ಬೆಂಗಳೂರು: ನಗರದ ಪೊಲೀಸ್ ವಿಭಾಗ ವ್ಯಾಪ್ತಿಯಲ್ಲಿ 10 ಹೊಸ ಠಾಣೆಗಳ ರಚನೆಗೆ ಸಿದ್ಧತೆ ನಡೆದಿದೆ.
ನಗರ ಬೆಳೆದಂತೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಅಪರಾಧ ಕೃತ್ಯ ತಡೆಗಟ್ಟಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನಷ್ಟು ಪೊಲೀಸ್ ಪಡೆ ಅಗತ್ಯವಿದೆ. ಹೀಗಾಗಿ ವಿಸ್ತರಣೆಗೆ ಗೃಹ ಇಲಾಖೆ ಮುಂದಾಗಿದೆ.
ನಗರದಲ್ಲಿ ಸದ್ಯ 114 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ, 44 ಸಂಚಾರಿ, 2 ಮಹಿಳಾ ಠಾಣೆ ಹಾಗೂ 9 ಸೈಬರ್ ಠಾಣೆಗಳಿವೆ. ಈ ಪಟ್ಟಿಗೆ 10-12 ಠಾಣೆಗಳನ್ನು ಸೇರಿಸಲು ಗೃಹ ಇಲಾಖೆ ಮುಂದಾಗಿದೆ. 4-5 ಸಂಚಾರ ಠಾಣೆ ಹಾಗೂ 5-6 ಕಾನೂನು ಸುವ್ಯವಸ್ಥೆ ಠಾಣೆಗಳು ಈ ಪಟ್ಟಿಯಲ್ಲಿವೆ.
ಇದನ್ನು ಓದಿ | ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಉತ್ತರ ವಿಭಾಗದ ಸೋಲದೇವನಹಳ್ಳಿ, ಬಾಗಲಗುಂಟೆ, ಪೀಣ್ಯ, ಪೂರ್ವ ವಿಭಾಗದ ಬ್ಯಾಡರಹಳ್ಳಿ, ಅಂದ್ರಹಳ್ಳಿ, ಕೆಂಗೇರಿ ಜ್ಞಾನಭಾರತಿ, ದಕ್ಷಿಣ ವಿಭಾಗದ ತಲಘಟ್ಟಪುರ, ಸುಬ್ರಮಣ್ಯಪುರ ವ್ಯಾಪ್ತಿಯ ಉತ್ತರಹಳ್ಳಿ, ಪೂರ್ವ ವಿಭಾಗದ ರಾಮಮೂರ್ತಿ ನಗರ ವ್ಯಾಪ್ತಿಯ ಕಲ್ಕೆರೆ, ವೈಟ್‌ಫೀಲ್ಡ್ ವಿಭಾಗದ ವರ್ತೂರು, ಮಾರತಹಳ್ಳಿ ವಿಭಾಗದಲ್ಲಿ ಹೊಸದಾಗಿ ಠಾಣೆ ತೆರೆಯಲು ಇಲಾಖೆಗೆ ಪ್ರಸ್ತಾಪ ಕಳಿಸಲಾಗಿದೆ. ಬ್ಯಾಡರಹಳ್ಳಿ, ವರ್ತೂರು, ಬೆಳ್ಳಂದೂರು ಭಾಗದಲ್ಲಿ ಸಂಚಾರ ಪೊಲೀಸ್ ಠಾಣೆ ತೆರೆಯಲು ತಯಾರಿ ನಡೆಯುತ್ತಿದೆ.
ಗಡಿ ಭಾಗದ ಪೊಲೀಸ್ ಠಾಣೆಗಳಲ್ಲಿ ವರ್ಷಕ್ಕೆ 800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅಧಿಕಾರಿ, ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ತನಿಖೆ ಕೂಡ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಜನಸಂಖ್ಯೆ ಆಧಾರದ ಮೇಲೆ ಠಾಣೆ ರಚಿಸಲು ಇಲಾಖೆ ಮುಂದಾಗಿದ್ದು, ಹೊಸವರ್ಷದ ಆರಂಭದಲ್ಲಿ ಹೊಸ ಠಾಣೆಗಳು ತಲೆ ಎತ್ತಲಿವೆ.
ಇದನ್ನೂ ಓದಿ | ಪರೇಶ್ ಮೇಸ್ತಾ ಸಾವು ಪ್ರಕರಣ ಸಿಬಿಐನಿಂದಲೇ ಮರು ತನಿಖೆಯಾಗಲಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ