ಬೆಂಗಳೂರು: ಬಿಬಿಎಂಪಿಯು ಪ್ರತಿಷ್ಠಿತ ಸಂಸ್ಥೆಗಳ ಆಸ್ತಿ ತೆರಿಗೆ ಸಂಗ್ರಹ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಆರೋಪ ಕೇಳಿ ಬಂದಿತ್ತು. ಕೋಟಿ ಕೋಟಿ ಆಸ್ತಿ ತೆರಿಗೆ ಕಟ್ಟದೇ ಇರುವ ಸಂಸ್ಥೆಗಳ ಮೇಲೆ ಮೃದು ಧೋರಣೆ ಏಕೆ ಎಂಬ ಪ್ರಶ್ನೆ ಮೂಡಿತ್ತು. ಹೀಗಾಗಿ ಇದಕ್ಕೆಲ್ಲ ಬ್ರೇಕ್ ಹಾಕಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ಸುಸ್ತಿದಾರರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ | ಆಸ್ತಿ ತೆರಿಗೆ ವಸೂಲಿಯಲ್ಲಿ ಉಳ್ಳವರಿಗೊಂದು, ಸಾಮಾನ್ಯರಿಗೊಂದು ನ್ಯಾಯ ಮಾಡ್ತಿದ್ಯಾ ಬಿಬಿಎಂಪಿ?
ತೆರಿಗೆ ಕಟ್ಟದ ಸಂಸ್ಥೆಗಳಿಗೆ ಮೊದ ಮೊದಲು ನೋಟಿಸ್ ಕೊಟ್ಟು ಆ ಬಳಿಕ ಸಂಸ್ಥೆ ಬಾಗಿಲಿಗೆ ಬೀಗ ಹಾಕಿ ಬರುತ್ತಿತ್ತು ಪಾಲಿಕೆ. ಆದರೆ ಇನ್ನು ಮುಂದೆ ಪಾಲಿಕೆ ಈ ಕೆಲಸ ಮಾಡುವುದಿಲ್ಲ. ತೆರಿಗೆ ಪಾವತಿಯಾಗಿಲ್ಲವೆಂದು ಮಾಲ್‌ಗಳಿಗೆ ಬೀಗ ಹಾಕುವುದು ಬೇಡವೆಂದು ಹೈಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ, ತೆರಿಗೆ ಪಾವತಿಸದವರ ಬ್ಯಾಂಕ್ ಅಕೌಂಟ್ ಅಟ್ಯಾಚ್ ಮಾಡಲು ನಿರ್ಧಾರ ಮಾಡಲಾಗಿದೆ.
ತೆರಿಗೆ ಪಾಔತಿಸದವರ ಬ್ಯಾಂಕ್ ಅಕೌಂಟ್ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯವನ್ನು ನಗರದ ಪ್ರತಿಷ್ಠಿತ ಮಂತ್ರಿಮಾಲ್‌ನಿಂದಲೇ ಆರಂಭಿಸಲು ಪಾಲಿಕೆ ಮುಂದಾಗಿದೆ. ಮಂತ್ರಿಮಾಲ್ ಬಾಕಿ 27 ಕೋಟಿ ರೂ. ಪಾವತಿಸಬೇಕಿದೆ. ಇದಕ್ಕೆ ಜೂನ್ 30ರ ಸಂಜೆಯವರೆಗೆ ಬಿಬಿಎಂಪಿ ಗಡುವು ನೀಡಿದೆ. ಬಾಕಿ ಪಾವತಿ ಮಾಡದೇ ಇದ್ದರೆ, ಅಕೌಂಟ್ ಅಟ್ಯಾಚ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಕೇವಲ ಮಂತ್ರಿಮಾಲ್ ಅಲ್ಲ, ಬಾಕಿ ಉಳಿಸಿಕೊಂಡಿರುವ ಎಲ್ಲ ಮಾಲ್‌ಗಳ ಅಕೌಂಟ್‌ಗಳನ್ನೂ ಇದೇ ರೀತಿ ಅಟ್ಯಾಚ್ ಮಾಡಲಾಗುವುದೆಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಅಂಗಡಿ ಮುಂಗಟ್ಟುಗಳಿಂದ ಪಾವತಿ
ಮಂತ್ರಿಮಾಲ್ ಬ್ಯಾಂಕ್ ಅಕೌಂಟ್ ವಶಕ್ಕೆ ಪಡೆದ ನಂತರ, ಮಂತ್ರಿ ಮಾಲ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ವೇತನ ಪಾವತಿ ಕುರಿತು ಸಮಸ್ಯೆಯಾಗುತ್ತದೆ ಎಂಬ ಆತಂಕವಿದೆ. ಇದಕ್ಕೆ ಪಾಲಿಕೆ ಉತ್ತರ ಕಂಡುಕೊಂಡಿದೆ. ಮಂತ್ರಿಮಾಲ್‌ನಲ್ಲಿರುವ ಅಂಗಡಿ ಮುಂಗಟ್ಟುಗಳು ನಿಗದಿತ ಸಮಯದೊಳಗೆ, ಸೂಚಿಸಿರುವ ಬ್ಯಾಂಕ್ ಅಕೌಂಟ್‌ಗೆ, ತಾವು ಮಂತ್ರಿಮಾಲ್‌ಗೆ ನೀಡುವ ಬಾಡಿಗೆ ಹಣವನ್ನು ಪಾವತಿ ಮಾಡಬೇಕು. ಚೆಕ್, ಅಕೌಂಟ್ ಟ್ರಾನ್ಸ್‌ಫರ್, ಬ್ಯಾಂಕ್ ಡೆಪಾಸಿಟ್, NEFT, RTGS ಸೇರಿದಂತೆ ಹಲವು ಮಾರ್ಗಗಳಿವೆ. ಯಾವುದೇ ರೀತಿಯಲ್ಲಿ ಹಣ ಜಮೆ ಮಾಡಿದರೂ ಮಂತ್ರಿಮಾಲ್ ಲೆಕ್ಕದಲ್ಲೇ ಹಣ ಜಮಾವಣೆ ಆಗುತ್ತದೆ.
ಆ ಹಣದಿಂದಲೇ ಮಂತ್ರಿಮಾಲ್‌ನಲ್ಲಿರುವ ಅಷ್ಟೂ ಸಿಬ್ಬಂದಿಗೆ ಸಂಬಳ ನೀಡಲಾಗುತ್ತದೆ. ಸಂಬಳ ನೀಡಿದ ನಂತರ ಬಾಕಿ ಹಣವನ್ನು ಬಿಬಿಎಂಪಿ ತೆಗೆದುಕೊಳ್ಳಲು ಅವಕಾಶವಿದೆ. ಮಂತ್ರಿ ಮಾಲ್‌ನಿಂದ ಬಾಕಿ ಉಳಿದಿರುವ ತೆರಿಗೆಯನ್ನು ಈ ರೀತಿ ವಸೂಲು ಮಾಡುತ್ತದೆ.
ಇದನ್ನೂ ಓದಿ | ನೀವು ಸರಿಯಾಗಿ ಆಸ್ತಿ ತೆರಿಗೆ ಕಟ್ಟುತ್ತಿಲ್ಲವಾ?ನಿಮ್ಮ ಮೇಲೆ ಕಣ್ಣಿಡಲು ಬರುತ್ತಿದೆ ಹೈಟೆಕ್ ಡ್ರೋನ್