ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಆಸ್ತಿಗಳ ರಕ್ಷಣೆಗಾಗಿ ಸರ್ವೆ ಮಾಡಲು ಮುಂದಾಗಿದೆ. ಪಾಲಿಕೆಯ ಎಂಟು ವಲಯಗಳಲ್ಲಿರುವ ಆಸ್ತಿಗಳ ಸರ್ವೆಗೆ ನಿರ್ಧರಿಸಲಾಗಿದೆ. ಬಿಡಿಎಯಿಂದ ಹಸ್ತಾಂತರವಾಗಿರುವ ಬಡಾವಣೆ ಮತ್ತು ಹಸ್ತಾಂತರ ಹಂತದಲ್ಲಿರುವ ಬಿಬಿಎಂಪಿ ಮತ್ತು ಬಿಡಿಎ ವತಿಯಿಂದ ಜಂಟಿಯಾಗಿ ಆಸ್ತಿ ಸರ್ವೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ ಜಂಟಿ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ʼʼಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಒತ್ತುವರಿಯಾಗಿದೆ. ಎಂಟು ವಲಯಗಳಲ್ಲಿ ಸರ್ವೆ ಮಾಡಿದ ನಂತರ ಯಾವ ಆಸ್ತಿ ಒತ್ತುವರಿಯಾಗಿದೆ ಎಂಬುದು ತಿಳಿಯಲಿದೆ. ಬಳಿಕ ಭೂಮಿ ಒತ್ತುವರಿ ತೆರವು ಮಾಡಲಾಗುತ್ತದೆ. ಸರ್ವೆಗಾಗಿ ಪ್ರತಿ ವಲಯಕ್ಕೂ ಭೂಮಾಪಕರ ನೇಮಕ ಮಾಡಲಾಗುತ್ತದೆ. ಪಾರ್ಕ್, ಗ್ರೌಂಡ್ ಸೇರಿ ಎಲ್ಲ ಆಸ್ತಿಗಳನ್ನು ಸರ್ವೆ ಮಾಡಿ ಪಾಲಿಕೆ ವಶಕ್ಕೆ ತೆಗೆದುಕೊಳ್ಳಲಾಗುತ್ತದೆʼʼ ಎಂದವರು ಹೇಳಿದ್ದಾರೆ.
ಕೋವಿಡ್, ಡೆಂಗ್ಯೂ ಪ್ರಕರಣಗಳ ಹೆಚ್ಚಳ
ಕಳೆದ ಒಂದು ವಾರದಲ್ಲಿ 400 ರಿಂದ 450 ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಪಾಸಿಟಿವಿಟಿ ದರ ಶೇ.2.61 ಇದ್ದು, ಏಳು ದಿನಗಳಲ್ಲಿ 16 ಸಾವಿರ ಟೆಸ್ಟ್ ಮಾಡಲಾಗಿದೆ. ಇದನ್ನ 20 ಸಾವಿರಕ್ಕೆ ಹೆಚ್ಚಳ ಮಾಡಲಾಗುತ್ತದೆ. ಇನ್ನು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 2,03,403 ಮನೆ ಆರೋಗ್ಯ ಸಮೀಕ್ಷೆ ಮಾಡಲಾಗಿದ್ದು, 2,98,962 ಸೈಟ್ ಗುರುತಿಸಿ ಪರಿಶೀಲನೆ ಮಾಡಲಾಗಿದೆ. 3954 ಸ್ಥಳಗಳಲ್ಲಿ ಲಾರ್ವಾ ಪತ್ತೆ ಆಗಿದ್ದು, ಕಳೆದ 10 ದಿನಗಳಲ್ಲಿ 38 ಪ್ರಕರಣ ಪತ್ತೆಯಾಗಿವೆ, ದಾಸರಹಳ್ಳಿ ವಲಯದಲ್ಲಿ ಹೆಚ್ಚು ಲಾರ್ವಾ ಸೈಟ್ ಗುರುತಿಸುವ ಮತ್ತು ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬ್ಕ್ಲ್ಯಾಕ್ ಸ್ಪಾಟ್‌ಗಳ ತೆರವು
ನಗರದಲ್ಲಿ 1479 ನಿತ್ಯ ವಿಲೇವಾರಿ ಮಾಡುವ ತಾತ್ಕಾಲಿಕ ಬ್ಲ್ಯಾಕ್ ಸ್ಪಾಟ್‌ಗಳು (ಕಸ ಸುರಿಯುವ ಸ್ಥಳ) ಇವೆ. 118 ಇದ್ದ ಶಾಶ್ವತ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಸದ್ಯ 76ಕ್ಕೆ ಇಳಿಕೆ ಆಗಿದೆ. ಬ್ಲ್ಯಾಕ್ ಸ್ಪಾಟ್ ತೆರವು ಸಂಬಂಧ 6,18,46,941 ರೂಪಾಯಿ ವೆಚ್ಚದಲ್ಲಿ ಪಾಲಿಕೆಯಿಂದ ನೂತನ ಟೆಂಡರ್ ಕರೆಯಲಾಗಿದೆ. ಶಾಶ್ವತ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಕಸ ಹಾಕದಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಕಸ ಹಾಗೂ ಬೀದಿ ಕಸವನ್ನು ತೆರವು ಮಾಡುವುದು ಗುತ್ತಿಗೆದಾರರದ್ದೇ ಜವಾಬ್ದಾರಿಯಾಗಿರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ | ಆಸ್ತಿ ತೆರಿಗೆ ವಸೂಲಿಯಲ್ಲಿ ಉಳ್ಳವರಿಗೊಂದು, ಸಾಮಾನ್ಯರಿಗೊಂದು ನ್ಯಾಯ ಮಾಡ್ತಿದ್ಯಾ ಬಿಬಿಎಂಪಿ?