Site icon Vistara News

ಅಮೃತ ಮಹೋತ್ಸವ | ಬೆಂಗಳೂರಿಗರೇ, ಆಗಸ್ಟ್ 15ರಂದು ರಸ್ತೆಗಿಳಿಯುವ ಮುನ್ನ ಮತ್ತೊಮ್ಮೆ ಯೋಚಿಸಿ!

bng

ಬೆಂಗಳೂರು: ಆಗಸ್ಟ್‌ 15ರಂದು ಬೆಂಗಳೂರಿನ ನಾನಾ ಕಡೆ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ದೊಡ್ಡ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ನಗರದಾದ್ಯಂತ ಟ್ರಾಫಿಕ್‌ ಸಮಸ್ಯೆ ತಲೆದೋರುವ ಸಾಧ್ಯತೆ ದಟ್ಟವಾಗಿದೆ.

ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಐದು ಮಹತ್ವದ ಕಾರ್ಯಕ್ರಮಗಳು ನಡೆಯಲಿದ್ದು, ಬಂದೋಬಸ್ತ್‌ ನೋಡಿಕೊಳ್ಳಬೇಕಿರುವ ಪೊಲೀಸ್‌ ಇಲಾಖೆಗೆ ಸವಾಲು ಎನಿಸಲಿದೆ. ಬಹುಮುಖ್ಯವಾಗಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರ್ಕಾರದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಹಿಂದೂ- ಮುಸ್ಲಿಂ ವಿವಾದ ಸೃಷ್ಟಿಸಿ ಈಗಾಗಲೇ ಸಾಕಷ್ಟು ಸಂದಿಗ್ಧತೆಯನ್ನು ತಂದಿಟ್ಟ ಮೈದಾನದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಭೆಗಳನ್ನು ಪೊಲೀಸರು ನಡೆಸಿದ್ದಾರೆ.

ಇದಲ್ಲದೆ ಇನ್ನೂ ನಾಲ್ಕು ಆಚರಣೆಗಳು ಅಂದೇ ನಡೆಯಲಿವೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದು, ಕೆಎಸ್ಆರ್ ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ವಾಹನ ರ್ಯಾಲಿ ಸಂಘಟಿಸಲಾಗಿದೆ. ಈ ಕಾರ್ಯಕ್ರಮ ದಲ್ಲಿ ಲಕ್ಷಾಂತರ ಜನ ಸೇರಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್ ನಡಿಗೆಯಲ್ಲದೆ ಬಿಜೆಪಿಯಿಂದಲೂ ಸ್ವಾತಂತ್ರ್ಯ ರ್ಯಾಲಿ ಸಂಘಟಿಸಲಾಗಿದ್ದು, ಕಾರ್ಪೊರೇಷನ್ ಸರ್ಕಲ್‌ನಿಂದ ಕಂಠೀರವ ಸ್ಟೇಡಿಯಂವರೆಗೆ ರ್ಯಾಲಿ ನಡೆಯಲಿದೆ. ಇದಲ್ಲದೆ ಸಾಂಪ್ರದಾಯಿಕವಾಗಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸರ್ಕಾರದಿಂದ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವೂ ಎಂದಿನಂತೆ ನಡೆಯಲಿದೆ.

ಇವೆಲ್ಲದರ ಜತೆಗೆ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ಅಂತಿಮ ದಿನವೂ ಆಗಸ್ಟ್‌ ಹದಿನೈದೇ ಆಗಿದೆ. ಅಂದು ಹೆಚ್ಚಿನ ಸಂಘ ಸಂಸ್ಥೆಗಳು, ಕಚೇರಿಗಳಿಗೆ ರಜೆ ಇರುವುದರಿಂದ ಕುಟುಂಬ ಸಮೇತ ಫಲಪುಷ್ಪ ಪ್ರದರ್ಶನಕ್ಕೆ ಜನ ದಾಂಗುಡಿ ಇಡುವುದು ಖಚಿತ.

ಎಲ್ಲ ಕಾರ್ಯಕ್ರಮಗಳೂ ಬೆಂಗಳೂರಿನ ಹೃದಯ ಭಾಗಗಳೆನಿಸಿರುವ ಪ್ರಮುಖ ಸ್ಥಳಗಳಲ್ಲಿ ನಡೆಯಲಿದ್ದು, ಟ್ರಾಫಿಕ್‌ ದಟ್ಟಣೆಗೆ ಕಾರಣವಾಗಲಿವೆ. ಇವೆಲ್ಲ ಕಾರ್ಯಕ್ರಮಗಳಿಗೂ ಪೊಲೀಸರು ಭದ್ರತೆ ನೀಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ ಪಡೆಗಳ ನಿಯೋಜನೆಗೂ ಪೊಲೀಸ್ ಅಯುಕ್ತರು ಚಿಂತಿಸಿದ್ದಾರೆ. ಸಾರ್ವಜನಿಕರು ಅಂದು ರಸ್ತೆಗೆ ಇಳಿಯಬೇಕಾದರೆ ಹತ್ತು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ.

Exit mobile version