ಬೆಂಗಳೂರು: ಪೋಷಕರೇ, ರಾಜಧಾನಿಯ ಬೀದಿಯಲ್ಲಿ ನಿಮ್ಮ ಮಕ್ಕಳನ್ನು ಆಡಲು ಬಿಡುವವರು ನೀವಾದರೆ ಕಟ್ಟೆಚ್ಚರ ವಹಿಸಿ. ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ದಿನಕ್ಕೆ ಸರಾಸರಿ 70 ಮಂದಿ ಇವುಗಳ ಕಡಿತಕ್ಕೊಳಗಾಗುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಇವರಲ್ಲೂ ಮಕ್ಕಳೇ ಅಧಿಕ.
ಪಶುಸಂಗೋಪನೆ ಇಲಾಖೆ ನೀಡಿದ ಮಾಹಿತಿಯಿದು. ಕಳೆದ 3 ವರ್ಷದಲ್ಲಿ 70,057 ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. 2019-2020ರಲ್ಲಿ 42,818 ಪ್ರಕರಣ, 2020-2021ರಲ್ಲಿ 18,629 ಪ್ರಕರಣ, 2021-2022ರಲ್ಲಿ 17,610 ಪ್ರಕರಣ ಕಂಡುಬಂದಿವೆ. ರಾತಿ ವೇಳೆಯೇ ಅತಿ ಹೆಚ್ಚು ದಾಳಿಗಳು ನಡೆದಿವೆ. ರಾತ್ರಿ ವೇಳೆ ಓಡಾಡುವ ಜನರ ಮೇಲೆ ನಾಯಿಗಳು ಎಗರುತ್ತಿದ್ದು, ರಸ್ತೆ ಬದಿಯಲ್ಲಿರುವ ನಿರ್ಗತಿಕರನ್ನೂ ಬಿಡದೆ ಕಾಡುತ್ತಿವೆ.
ವಾಹನದಲ್ಲಿ ತೆರಳುವವರಿಗೂ ಇವು ಕಾಟ ಕೊಡುತ್ತಿದ್ದು, ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ನಾಯಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ. ನಾಯಿಗಳ ಕಾಟಕ್ಕೆ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಬೀದಿ ನಾಯಿಗಳಿಗೆ ಅಮಾಯಕ ಮಕ್ಕಳ ಬಲಿ, ಈ ಸಾವಿಗೆ ಯಾರು ಹೊಣೆ?
ಬಿಬಿಎಂಪಿ ವ್ಯಾಪ್ತಿಯಲ್ಲಿ 3.09 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ನಾಯಿಗಳ ಹಾವಳಿ ತಡೆಯಲು ವರ್ಷಕ್ಕೆ 3ರಿಂದ 5 ಕೋಟಿ ಖರ್ಚು ಮಾಡಲಾಗುತ್ತಿದೆ. ಇವುಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವುದಕ್ಕೆಂದು ಕೋಟಿಗಟ್ಟಲೆ ಖರ್ಚು ತೋರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 1,81,585 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ಲೆಕ್ಕವಿದೆ. ಆದರೂ ನಾಯಿಗಳು ಮರಿ ಹಾಕುವ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. 2,53,536 ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕಲಾಗಿದೆಯಂತೆ.
ಯಾವ ವಲಯದಲ್ಲಿ ಎಷ್ಟು ನಾಯಿಗಳಿವೆ..?
ವಲಯ | ಬೀದಿ ನಾಯಿಗಳ ಸಂಖ್ಯೆ |
ಪೂರ್ವ ವಲಯ | 44,302 |
ಪಶ್ಚಿಮ ವಲಯ | 28,482 |
ದಕ್ಷಿಣ ವಲಯ | 39,562 |
ಆರ್.ಆರ್. ನಗರ | 23,170 |
ದಾಸರಹಳ್ಳಿ | 23,170 |
ಯಲಹಂಕ | 36,219 |
ಬೊಮ್ಮನಹಳ್ಳಿ | 38,940 |
ಮಹದೇವಪುರ | 46, 233 |