ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ (Free Bus service) ಅವಕಾಶ ನೀಡಿರುವ ಶಕ್ತಿ ಯೋಜನೆಯಿಂದಾಗಿ (Shakthi scheme) ಖಾಸಗಿ ವಾಹನಗಳನ್ನು (Private Passenger Vehicles) ಇಟ್ಟುಕೊಂಡು ಜೀವನ ನಡೆಸುತ್ತಿರುವವರ ಬದುಕು ಬರ್ಬಾದಾಗಿ ಹೋಗಿದೆ. ಅವರ ಬೇಡಿಕೆಗಳನ್ನೂ ಸಾವಧಾನದಿಂದ ಪರಿಶೀಲಿಸಿ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswamy) ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಒಕ್ಕೂಟ ಕರೆ ನೀಡಿರುವ ಬಂದ್‌ನ (Bengaluru bundh) ಹಿನ್ನೆಲೆಯಲ್ಲಿ ʻʻಬದುಕಿಗೆಗ್ಯಾರಂಟಿಕೊಡಿʼ ಎಂಬ ಹ್ಯಾಷ್ ಟ್ಯಾಗ್‌ನಡಿ ಟ್ವೀಟ್ ಮಾಡಿದ್ದಾರೆ. ಗ್ಯಾರಂಟಿಗಳ ಅಡ್ಡ ಪರಿಣಾಮದಿಂದ (Side effects of Guarantee Schemes) ಹಲವರಿಗೆ ಸಂಕಷ್ಟ ಎದುರಾಗಿದೆ ಎಂದಿದ್ದಾರೆ. ಸರ್ಕಾರ ಪ್ರತಿಷ್ಠೆ ಬಿಟ್ಟು ಸಮಸ್ಯೆಗೆ ಒಳಗಾದವರ ಜತೆ ಮಾತನಾಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Bengaluru Bandh : ಬಾಡಿಗೆ ಮಾಡುತ್ತಿದ್ದ ಚಾಲಕನ ತಡೆದು ಸನ್ಮಾನಿಸಿ ಬೇಕಾಬಿಟ್ಟಿ ಹಲ್ಲೆ, ಕಾರಿಗೆ ಮೊಟ್ಟೆ ಎಸೆತ
ಅರೆಬೆಂದ ಶಕ್ತಿ ಯೋಜನೆ, ಬುಡಮೇಲಾದ ಖಾಸಗಿ ಸಂಚಾರ ವ್ಯವಸ್ಥೆ
ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ.
ಖಾಸಗಿ ವಾಹನ ಹೊಂದಿದವರ ಬದುಕಿಗೆ ಗ್ಯಾರಂಟಿ ಇಲ್ಲ
ಸಾಲಸೋಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ.
ಸಾರ್ವಜನಿಕ ಬದುಕು ಅಸ್ತವ್ಯಸ್ತವಾಗಿದೆ
ಈ ಬಂದ್ ನಿಂದ ಸರಕಾರಿ ಸಾರಿಗೆಗೆ ಪರ್ಯಾಯವಾಗಿದ್ದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿದೆ.
ಪ್ರತಿಷ್ಠೆ ಪಕ್ಕಕ್ಕಿಟ್ಟು ಬೇಡಿಕೆ ಪರಿಶೀಲಿಸಲು ಸಲಹೆ
ಸರಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದ ಅಸಾಧ್ಯ ಡಿಮ್ಯಾಂಡ್ ಗಳಲ್ಲ. ಅವರಿಗೂ ಕುಟುಂಬಗಳಿವೆ, ತಂದೆತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರಕಾರ ಮರೆಯಬಾರದು.
ಗ್ಯಾರಂಟಿ ಬಾಧಿತರ ಬದುಕಿಗೆ ಪರಿಹಾರ ಕೊಡಿ
ಕಾಟಾಚಾರಕ್ಕೆ ಕರೆದು ಮಾತನಾಡುವುದಲ್ಲ. ವಾಸ್ತವತೆಗೆ ತಕ್ಕಂತೆ ಕಷ್ಟದಲ್ಲಿರುವ ಅವರಿಗೆ ನೆರವಾಗಬೇಕು. ನುಡಿದಂತೆಯೇ ನಡೆದು, ‘ಗ್ಯಾರಂಟಿ ಬಾಧಿತರ’ ಬದುಕಿಗೆ ಪರಿಹಾರ ಒದಗಿಸಬೇಕು ಎನ್ನುವುದು ನನ್ನ ಆಗ್ರಹ.ತಕ್ಷಣವೇ ಬಂದ್ ನಿರತರನ್ನು ಮುಖ್ಯಮಂತ್ರಿಗಳದ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ಶ್ರೀ ರಾಮಲಿಂಗಾ ರೆಟ್ಟಿ ಅವರು ಕರೆದು ಮಾತನಾಡಬೇಕು.