ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರದಿಂದ ಟೋಲ್ ಸಂಗ್ರಹ (toll collection) ಆರಂಭವಾಗಿದೆ. ಆದರೆ ಟೋಲ್ ಸಂಗ್ರಹ ಸರಿಯಾಗಿಲ್ಲ ಎಂದು ಆಕ್ಷೇಪಿಸಿರುವ ಜಾತ್ಯತೀತ ಜನತಾ ದಳದ ಕಾರ್ಯಕರ್ತರು, ಇಂದು ಟೋಲ್ ಗೇಟ್‌ಗೆ ಮುತ್ತಿಗೆ ಹಾಕಲಿದ್ದಾರೆ.
ಜನಸಾಮಾನ್ಯರು ಟೋಲ್ ಬರೆಯಿಂದ ಬೇಸತ್ತಿದ್ದಾರೆ. ಟೋಲ್ ದರ, ಸರ್ವೀಸ್ ರಸ್ತೆ ಇಲ್ಲದಿರುವುದರ ಬಗ್ಗೆ ಕಿಡಿ ಕಾರುತ್ತಿದ್ದಾರೆ ಎಂದು ಆಕ್ಷೇಪಿಸಿರುವ ಜೆಡಿಎಸ್ ಇಂದು ಟೋಲ್ ಪ್ಲಾಜಾಗೆ ಮುತ್ತಿಗೆ ಹಾಕಲಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಮುತ್ತಿಗೆ ಯೋಜಿಸಲಾಗಿದೆ. ಟೋಲ್ ಬಳಿ ಪ್ರತಿಭಟಿಸಿ, ಜನರಿಗೆ ಆಗುತ್ತಿರುವ ಅನನುಕೂಲದ ವಿರುದ್ಧ ಅರಿವು ಮೂಡಿಸಲಿದೆ.
ಮಂಗಳವಾರ, ಇಲ್ಲಿ ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ್ದರು. ಈ ನಡುವೆ, ಎಕ್ಸ್‌ಪ್ರೆಸ್‌ವೇಯಲ್ಲಿ ಕಾಮಗಾರಿ ಪೂರ್ಣಕ್ಕೆ ಮುನ್ನವೇ ಟೋಲ್ ಸಂಗ್ರಹ ಹಾಗೂ ಫಾಸ್ಟ್‌ಟ್ಯಾಗ್ ಇಲ್ಲದೆ ಮ್ಯಾನುವಲ್ ಆಗಿ ಟೋಲ್ ಸಂಗ್ರಹ ಮಾಡುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಹೈಕೋರ್ಟ್ ಸೂಚನೆ ನೀಡಿದೆ.