Site icon Vistara News

Aam Aadmi Party | ಬಿಬಿಎಂಪಿ ಚುನಾವಣೆ ನಡೆಸಿ, ಬೆಂಗಳೂರು ಉಳಿಸಿ; ಡಿ. 3ರಿಂದ ಆಮ್‌ ಆದ್ಮಿ ಪಾರ್ಟಿಯಿಂದ ಸಹಿ ಅಭಿಯಾನ

Aam Aadmi Party

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡಲು ಕುತಂತ್ರ ಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷ (Aam Aadmi Party), ʼಬಿಬಿಎಂಪಿ ಚುನಾವಣೆ ನಡೆಸಿ, ಬೆಂಗಳೂರು ಉಳಿಸಿʼ ಹೆಸರಿನಲ್ಲಿ ಡಿಸೆಂಬರ್ 3ರಿಂದ 5ರವರೆಗೆ ಬೆಂಗಳೂರಿನಾದ್ಯಂತ ಬೃಹತ್‌ ಸಹಿ ಸಂಗ್ರಹ ಹಮ್ಮಿಕೊಂಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ಡಿಸೆಂಬರ್ 3ರಿಂದ 5ರ ತನಕ ಬೆಂಗಳೂರಿನಾದ್ಯಂತ ಮೂರು ದಿನಗಳ ಬೃಹತ್‌ ಸಹಿಸಂಗ್ರಹ ಅಭಿಯಾನ ನಡೆಸಲು ಆಮ್‌ ಆದ್ಮಿ ಪಾರ್ಟಿ ನಿರ್ಧರಿಸಿದೆ. ಸುಮಾರು ೫ ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಡಿಸೆಂಬರ್‌ 6 ರಂದು ಎಎಪಿ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಬೆಂಗಳೂರಿನಾದ್ಯಂತ ಸಂಗ್ರಹಿಸಿದ ಸಹಿಗಳನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಶೀಘ್ರ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | ಮಲ್ಲಿಕಾರ್ಜುನ್​ ಖರ್ಗೆಗೆ ಇನ್ನೊಂದು ಹುದ್ದೆ?; ಇಬ್ಬರು ಪ್ರಮುಖ ನಾಯಕರನ್ನು ಬಿಟ್ಟು ಸೋನಿಯಾ ಗಾಂಧಿ ನಡೆಸಿದ ಸಭೆಯ ಗುಟ್ಟೇನು?

2020ರಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ಮುಂದೂಡುತ್ತಲೇ ಬಂದಿದೆ. ಇದರಿಂದ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಳ್ಳುವುದರ ಜತೆಗೆ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಚುನಾವಣೆ ನಡೆಯುವುದಕ್ಕೆ ಪದೇಪದೆ ಅಡ್ಡಗಾಲು ಹಾಕುವ ಮೂಲಕ ಬಿಜೆಪಿ ಸರ್ಕಾರ, ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಎಸಗಿದೆ ಎಂದು ಕಿಡಿ ಕಾರಿದರು.

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಲ್ಲಿನ ದುರಾಡಳಿತದಿಂದಾಗಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ಶತಸಿದ್ಧ ಎಂದು ಬಿಜೆಪಿಗೆ ಮನವರಿಕೆ ಆಗಿರುವುದರಿಂದ ಚುನಾವಣೆ ಮುಂದೂಡುವ ಕುತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕೂಡ ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಗಮನಿಸಿದರೆ, ಅವು ಬಿಜೆಪಿಯೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆ ಎಂದು ಮೋಹನ್‌ ದಾಸರಿ ಹೇಳಿದರು.

ಮೇಯರ್‌ ಹಾಗೂ ಕಾರ್ಪೊರೇಟರ್‌ಗಳು ಇಲ್ಲದ ಕಾರಣ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. 2022-23ನೇ ವಾರ್ಡ್‌ ಮಟ್ಟದ 2,543 ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ 867 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ ಎಂಟು ತಿಂಗಳಾದರೂ ಈ ಪೈಕಿ ಕೇವಲ 76 ಕಾಮಗಾರಿಗಳು ಆರಂಭಗೊಂಡಿವೆ ಎಂದು ತಿಳಿಸಿದರು.

ಅಧಿಕಾರಿಗಳು ನಾಮ್‌ಕೇ ವಾಸ್ತೆ ವಾರ್ಡ್‌ ಮಟ್ಟದ ಸಭೆಗಳನ್ನು ನಡೆಸುತ್ತಿದ್ದರೂ ಪ್ರಶ್ನಿಸುವವರು ಇಲ್ಲವಾಗಿದೆ. ಕಸದ ಸಮಸ್ಯೆ, ರಸ್ತೆ ಗುಂಡಿಗಳು, ಅವ್ಯವಸ್ಥಿತ ಒಳಚರಂಡಿ, ಕೆಟ್ಟು ಹೋಗಿರುವ ವಿದ್ಯುತ್‌ ದೀಪ, ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಬೆಂಗಳೂರಿನಲ್ಲಿ ತಾಂಡವವಾಡುತ್ತಿವೆ. ಇದರಿಂದಾಗಿ ನಾಗರಿಕರು ಬೆಂಗಳೂರನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಸುರೇಶ್‌ ರಾಥೋಡ್‌ ಹಾಗೂ ಉಷಾ ಮೋಹನ್‌ ಭಾಗವಹಿಸಿದ್ದರು.

ಇದನ್ನೂ ಓದಿ | Voter Data | ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ: ಸಿಎಂ ಬೊಮ್ಮಾಯಿ

Exit mobile version