ಬೆಂಗಳೂರು: ಬೀದಿ ತಿಂಡಿಗಳು ಹಾಗೂ ವ್ಯಾಪಾರಕ್ಕೆ ಬ್ರೇಕ್ ಹಾಕಲು ಬೆಂಗಳೂರು ಮಹಾನಗರಪಾಲಿಕೆ ಸಿದ್ಧವಾಗಿದೆ. ಬೀದಿ ಬದಿಯ ವ್ಯಾಪಾರಿಗಳ ತೆರವಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಿದ್ದೇನೆ ಎಂದು ಪಾಲಿಕೆ ಹೇಳುತ್ತಿದೆ, ಆದರೆ ಸೂಕ್ತ ಜಾಗವಿಲ್ಲದುದರಿಂದ, ಬೀದಿ ವ್ಯಾಪಾರಿಗಳು ಬೀದಿ ಪಾಲಾಗಲಿದ್ದಾರೆ ಎಂಬ ಅನುಮಾನ ಮೂಡಿದೆ.
ಸಿಟಿಯ ಮುಖ್ಯ ರಸ್ತೆ ಹಾಗೂ ಸಬ್ ಅರ್ಟಿಯಲ್ ರೋಡ್‌ನಲ್ಲಿ ಬೀದಿ ವ್ಯಾಪಾರಕ್ಕೆ ನಿಷೇಧ ಹೇರಲು ಹಾಗೂ ಪ್ರತ್ಯೇಕ ಸ್ಥಳದ ವ್ಯವಸ್ಥೆಗೆ ಬಿಬಿಎಂಪಿ ಆಡಳಿತ ವರ್ಗ ಮುಂದಾಗಿದೆ. ಮೊದಲಿಗೆ ಇದು ಮಹದೇವಪುರ ಹಾಗೂ ಆರ್‌ಆರ್ ನಗರ ವಲಯದಲ್ಲಿ ಜಾರಿಯಾಗಲಿದೆ. ಇದಕ್ಕಾಗಿ ಖಾಲಿಯಿರುವ ಪ್ರತ್ಯೇಕ ಸ್ಥಳ ನಿಯೋಜನೆಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರು ನಗರ ಹೊಟೇಲ್ ಅಸೋಸಿಯೇಷನ್ ಇತ್ತೀಚೆಗೆ ಸ್ಟ್ರೀಟ್ ಪುಡ್ ಮಾರಾಟ ರದ್ದತಿಗೆ ಒತ್ತಾಯಿಸಿತ್ತು. ಹೀಗಾಗಿ ಫುಟ್‌ಪಾತಿನಲ್ಲಿರುವ ಫುಡ್ ಕೋರ್ಟ್, ಮೊಬೈಲ್ ಸ್ಟಾಲ್, ಬಟ್ಟೆ ವ್ಯಾಪಾರ, ಕಿಡ್ಸ್ ಸ್ಟಾಲ್ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಲಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ವಾರ್ಡ್‌ನಲ್ಲಿರುವ ಖಾಲಿ ಜಾಗದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಸ್ಟ್ರೀಟ್ ವೆಂಡರ್ ಆಕ್ಟ್‌ನಲ್ಲಿ ಇರುವ ನಿಯಮ ಪಾಲನೆಗೆ ಮುಂದಾಗಿದ್ದೇವೆ. ಪ್ರತ್ಯೇಕ ವೆಂಡಿಂಗ್ ಜೋನ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ. ಫುಟ್‌ಪಾತ್ ವ್ಯಾಪಾರ ತೆರವಿಗೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ವಿಸ್ತಾರ ನ್ಯೂಸ್‌ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಎಲ್ಲೂ ಬೀದಿ ವ್ಯಾಪಾರಿಗಳಿಗೆಂದೇ ಮೀಸಲಾಗಿರುವ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಿಲ್ಲ. ಹೀಗಾಗಿ ತೆರವು ಮಾಡಿದ ಬಳಿಕ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ | ಬೆಂಗಳೂರಿನ ಪ್ರಮುಖ ರಸ್ತೆಗಳಿಂದ ಫುಟ್‌ಪಾತ್ ವ್ಯಾಪಾರಿಗಳ ಎತ್ತಂಗಡಿ, ಬಿಬಿಎಂಪಿ ನಿರ್ಧಾರ