ಬೆಂಗಳೂರು: ಅದೆಷ್ಟೋ ಬಡಪಾಯಿ ವ್ಯಾಪಾರಿಗಳು ಫುಟ್‌ಪಾತ್‌ನಲ್ಲೇ ಜೀವನ ಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಬ್ರ್ಯಾಂಡ್ ಬೆಂಗಳೂರು (Brand Bengaluru) ಹೆಸರಿನಲ್ಲಿ ಬಿಬಿಎಂಪಿ ಮಾರ್ಷಲ್‌ಗಳು (BBMP Marshals) ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪವು ಮತ್ತೆ ಕೇಳಿ ಬಂದಿದೆ.
ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸುಮಾರು 70 ವರ್ಷದ ವೃದ್ಧರೊಬ್ಬರು ರಸ್ತೆ ಬದಿಯಲ್ಲಿ ಬ್ಯಾಗ್‌ಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರು. ಅಲ್ಲಿಗೆ ಬಂದ ಮಾರ್ಷಲ್‌ಗಳು ವ್ಯಾಪಾರ ಮಾಡದಂತೆ ತಡೆದಿದ್ದಾರೆ. ಮಾತ್ರವಲ್ಲದೆ ವೃದ್ಧನಿಂದ ಬ್ಯಾಗ್ ಕಸಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ: Tumkur News : ತುಮಕೂರಿನಲ್ಲಿ ಮತ್ತೆ ದುರಂತ; ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ
ಈ ವೇಳೆ ವೃದ್ಧನ ಅಸಹಾಯಕತೆಯನ್ನು ಕಂಡು ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ. ವೃದ್ಧ ಪರಿ ಪರಿಯಾಗಿ ಕೇಳಿಕೊಂಡು ಅಂಗಾಲಾಚಿದ್ದರೂ ಬಿಬಿಎಂಪಿ ಮಾರ್ಷಲ್‌ಗಳ ಮನಸ್ಸು ಕರಗಲಿಲ್ಲ. ನಿಂತಲ್ಲೇ ನಿಲ್ಲಲ್ಲ, ಓಡಾಡಿಕೊಂಡು ವ್ಯಾಪಾರ ಮಾಡುತ್ತೆನೆ ಸರ್.. ಯಾರಿಗೂ ತೊಂದರೆ ಮಾಡಲ್ಲ, ಅವಕಾಶ ಮಾಡಿಕೊಡಿ ಎಂದು ಬಡಪಾಯಿ ಕೇಳಿಕೊಂಡರು, ಮಾರ್ಷಲ್‌ಗಳು ಕ್ಯಾರೆ ಅಂದಿಲ್ಲ.
ಇತ್ತ ಅಲ್ಲೇ ಇದ್ದ ಸ್ಥಳೀಯರು ವೃದ್ಧನನ್ನು ಬಿಡುವಂತೆ ಮನವಿ ಮಾಡಿದರೂ, ಮಾನವೀಯತೆ ಇಲ್ಲದಂತೆ ವೃದ್ಧನ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಈ ದೌರ್ಜನ್ಯವನ್ನು ಅಲ್ಲಿದ್ದ ಕೆಲ ಸ್ಥಳೀಯರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬಡಪಾಯಿಗಳ ಮೇಲೆ ಅಧಿಕಾರಿಗಳು ದರ್ಪ ತೋರುತ್ತಾರೆ ಎಂದು ನೆಟ್ಟಿಗೆರು ಕಿಡಿಕಾರಿದ್ದಾರೆ. ಸಾಲಸೋಲ ಮಾಡಿ ಬಂಡವಾಳ ಹಾಕಿ ಮಾಲುಗಳನ್ನು ಖರೀದಿ ಮಾಡುತ್ತಾರೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಎತ್ತಂಗಡಿ ಮಾಡಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದು, ಮಾರ್ಷಲ್‌ಗಳ ಈ ನಡೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ