ಬೆಂಗಳೂರು: ಅನೇಕ ವರ್ಷಗಳಿಂದ ಗೊಂದಲ, ವಿವಾದಕ್ಕೆ ಕಾರಣವಾಗುತ್ತಿದ್ದ ಚಾಮರಾಜಪೇಟೆಯ ʼಈದ್ಗಾ ಮೈದಾನʼ ವಿಚಾದ ಈಗ ಬಹುತೇಕ ಬಗೆಹರಿಯುವ ಹಂತಕ್ಕೆ ಬಂದಿದೆ. ಈದ್ಗಾ ಮೈದಾನ ಎಂದೇ ಪ್ರಸಿದ್ಧವಾದ ಈ ಮೈದಾನ ಬಿಬಿಎಂಪಿ ಸ್ವತ್ತು, ಅಂದರೆ ಸಾರ್ಜವಜನಿಕರ ಆಸ್ತಿ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಅನೇಕ ವರ್ಷಗಳಿಂದ ಮೂದಾನದಲ್ಲಿ ವರ್ಷಕ್ಕೆರಡು ಬಾರಿ ಮುಸ್ಲಿಂ ಸಮುದಾಯದವರು ಸಾಮೂಹಿಕ ನಮಾಜ್ ಮಾಡುತ್ತಾರೆ. ಜತೆಗೆ ಬಕ್ರೀದ್ ಸಮಯದಲ್ಲಿ ಈದೇ ಮೈದಾನದಲ್ಲಿ ಭರ್ಜರಿ ಕುರಿ ವ್ಯಾಪಾರ ನಡೆಯುತ್ತದೆ. ಮುಸ್ಲಿಂ ಸಮುದಾಯದವರಿಗೆ ಕುರಿಗಳನ್ನು ಮಾರಾಟ ಮಾಡಲು ದೂರದೂರಿನಿಂದ ಕುರಿ ಸಾಕಣಿಕೆದಾರರು ಆಗಮಿಸುತ್ತಾರೆ. ಉಳಿದ ದಿನಗಳಲ್ಲಿ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಯುವಕರು ಕ್ರಿಕೆಟ್ ಆಡುವುದಕ್ಕೆ ಮಾತ್ರ ಸೀಮಿತವಾಗಿದೆ.
ಇದನ್ನೂ ಓದಿ | ಚಾಮರಾಜಪೇಟೆಯಲ್ಲಿ ಮತ್ತೆ ಶುರುವಾದ ಮೈದಾನ ವಿವಾದ
ಇಷ್ಟೆ ಅಲ್ಲದೆ, ಗಣೇಶ ಚತುರ್ಥಿಯಂತಹ ಕಾರ್ಯಕ್ರಮಗಳಿಗೆ ಮೈದಾನ ನೀಡಲು ಅನುಮತಿ ಕೇಳಿದಾಗ ಬಿಬಿಎಂಪಿ ಅನೇಕ ಬಾರಿ ನಿರಾಕರಿಸಿದೆ ಎಂದು ಸ್ಥಳೀಯ ಹಿಂದುಪರ ಸಂಗಟನೆಗಳು ಆರೋಪಿಸಿದ್ದವು. ಧಾರ್ಮಿಕ ಉತ್ಸವಗಳಲ್ಲದೆ ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವಕ್ಕೂ ಅನುಮತಿ ನೀಡಲಾಗಿಲ್ಲ ಎಂಬ ಆರೋಪ ಬಿಬಿಎಂಪಿ ಅಧಿಕಾರಿಗಳ ಮೇಲಿತ್ತು. ಈ ಕುರಿತು ವಿವಾದ ಹೆಚ್ಚಾಗುತ್ತಿರುವಂತೆಯೇ ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶೇಷ ಅಯುಕ್ತ ಹರೀಶ್ ಕುಮಾರ್, ಈ ಆಸ್ತಿಯು ಬಿಬಿಎಂಫಿ ಪಶ್ಚಿಮ ವಲಯ ಆಯುಕ್ತರ ವ್ಯಾಪ್ತಿಗೆ ಒಳಪಡುತ್ತದೆ. ಅವರ ಜತೆಗೆ ಮಾತನಾಡಿ ನಾನು ವಿವರ ಪಡೆದಿದ್ದೇನೆ. ಅವರು ಹೇಳಿದಂತೆ ಈ ಆಸ್ತಿ ಬಿಬಿಎಂಪಿಗೆ ಸೇರಿದ್ದು. ಇದು ಆಟದ ಮೈದಾನ. ಈ ಮೈದಾನದ ಕುರಿತು ನ್ಯಾಯಾಲಯದ ಆದೇಶವೊಂದಿದೆ. ಅದರಂತೆ, ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಬೇಕು. ಉಳಿದಂತೆ ವಲಯ ಆಯುಕ್ತರ ಅನುಮತಿ ಪಡೆದು ಯಾವುದೇ ಕಾರ್ಯಕ್ರಮಗಳಿಗೆ ಮೈದಾನವನ್ನು ಬಳಕೆ ಮಾಡಬಹುದುʼ ಎಂದು ಹೇಳಿದ್ದಾರೆ.
ಈ ಮೂಲಕ ವಿವಾದ ಬಹುಪಾಲು ಬಗೆಹರಿದಂತೆ ಕಾಣುತ್ತಿದೆ. ಆದರೆ ಈ ಆಸ್ತಿ ವಕ್ಫ್‌ಗೆ ಸಂಬಂಧಿಸಿದ್ದು ಎಂದು ವಾದಿಸುವ ಮುಸ್ಲಿಂ ಸಮುದಾಯ ಯಾವ ಹೆಜ್ಜೆ ಇಡುತ್ತದೆ ಕಾದುನೋಡಬೇಕಿದೆ. ಜತೆಗೆ, ಇದೀಗ ಬಿಬಿಎಂಪಿ ಆಯುಕ್ತರು ಹೇಳಿರುವಂತೆಯೇ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಸ್ಥಳೀಯ ಸಂಘಟನೆಗಳು ಅರ್ಜಿ ಸಲ್ಲಿಸಲು ನಿರ್ಧರಿಸಿವೆ ಎನ್ನಲಾಗಿದೆ.
ಆಗಸ್ಟ್ 15ರಂದು ತ್ರಿವರ್ಣ ಧ್ವಜಾರೋಹಣಕ್ಕೆ ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗುತ್ತದೆ. ಬಿಬಿಎಂಪಿ ಕೇಳುತ್ತಿರುವುದು ಸತ್ಯವೋ ಸುಳ್ಳೊ ಎನ್ನುವುದು ಆಗ ತಿಳಿಯುತ್ತದೆ ಎಂದು ಸಂಘಟನೆಯ ಮುಖಂಡರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ | ಅಪ್ಪನ ಕೊನೆಯಾಸೆ ಈಡೇರಿಸಲು ಈದ್ಗಾಗೆ 1.5 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಹಿಂದೂ ಸೋದರಿಯರು