ಬೆಂಗಳೂರು: ಇದು ನಿಜಕ್ಕೂ ಮನ ಕಲಕುವ, ಆಕಸ್ಮಿಕ ದುರಂತ ಘಟನೆ. ಬೆಂಗಳೂರಿನ ರಸ್ತೆ ಗುಂಡಿಗಳು ಪಡೆದ ಮತ್ತೊಂದು ಅಮಾಯಕ ಜೀವಬಲಿ.
ತಂದೆ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ 10 ವರ್ಷದ ಬಾಲಕ ಜೀವನ್ ಮೃತ ದುರ್ದೈವಿ. ಮೃತ ಬಾಲಕನ ತಂದೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ರಾತ್ರಿ 8.40ರ ಸಮಯ. ಕಾನ್ಸ್‌ಟೇಬಲ್ ಆಗಿರುವ ತಂದೆ ತರಕಾರಿ ತರಲೆಂದು ಮನೆಯಿಂದ ಹೊರಟಿದ್ದರು. 10 ವರ್ಷದ ಬಾಲಕ ಕ್ರಿಕೆಟ್ ಬಾಲ್ ಬೇಕು ಎಂದು ಪಟ್ಟು ಹಿಡಿದಿದ್ದ. ಹಾಗೆ ತಂದೆಯ ಬೈಕ್ ಹತ್ತಿ ಬಂದಿದ್ದ ಬಾಲಕ ಸಾವಿನ ಮನೆ ಸೇರಿದ್ದಾನೆ. ಕಂದಮ್ಮನನ್ನು ಕರೆತಂದ ತಂದೆಯ ರೋದನ ಮುಗಿಲುಮುಟ್ಟಿದೆ. ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ.
10 ವರ್ಷದ ಜೀವನ್ 4ನೇ ತರಗತಿ ಓದುತ್ತಿದ್ದ. ಚಿತ್ರದಲ್ಲಿ ಪ್ರೀತಿಯಿಂದ ಕೇಕ್ ತಿನ್ನಿಸ್ತಿರುವವರು ಜೀವನ್ ತಂದೆ ಸಂತೋಷ್, ವೃತ್ತಿಯಲ್ಲಿ ಪೊಲೀಸ್. ಬೇಗೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇಗೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಕೆ.ಆರ್.ಪುರಂನ ಪೊಲೀಸ್ ಕ್ವಾರ್ಟರ್‌ನಲ್ಲಿ ವಾಸವಿದ್ದರು.
ಬಾಲಕ ಜೀವನ್‌ಗೆ ಕ್ರಿಕೆಟ್ ಅಂದರೆ ಇನ್ನಿಲ್ಲದ ಪ್ರೀತಿ. ನಿನ್ನೆ ರಾತ್ರಿ 8.30ಕ್ಕೆ ಮನೆಯಿಂದ ತಂದೆ ತರಕಾರಿ ತರಲೆಂದು ಹೊರಟಿದ್ದರು. ಈ ವೇಳೆ ಜೀವನ್ ತಂದೆಗೆ ಕ್ರಿಕೆಟ್ ಬಾಲ್ ಕೊಡಿಸುವಂತೆ ಹೇಳಿದ್ದ. ಮಗುವನ್ನು ಕರೆದುಕೊಂಡು ಹೋಗೋಣ ಎಂದು ಬೈಕ್ ಹತ್ತಿಸಿಕೊಂಡು ಕರೆತಂದಿದ್ದರು. ಹೊಸಕೋಟೆಯಿಂದ ಕೆ.ಆರ್ ಪುರಂ ರಸ್ತೆ ಮಾರ್ಗವಾಗಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಡಿಆರ್‌ಡಿಓದ ದೈತ್ಯಗಾತ್ರದ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯಲ್ಲಿ ಗುಂಡಿ ಹಾಗೂ ಸಣ್ಣ ಸಣ್ಣ ಪುಡಿ ಜಲ್ಲಿಕಲ್ಲು ಇದ್ದಿದ್ದರಿಂದ ಸ್ಕಿಡ್ ಆಗಿ ಬೈಕ್ ಕೆಳಗೆ ಬಿದ್ದಿದೆ. ತಂದೆ ಎಡಭಾಗಕ್ಕೆ ಬಿದ್ದರೆ ಮಗ ಬಲ ಭಾಗಕ್ಕೆ ಬಿದ್ದಿದ್ದಾರೆ. ಟ್ರಕ್‌ನನ ಟೈರ್ ಜೀವನ್ ತಲೆ ಮೇಲೆ ಹತ್ತಿದ್ದು, ಜೀವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಕೆಆರ್ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರಿನ ರಸ್ತೆಗಳ ಪೂರ್ತಿ ಗುಂಡಿಗಳೇ ತುಂಬಿಹೋಗಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ. ಮಾತ್ರವಲ್ಲ ಇವು ದ್ವಿಚಕ್ರ ವಾಹನ ಸವಾರರಿಗೆ ಯಮಸದೃಶವಾಗಿವೆ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: Rain News | ಮಳೆ ಅಬ್ಬರಕ್ಕೆ ಅಪಘಾತ ಸರಮಾಲೆ, ಕೊಟ್ಟಿಗೆಹಾರ ಬಳಿ 48 ಗಂಟೆಯಲ್ಲಿ 10 ಆ್ಯಕ್ಸಿಡೆಂಟ್