ಬೆಂಗಳೂರು: ನಗರದಲ್ಲಿ ಮಳೆ ಮುನ್ನೆಚ್ಚರಿಕೆ ಕ್ರಮಗಳು ಹೇಗಿವೆ ಎಂಬುದನ್ನು ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಪಶ್ಚಿಮ ವಲಯ ವ್ಯಾಪ್ತಿಯ ನಾನಾ ಕಡೆ ಸಂಚಾರ ನಡೆಸಿದರು. ಸಮಸ್ಯೆ ಕಂಡುಬಂದಲ್ಲಿ ತುರ್ತು ಕ್ರಮಕ್ಕೆ ಸ್ಥಳದಲ್ಲೇ ಆದೇಶ ನೀಡಿದರು.
ಸದಾಶಿವನಗರ ಪೊಲೀಸ್ ಠಾಣೆಯಿಂದ ನ್ಯೂ ಬಿಇಎಲ್ ರಸ್ತೆ ಸಂಪರ್ಕಿಸುವ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ರಸ್ತೆ ಬದಿಯಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಶೋಲ್ಡರ್ ಡ್ರೈನ್‌ಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ತುರ್ತಾಗಿ ಕ್ರಾಸ್ ಕಲ್ವರ್ಟ್‌ಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ್ಯೂ ಬಿಇಎಲ್ ರಸ್ತೆಐ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಬ್ಲಾಕ್ ಆಗಿದ್ದ ಶೋಲ್ಡರ್ ಡ್ರೈನ್ ಅನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ. ಈಗಿರುವ ಚರಂಡಿ ಮಾರ್ಗದಲ್ಲಿ ಬೆಸ್ಕಾಂ ಕೇಬಲ್ ಹಾಗೂ ಒಳಚರಂಡಿ ಪೈಪ್‌ಲೈನ್ ಇದ್ದು, ಚರಂಡಿಯಲ್ಲಿರುವ ಪೈಪ್ ಲೈನ್ ಬದಲಾಯಿಸಿ ಹೊಸ ಮೋರಿ ನಿರ್ಮಿಸಬೇಕು. ಜತೆಗೆ ಟ್ರಾನ್ಸ್‌ಫಾರ್ಮರ್‌ಗೆ ಅಳವಡಿಸಿರುವ ವಿದ್ಯುತ್ ತಂತಿಗಳನ್ನು ಹಾಗೆಯೇ ಬಿಟ್ಟಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗಲಿದ್ದು, ಅದನ್ನು ತಕ್ಷಣವೇ ತೆರವುಗೊಳಿಸುವಂತೆ ಆದೇಶಿಸಿದರು.
ರಸ್ತೆ ಬದಿಯಿರುವ ಚರಂಡಿಗೆ ನೇರವಾಗಿ ತ್ಯಾಜ್ಯ ನೀರನ್ನು ಬಿಡುತ್ತಿರುವುದನ್ನು ಗಮನಿಸಿ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಚರಂಡಿಗೆ ನೇರವಾಗಿ ತ್ಯಾಜ್ಯ ನೀರನ್ನು ಬಿಟ್ಟಿರುವವರ ಮೇಲೆ ಕೂಡಲೆ ನೋಟಿಸ್ ಕೊಟ್ಟು ಸಂಪರ್ಕವನ್ನು ಕಡಿತಗೊಳಿಸಬೇಕು. ಅಲ್ಲದೆ ಸಂಪರ್ಕವಿರದ ಲೈನ್‌ಗಳನ್ನು ಕೂಡಲೆ ಒಳಚರಂಡಿ ಲೈನ್‌ಗೆ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ | Maha politics: ಬಿಜೆಪಿಗೆ 2019ರಲ್ಲೇ ಈ ಬುದ್ಧಿ ಬರುತ್ತಿದ್ದರೆ ಅಘಾಡಿ ಸರಕಾರ ರಚನೆ ಆಗುತ್ತಲೇ ಇರಲಿಲ್ಲ ಎಂದ ಠಾಕ್ರೆ
ಭಾಷ್ಯಂ ವೃತ್ತದಲ್ಲಿ ಮಳೆ ಬಂದ ಕೂಡಲೇ ರಸ್ತೆ ಮೇಲೆ ನೀರು ನಿಲ್ಲುವುದನ್ನು ತಪ್ಪಿಸಲು ಶೋಲ್ಡರ್ ಡ್ರೈನ್‌ಗೆ ನೀರು ಹೋಗಲು ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ ಕಾಂಕ್ರೀಟ್ ಹಾಕಿ ಸರಾಗವಾಗಿ ನೀರು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ ಅವರು, ತುಮಕೂರು ಕಡೆ ಹೋಗುವ ಹೊರ ವರ್ತುಲ ರಸ್ತೆಯ ಎಂ.ಇ.ಐ ಜಂಕ್ಷನ್(ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್) ಬಳಿ ವಾಟರ್ ಲಾಗಿಂಗ್ ಪಾಯಿಂಟ್ ಸ್ಥಳದಲ್ಲಿ ನೀರು ನಿಲ್ಲದಂತೆ ಎತ್ತರವಾಗಿ ಡಾಂಬರೀಕರಣ ಮಾಡಲಾಗಿದ್ದು, ಶೋಲ್ಡರ್ ಡ್ರೈನ್ ಗೆ ನೀರು ಹೋಗಲು ವ್ಯವಸ್ಥೆ ಮಾಡಬೇಕಿದ್ದು, ಕೂಡಲೆ ರಸ್ತೆ ಮೇಲೆ ನಿಲ್ಲುವ ನೀರು ಶೋಲ್ಡರ್ ಡ್ರೈನ್‌ಗೆ ಸೇರುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಮಹಾಲಕ್ಷ್ಮೀಪುರ ವಾರ್ಡ್ ಜೆ.ಎಸ್.ನಗರ 60 ಅಡಿ ರಸ್ತೆಯಲ್ಲಿ ಜಲಾವೃತ ಸ್ಥಳದಲ್ಲಿ ರಾಜಕಾಲುವೆ ಎತ್ತರಿಸಲಾಗಿದ್ದು, ಮಳೆ ನೀರು ರಾಜಕಾಲುವೆಗೆ ಹೋಗಲು ಪೈಪ್ ಹಾಗೂ ಸಬ್ ಡ್ರೈನ್ ಕಾಮಗಾರಿ ಪ್ರಗತಿಯಲ್ಲಿದೆ. ಸೈಡ್ ಡ್ರೈನ್‌ಗಳನ್ನು ಅಗಲ ಮಾಡಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ತಿಳಿಸಿದರು. ಜೆ.ಸಿ ನಗರದ ಬಳಿಯಿರುವ ವೃಷಭಾವತಿ ಕಾಲುವೆಯ ತಡೆಗೋಡೆಗೆ ತಾತ್ಕಾಲಿಕವಾಗಿ ಸೈಡ್ ಬ್ಯಾಗ್‌ಗಳನ್ನು ಅಳವಡಿಸಿದ್ದು, ತಡೆಗೋಡೆಯ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಲು ರಾಜಕಾಲುವೆ ವೇಳೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಗಡಿ ಮುಖ್ಯ ರಸ್ತೆ ಮೂಲಕ ಹೆಚ್ಚು ವಾಹನಗಳು ಸಂಚರಿಸುವ ನಿಟ್ಟಿನಲ್ಲಿ ವಿರೇಶ್ ಚಿತ್ರ ಮಂದಿರದ ಬಳಿ ಪಾದಚಾರಿಗಳು ರಸ್ತೆ ದಾಟಲು ಸಮಸ್ಯೆಯಾಗುವುದನ್ನು ಗಮನಿಸಿ, ಸ್ಥಳದಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸುಜಾತ ಟಾಕೀಸ್ ಕೆಳಸೇತುವೆಯ ವಾಟರ್ ಲಾಗಿಂಗ್ ಸ್ಥಳ ಪರಿಶೀಲಿಸಿ, ನೀರು ನಿಲ್ಲದಂತೆ ಮಾಡಲು ಸೂಚಿಸಿದರು.
ಓಕಳಿಪುರ ಅಷ್ಟಪಥ ಕಾರಿಡಾರ್ ಪರಿಶೀಲನೆ
ಓಕಳಿಪುರ ಅಷ್ಟಪಥ ಕಾರಿಡಾರ್ ಬಳಿ ರೈಲ್ವೆ ಇಲಾಖೆ ವತಿಯಿಂದ ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕ್ಸ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ರೈಲ್ವೆ ಅಧಿಕಾರಿಗಳ ಜತೆ ಮಾತನಾಡಿ ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಬೇಕು ಎಂದು ಆದೇಶಿಸಿದರು.
ರಾಜಾಜಿನಗರ ಹಾಗೂ ಮಲ್ಲೇಶ್ವರ ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲುಸೇತುವೆ ಕಾಮಗಾರಿಯನ್ನು, ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್ ರವರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರಲ್ಲದೆ ರಸ್ತೆಯಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು ತಿಳಿಸಿದರು. ಈ ವೇಳೆ ವಲಯ ಆಯುಕ್ತ ಡಾ. ದೀಪಕ್, ವಲಯ ಜಂಟಿ ಆಯುಕ್ತ ಶ್ರೀನಿವಾಸ್, ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಲೋಕೇಶ್ ಮತ್ತಿತರರು ಇದ್ದರು.
ಇದನ್ನೂ ಓದಿ | ಟ್ಯಾಕ್ಸ್ ಕಟ್ಟಿಲ್ವಾ?: ಹುಷಾರ್! ನಿಮ್ಮ ಬ್ಯಾಂಕ್ ಅಕೌಂಟ್ ಅಟ್ಯಾಚ್ ಮಾಡಲಿದೆ ಬಿಬಿಎಂಪಿ