Site icon Vistara News

Bangalore Traffic : ಬೆಂಗಳೂರಿನಲ್ಲಿ ಬುಧವಾರ ಸಂಜೆ ಭಯಾನಕ ಟ್ರಾಫಿಕ್‌ ಜಾಮ್‌ ಉಂಟಾಗಿದ್ದೇಕೆ?

Bangalore Traffic jam

ಬೆಂಗಳೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬುಧವಾರ ಸಂಜೆಯಿಂದಲೇ ಬೆಂಗಳೂರು ಜನರು ತಮ್ಮ ತಮ್ಮ ಊರುಗಳಿಗೆ ಹೊರಟಿದ್ದಾರೆ. ಕೆಲವರು ಟೂರ್‌ ಪ್ಲ್ಯಾನ್‌ (Tour Plan) ಮಾಡಿಕೊಂಡು ಹೊರಟಿದ್ದಾರೆ. ಇದರ ಕಾರಣದಿಂದ ಬುಧವಾರ ಸಂಜೆ ನಗರದಲ್ಲಿ ಸಖತ್‌ ಟ್ರಾಫಿಕ್‌ ಜಾಮ್‌ (Bangalore Traffic) ಉಂಟಾಗಿತ್ತು. ಕೆಲವು ಕಡೆ ಪ್ರಯಾಣಿಕರು ತೀವ್ರವಾಗಿ ಪರದಾಟ ನಡೆಸುವಂತಾಯಿತು. ಶಾಲಾ – ಕಾಲೇಜು ವಿದ್ಯಾರ್ಥಿಗಳು (School and College Students) ಮನೆಗೆ ತಲುಪಲು ಹರಸಾಹಸ ಪಡುವಂತಾಯಿತು. ಒಂದು ಕಿ.ಮೀ. ದೂರ ಕ್ರಮಿಸಲು ಮುಕ್ಕಾಲು ಗಂಟೆಗೂ ಹೆಚ್ಚು ಸಮಯ ಬೇಕಾಯಿತು.

ಐಟಿ ಕಂಪನಿಯ ಬಹುತೇಕ ಉದ್ಯೋಗಿಗಳು ತಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಗುರುವಾರ ಈದ್‌ ಮಿಲಾದ್‌ (Eid Milad), ಶುಕ್ರವಾರ ಕರ್ನಾಟಕ ಬಂದ್ (Karnataka bandh), ಶನಿವಾರ, ಭಾನುವಾರ ವಾರಾಂತ್ಯ ರಜೆ ಹಾಗೂ ಅಕ್ಟೋಬರ್ 2 ಗಾಂಧಿ ಜಯಂತಿ (Gandhi Jayanti) ರಜೆ ಇದ್ದ ಕಾರಣ ಒಟ್ಟು ಐದು ದಿನ ರಜೆ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನವರು ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ.

ಕೆಲವರು ಪ್ರವಾಸ ಪ್ಲ್ಯಾನ್ ಮಾಡಿಕೊಂಡು ಹೊರಟಿದ್ದರಿಂದ ಬುಧವಾರ ಸಂಜೆ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಬೆಂಗಳೂರು ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಸಂಜೆ 4 ಗಂಟೆಯಿಂದಲೇ ಸ್ಲೋ ಮೂವಿಂಗ್ ಟ್ರಾಫಿಕ್ (Slow Moving Traffic) ಇತ್ತು. ಔಟರ್ ರಿಂಗ್ ರೋಡ್, ಸರ್ಜಾಪುರ, ಹೆಬ್ಬಾಳ, ತುಮಕೂರು, ಬಳ್ಳಾರಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿತ್ತು.

ಒಂದೊಂದು ಕಿ.ಮೀ. ತಲುಪಲೂ ಗಂಟೆ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಕಡೆ ಶಾಲಾ ಮಕ್ಕಳು ತೀವ್ರವಾಗಿ ಪರದಾಡುವಂತಾಯಿತು. ಟ್ರಾಫಿಕ್‌ ಮಧ್ಯ ಬಸ್‌ ಸಿಲುಕಿಕೊಂಡಿದ್ದಕ್ಕೆ ಸಂಜೆ 5 ಗಂಟೆಗೆ ಮನೆಗೆ ತಲುಪಬೇಕಿದ್ದವರು ರಾತ್ರಿ 7 ಗಂಟೆ ನಂತರ ಮನೆ ಮುಟ್ಟಿದ್ದಾರೆ. ಕೆಲ ಕಾಲ ಪಾಲಕರಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಒಂದು ಅಂದಾಜಿನ ಪ್ರಕಾರ ಸರಿಸುಮಾರು 5 ಕಿ.ಮೀ ಸಂಚಾರ ಮಾಡಲು ಬರೋಬ್ಬರಿ ಎರಡೂವರೆಯಿಂದ ಮೂರು ಗಂಟೆಗಳ ಕಾಲವನ್ನು ಕೆಲವು ಪ್ರದೇಶಗಳಲ್ಲಿ ತೆಗೆದುಕೊಳ್ಳಲಾಗಿದೆ. ವಾಹನಗಳ ಸಂಚಾರ ಅಷ್ಟು ನಿಧಾನ ಗತಿಯಲ್ಲಿತ್ತು ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಈ ಬಗ್ಗೆ ಹಲವರು ಡ್ರೈವ್‌ ಮಾಡುತ್ತಲೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಗಾರ್ಡನ್‌ ಸಿಟಿ, ಟ್ರಾಫಿಕ್‌ ಸಿಟಿಯಾಗಿ ಪರಿವರ್ತನೆಗೊಂಡಿದೆ. ನೂರು ಮೀಟರ್‌ ಹೋಗಲು ಗಂಟೆ ಹೊತ್ತು ಬೇಕೆಂದರೆ ಏನರ್ಥ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ದುಸ್ಥಿತಿ ಇದು ಎಂದು ಕೆಲವರು ಆಕ್ರೋಶವನ್ನು ಹೊರಹಾಕಿದ್ದಾರೆ.

ಜನರೇ ಮಾರ್ಗದರ್ಶಕರಾದರು!

ಇತ್ತ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಟ ನಡೆಸುತ್ತಿದ್ದ ಹಲವಾರು ಜನರು ತಮ್ಮ ಸೋಷಿಯಲ್‌ ಮೀಡಿಯಾ “ಎಕ್ಸ್‌”ನಲ್ಲಿ ಟ್ರಾಫಿಕ್‌ ಬಗ್ಗೆ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಕೆಲವರು ನೀವೀಗ ಮನೆಯಲ್ಲಿಯೋ, ಕಚೇರಿಯಲ್ಲಿಯೋ ಇದ್ದರೆ ಹೊರಗೆ ಬರಬೇಡಿ. ಈಗಂತೂ ಬಹಳವೇ ಟ್ರಾಫಿಕ್‌ ಇದೆ. ರಾತ್ರಿ 9 ಗಂಟೆ ನಂತರ ಬನ್ನಿ ಆಗ ನಿಮ್ಮ ಪ್ರಯಾಣ ಸುಲಭವಾಗಬಹುದು. ಅಲ್ಲದೆ, ಔಟರ್‌ ರಿಂಗ್‌ ರೋಡ್‌, ಮಾರತ್ತಹಳ್ಳಿ, ಸರ್ಜಾಪುರ, ಸಿಲ್ಕ್‌ ಬೋರ್ಡ್‌ ರಸ್ತೆ ಮಾರ್ಗವನ್ನು ಈ ಸಮಯಕ್ಕಂತೂ ಯಾವುದೇ ಕಾರಣಕ್ಕೂ ಬಳಸಲೇಬೇಡಿ ಎಂಬಿತ್ಯಾದಿ ಸಲಹೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: Weather report : ಕರಾವಳಿ, ಉತ್ತರ ಒಳನಾಡಲ್ಲಿ ಇಂದು ಭಾರಿ ಮಳೆ; ಬೆಂಗಳೂರಲ್ಲಿ ರಾತ್ರಿ ಅಬ್ಬರ

ನನ್ನ ಮಗ ರಾತ್ರಿ 8 ಗಂಟೆಗೆ ಮನೆಗೆ ಬಂದ!

ಪಾಲಕರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಶಾಲಾ ವಾಹನದಲ್ಲಿ ಪ್ರತಿ ದಿನವೂ ಬೇಗ ಮನೆಗೆ ಬರುತ್ತಿದ್ದ ನನ್ನ ಮಗ ಇಂದು ರಾತ್ರಿ 8 ಗಂಟೆಗೆ ಮನೆಗೆ ಬಂದ ಎಂದು ಹೇಳಿಕೊಂಡಿದ್ದಾರೆ. ಗುರುವಾರ (ಸೆ. 28) ಸಹ ಕೆಲವರು ತಮ್ಮ ಊರುಗಳಿಗೆ ಹೋಗುವವರಿದ್ದು, ಸಂಜೆಯೂ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈದ್‌ ಮಿಲಾದ್‌ ಇರುವುದರಿಂದ ಶಾಲಾ ಮಕ್ಕಳಿಗೆ ರಜೆ ಇದ್ದು, ಅವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

Exit mobile version