲು ದಾಖಲಿಸಿದವರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು. ಉಕ್ಕಿನಂಥ ಸ್ನಾಯುಗಳು, ಅಪಾರವಾದ ದೇಹಬಲದೊಂದಿಗೆ ಸಿಕ್ಸ್ ಪ್ಯಾಕ್‌ನೊಂದಿಗೆ ಮಿಂಚುವ ಶ್ರೀನಿವಾಸ್ ಗೌಡ ಅವರು 2020ರಲ್ಲಿ 142 ಮೀಟರ್ ಉದ್ದದ ಕಂಬಳ ಕರೆಯನ್ನು ಕೇವಲ 13.42 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಅವರ ವೇಗವನ್ನು 100 ಮೀಟರ್‌ಗೆ ಸರಿ ಹೊಂದಿಸಿದರೆ ಅದು 9.58 ಸೆಕೆಂಡ್ ಆಗುತ್ತದೆ. ಜಗತ್ತಿನ ಕ್ರೀಡಾ ಲೋಕದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ಬರೆದಿರುವ ವಿಶ್ವ ದಾಖಲೆಯೂ 9.58 ಸೆಕೆಂಡ್. ನಂತರದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು ಈ ಸಾಧನೆಯನ್ನು 9.55 ಸೆಕೆಂಡ್‌ಗೆ ಏರಿಸಿಕೊಂಡಿದ್ದಾರೆ. ಕೇಂದ್ರ ಕ್ರೀಡಾ ಸಚಿವರಾಗಿದ್ದ ಕಿರಣ್ ರಿಜಿಜು ಅವರೇ ಶ್ರೀನಿವಾಸ ಗೌಡರ ಸಾಧನೆಯನ್ನು ಕೊಂಡಾಡಿದ್ದರು.
I'll call Karnataka's Srinivasa Gowda for trials by top SAI Coaches. There's lack of knowledge in masses about the standards of Olympics especially in athletics where ultimate human strength & endurance are surpassed. I'll ensure that no talents in India is left out untested. https://t.co/ohCLQ1YNK0
— Kiren Rijiju (@KirenRijiju) February 15, 2020
ಕಂಬಳದ ಇನ್ನೂ ಹಲವು ಓಟಗಾರರು ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮೀರಿಸಿ ಮುನ್ನಡೆದಿದ್ದಾರೆ. ಇವರ ಪೈಕಿ ಬಜಗೋಳಿ ಜೋಗಿ ಬೆಟ್ಟು ನಿಶಾಂತ್ ಶೆಟ್ಟಿ ಅವರು 100 ಮೀಟರ್ ದೂರವನ್ನು ಕೇವಲ 9.51 ಸೆಕೆಂಡ್‌ನಲ್ಲಿ ಕ್ರಮಿಸಿದ್ದು ಈಗ ಇರುವ ದಾಖಲೆ. ಅದರ ನಡುವೆ ಇವತ್ತೂರು ಆನಂದ ಅವರು 9.57 ಸೆಕೆಂಡ್, ಅಕ್ಕೇರಿ ಸುರೇಶ್ ಶೆಟ್ಟಿ ಅವರು ಕೂಡಾ 9.57 ಸೆಕೆಂಡ್‌ನಲ್ಲಿ 100 ಮೀಟರ್ ಕ್ರಮಿಸಿದ ದಾಖಲೆಯನ್ನು ಹೊಂದಿದ್ದಾರೆ.
ಇನ್ನು ಹಲವು ಓಟಗಾರರು ಈ ದಾಖಲೆಯನ್ನು ಮುರಿದು ಮುನ್ನುಗ್ಗಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಕಂಬಳದಲ್ಲಿ ಈ ದಾಖಲೆ ಮುರಿಯಬಹುದಾ ಎಂಬ ಕುತೂಹಲ ಜೋರಾಗಿದೆ.
ಆದರೆ, ಕಂಬಳ ಅಕಾಡೆಮಿ ಮಾತ್ರ ಕಂಬಳದ ಈ ದಾಖಲೆಗಳನ್ನು ಈಗಲೇ ಉಸೇನ್ ಬೋಲ್ಟ್ ಜತೆಗೆ ಹೋಲಿಕೆ ಮಾಡುವುದು ಬೇಡ. ಇನ್ನಷ್ಟು ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಅದನ್ನು ದೃಢಪಡಿಸೋಣ ಎಂದು ಹೇಳಿದೆ.
ಈಗಿರುವ ದಾಖಲೆಗಳು ಇವು
1.ಬಜಗೋಳಿ ಜೋಗಿನಬೆಟ್ಟು ನಿಶಾಂತ್ ಶೆಟ್ಟಿ- 9.51 ಸೆಕೆಂಡ್
2. ಅಶ್ವತ್ಥಪುರ ಶ್ರೀನಿವಾಸ ಗೌಡ: 9.55 ಸೆಕೆಂಡ್
3. ಕೊಳಕೆ ಇರ್ವತ್ತೂರು ಆನಂದ್: 9.57 ಸೆಕೆಂಡ್
4. ಹೊಕ್ಕಾಡಿಗೋಳಿ ಅಕ್ಕೇರಿ ಸುರೇಶ್ ಶೆಟ್ಟಿ: 9.57 ಸೆಕೆಂಡ್
ಇವರಲ್ಲದೆ, ಮಾಳ ಆದೀಶ್ ಪೂಜಾರಿ, ಪಣಪಿಲ ಪ್ರವೀಣ್ ಕೋಟ್ಯಾನ್, ಬೈಂದೂರು ವಿಶ್ವನಾಥ ದೇವಾಡಿಗ, ಈಶಾನ್ ಮಾಳ, ಭರತ್ ಮಾಳ, ಭಟ್ಕಳ ಶಂಕರ್ ಸೇರಿದಂತೆ ಹಲವು ಹುಡುಗರು ವೇಗದ ಚಿಗರೆಗಳಾಗಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ: Bangalore Kambala: ಕೋಣಗಳು ತಿನ್ನೋ ಪೌಷ್ಟಿಕ ತಿಂಡಿಗಳನ್ನು ಪ್ರಾಣಿ ದಯಾ ಸಂಘದವರು ಜೀವಮಾನದಲ್ಲಿ ತಿಂದಿರಲಿಕ್ಕಿಲ್ಲ!
ಕಂಬಳವನ್ನು ಆಳಿದ ಮಹಾನ್ ಓಟಗಾರರು
ಆಧುನಿಕ ಕಂಬಳದ 54 ವರ್ಷಗಳ ಇತಿಹಾಸದಲ್ಲಿ ಹಲವಾರು ಓಟಗಾರರು ತಮ್ಮ ಶಕ್ತಿ, ದೈಹಿಕ ಕ್ಷಮತೆಯನ್ನು ಪ್ರದರ್ಶಿಸಿದ್ದಾರೆ. ಒಂದು ವೇಳೆ ಈಗಿನ ತಂತ್ರಜ್ಞಾನದ ಸಹಾಯ, ಲೆಕ್ಕಾಚಾರಗಳು ಇರುತ್ತಿದ್ದರೆ ಅವರ ಹೆಸರು ಇನ್ನೂ ದೊಡ್ಡ ಮಟ್ಟದಲ್ಲಿ ಮಿಂಚುವ ಸಾಧ್ಯತೆಗಳಿದ್ದವು.
ವೀರಕಂಬ ಜಯಂತ್ ಶೆಟ್ಟಿ, ಪೇಜಾವರ ಭಾಸ್ಕರ್, ಪಚ್ಚಾಜೆ ಶೀನ ಮೂಲ್ಯ, ಕಕ್ಕೆಪದವು ಜಯ ಶೆಟ್ಟಿ, ಶರತ್ ಕುಮಾರ್ ಬೆಳ್ತಂಗಡಿ, ಸತೀಶ್ ಕುಮಾರ್ ಪಾಂಜಾಲ, ಅಶೋಕ್ ಕುಮಾರ್ ಈದು, ರಮ್ಯಾನ್ ಬ್ಯಾರಿ, ಅಬ್ಬುಬ್ಯಾರಿ, ಬೆನೆಡಿಕ್ಟ್ ಗೋವಿಯಸ್ ಕನ್ನಡಿಕಟ್ಟೆ, ಪ್ರವೀಣ್ ಸಾಣೂರು ಮೊದಲಾದವರು ಕಂಬಳ ಲೋಕದ ಅಪ್ರತಿಮ ಓಟಗಾರರು.
ಪೋಲಿಯೊ ಪೀಡಿತ ಕಾಲಿನೊಂದಿಗೆ ಚಿನ್ನ ಗೆಲ್ಲುತ್ತಿದ್ದ ದೇವೇಂದ್ರ ಕೋಟ್ಯಾನ್!
ಇವರೆಲ್ಲರ ನಡುವೆ ಅದ್ಭುತ ಸಾಧಕರಾಗಿ ಗಮನ ಸೆಳೆದವರು ದೇವೇಂದ್ರ ಕೋಟ್ಯಾನ್. ಕೊಳಚೂರು-ಕೊಂಡೊಟ್ಟು ಸುಕುಮಾರ್ ಶೆಟ್ಟಿಯ ಹಗ್ಗ ಹಿರಿಯ ವಿಭಾಗದ ಕೋಣಗಳನ್ನು ಓಡಿಸುತ್ತಿದ್ದ ಪಲಿಮಾರು ದೇವೇಂದ್ರ ಕೋಟ್ಯಾನ್ ಅವರ ಒಂದು ಒಂದು ಕಾಲು ಪೋಲಿಯೊ ಪೀಡಿತವಾಗಿತ್ತು. ನಡೆಯಲು ಕಷ್ಟಪಡುತ್ತಿದ್ದ ಅವರು ಹಗ್ಗ ಹಿಡಿದರೆಂದರೆ ಮಿಂಚಿನ ವೇಗ ಪಡೆಯುತ್ತಿದ್ದರು!