Site icon Vistara News

Pothole | ಯಮಸ್ವರೂಪಿ ರಸ್ತೆ ಗುಂಡಿಯಿಂದಾಗಿ ಕೋಮಾಗೆ ಹೋದ ಬೈಕ್‌ ಸವಾರ

ರಸ್ತೆ ಗುಂಡಿ

ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳಿಂದ ಆಗುತ್ತಿರುವ ಗಂಡಾಂತರ ಇನ್ನಷ್ಟು ಮುಂದುವರಿದಿದೆ. ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರರೊಬ್ಬರು ಕೋಮಾಗೆ ಹೋಗಿದ್ದಾರೆ.

ರಸ್ತೆ ಗುಂಡಿಗಳಿಂದ ದಿನಕ್ಕೊಂದು ಪ್ರಾಣ ಹೋಗುತ್ತಿದ್ದರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ. ಬಿಬಿಎಂಪಿಗೆ ಬೆಂಗಳೂರಲ್ಲಿ ಇನ್ನೆಷ್ಟು ಬಲಿ ಬೇಕೋ ತಿಳಿಯುತ್ತಿಲ್ಲ. ಬಲಿಗಾಗಿ ಬಾಯಿ ತೆರೆದು ಕುಳಿತ ಯಮಸ್ವರೂಪಿ ರಸ್ತೆ ಗುಂಡಿಗಳು ಬೈಕ್‌ ಸವಾರರನ್ನೇ ಕಾದು ಕುಳಿತಿವೆ. ಇಂಥದೊಂದು ರಸ್ತೆ ಗುಂಡಿಗೆ ಬಿದ್ದು ಕೋಮಾ ಸೇರಿದ ಬೈಕ್ ಸವಾರರೊಬ್ಬರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿರುವ ಗುಂಡಿಗೆ ವಿದ್ಯಾರಣ್ಯಪುರದ ನಿವಾಸಿಯಾಗಿರುವ 37 ವರ್ಷದ ಸಂದೀಪ್ ಎಂಬವರು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಗುಂಡಿಗೆ ಬಿದ್ದು ತಲೆಗೆ ತೀವ್ರವಾದ ಗಾಯವಾಗಿರುವ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ 9.30ಕ್ಕೆ ಸ್ನೇಹಿತರ ಜೊತೆ ಕ್ರಿಕೆಟ್ ಆಟ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದೀಪ್‌, ರಸ್ತೆಯಲ್ಲಿದ್ದ ಗುಂಡಿ ಕಾಣಿಸದೇ ಬಿದ್ದಿದ್ದಾರೆ. ಪರಿಣಾಮ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ತಕ್ಷಣ ಹೆಚ್‌ಎಂಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಹೆಚ್‌ಎಂಟಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರವಾಗಿ ಗಾಯವಾದ ಪರಿಣಾಮ ಸಂದೀಪ್‌ಗೆ ಆಪರೇಷನ್ ಮಾಡಲಾಗಿದೆ. ಸದ್ಯ ಅವರು ಕೋಮಾದಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Pothole | ಬೆಂಗಳೂರು ರಸ್ತೆ ಗುಂಡಿಯಿಂದಾಗಿ ಬೈಕ್‌ ಸವಾರ ಸಾವು

Exit mobile version