ಬೆಂಗಳೂರು: ಸೋಮವಾರ ಬೆಳಗ್ಗೆ ಆರಂಭಗೊಂಡು ಮಧ್ಯಾಹ್ನ ಅಂತ್ಯಗೊಂಡ ಖಾಸಗಿ ವಾಹನಗಳ ಬೆಂಗಳೂರು ಬಂದ್ (Bengaluru bandh) ವೇಳೆ ಗೂಂಡಾಗಿರಿ (Act of Goondaism) ನಡೆಸಿದವರಿಗೆ ಕಾದಿದೆ ಪೊಲೀಸ್ ಟ್ರೀಟ್‌ಮೆಂಟ್. ವಾಹನಗಳನ್ನು ಅಡ್ಡಗಟ್ಟಿ ಹಲ್ಲೆ ಮಾಡಿದವರು, ಅವಾಚ್ಯವಾಗಿ ನಿಂದಿಸಿದವರು, ಕಲ್ಲು ತೂರಾಟ ನಡೆಸಿದವರು, ಬೈಕ್ ರ‍್ಯಾಪಿಡೋ ಸವಾರರ ಮೇಲೆ (Attack on Rapido riders) ದರ್ಪ ತೋರಿದವವರೆಲ್ಲರಿಗೂ ಸಂಕಷ್ಟ ಕಾದಿದೆ. ಯಾಕೆಂದರೆ, ಯಾರೆಲ್ಲ ಗೂಂಡಾ ವರ್ತನೆಯಿಂದ ತೊಂದರೆಗೆ ಒಳಗಾಗಿದ್ದಾರೋ ಅವರೆಲ್ಲರೂ ದೂರು ನೀಡಬಹುದು ಎಂದು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಸರ್ಕಾರದ ಶಕ್ತಿ ಯೋಜನೆಯಿಂದ ತಮಗೆ ತೊಂದರೆಯಾಗಿದೆ, ಹೀಗಾಗಿ ತಮಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಸುಮಾರು 32 ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಮುಂಜಾನೆಯಿಂದಲೇ ಬಂದ್ ಆರಂಭಗೊಂಡಿತ್ತು. ಈ ವೇಳೆ ಕೆಲವು ಚಾಲಕರು ತುರ್ತು ಕಾರಣಗಳಿಗಾಗಿ ಹೊರಗೆ ಬಂದಿದ್ದರು. ಕೆಲವರು ತಾವು ಬಂದ್ ಬೆಂಬಲಿಸದೆ ಕೆಲಸ ಮಾಡಿದ್ದರು. ಈ ನಡುವೆ, ಬಂದ್ ಪರವಾದ ಕೆಲವರು ಗೂಂಡಾ ವರ್ತನೆ ತೋರಿದ್ದರು. ಹಲ್ಲೆ, ದಾಂಧಲೆ, ಅಪಮಾನ ಸೇರಿದಂತೆ 10ಕ್ಕೂ ಹೆಚ್ಚು ಘಟನೆಗಳು ದಾಖಲಾಗಿದ್ದವು. ಕೆಲವು ಕಡೆ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ದಾಂಧಲೆ ನಡೆಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಗೂಂಡಾಯಿಸಂ ಪ್ರವೃತ್ತಿಯನ್ನು ಬೆಳೆಯಲು ಬಿಡಬೇಡಿ ಎಂದು ಹೊರವರ್ತುಲ ರಸ್ತೆಯ ಸಾಫ್ಟ್‌ವೇರ್ ಕಂಪನಿಗಳ ಒಕ್ಕೂಟ ಸರ್ಕಾರಕ್ಕೆ ವಿನಂತಿ ಮಾಡಿತ್ತು.
ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಬಂದ್ ವೇಳೆ ಗೂಂಡಾಯಿಸಂ ತೋರಿದವರ ಮೇಲೆ ಕೇಸ್ ಹಾಕುವಂತೆ ಸೂಚಿಸಿದೆ. ಇದರ ಪ್ರಕಾರ ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ದಾಂಧಲೆ ನಡೆದಿದೆ?
- ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಾಲಕರೊಬ್ಬರನ್ನು ಚಿನ್ನಾ ರನ್ನಾ ಎಂದು ಕರೆದು ಕೆಳಗಿಳಿಸಿ ಮೈಸೂರು ಪೇಟ ತೊಡಿಸಿ ಮಾಲೆ ಹಾಕಿ ಕುಹಕದ ಸನ್ಮಾನ ಮಾಡಿ ಬಳಿಕ ಹಲ್ಲೆ ಮಾಡಲಾಗಿತ್ತು.
- ಎಸ್ ಜೆ ಪಾರ್ಕ್ ನಲ್ಲಿ ಒಂದು ಆಟೋಗೆ ಕಲ್ಲು ತೂರಲಾಗಿತ್ತು. ಈ ಬಗ್ಗೆ ಒಂದು ಕೇಸ್ ದಾಖಲು ಮಾಡಲಾಗಿದೆ. ಇದರಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
- ದಕ್ಷಿಣ ವಿಭಾಗದಲ್ಲಿ ಒಬ್ಬ ತನ್ನದೇ ವಾಹನಕ್ಕೆ ಡ್ಯಾಮೇಜ್ ಮಾಡಿಕೊಂಡಿದ್ದ. ಈ ಬಗ್ಗೆ ವ್ಯಕ್ತಿಯನ್ನು ವಿಚಾರಣೆ ನಡೆಸಿ ಬುದ್ದಿ ಹೇಳಲಾಗಿದೆ.
- ಚಿಕ್ಕಜಾಲದಲ್ಲಿ ಒಂದು ಕ್ಯಾಬ್ ಗಾಜು ಒಡೆಯಲಾಗಿದ್ದು, ವಿಜಯ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.
ಹಲವರು ಕಡೆ ರ‍್ಯಾಪಿಡೋ ಸವಾರರ ಮೇಲೆ ದಾಳಿ
ರ‍್ಯಾಪಿಡೋ ಸವಾರರ ಮೇಲೆ ಆಟೋ ಚಾಲಕರಿಗೆ ಹಿಂದಿನಿಂದಲೇ ಕಣ್ಣಿದೆ. ಸೋಮವಾರ ತಮ್ಮ ಪ್ರತಿಭಟನೆಯ ನಡುವೆ ಅವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟಿನಲ್ಲಿ ಹಲವು ಕಡೆ ಹಲ್ಲೆ ಮಾಡಿದ್ದಾರೆ. ಚಾಲಕರೇ ತಾವೇ ವಾಹನ ಬುಕ್ ಮಾಡಿ ಅವರನ್ನು ಕರೆಸಿಕೊಂಡು ಹಲ್ಲೆ ಮಾಡಿದ ಘಟನೆ ನಡೆದಿದೆ.
ಇದನ್ನೂ ಓದಿ: Bengaluru Bandh : ಫೀಲ್ಡಿಗಿಳಿದ ರ‍್ಯಾಪಿಡೋ ಚಾಲಕರು; ಪ್ರತಿಭಟನಾಕಾರರಿಂದ ಹೊಡಿಬಡಿ
ತನ್ನ ಕಾರಿಗೆ ತಾನೇ ಮೊಟ್ಟೆ ಹೊಡೆದುಕೊಂಡ!
ಈ ನಡುವೆ ಕೆಲವು ವಾಹನ ಚಾಲಕರು ಕಂಪನಿಯವರು ಬರಲು ಹೇಳಿದ್ದರಿಂದ ತಪ್ಪಿಸಿಕೊಳ್ಳಲು ತಮ್ಮ ಕಾರಿಗೆ ತಾವೇ ಮೊಟ್ಟೆ ಹೊಡೆದುಕೊಂಡು, ಕಲ್ಲು ಹೊಡೆದುಕೊಂಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ದಕ್ಷಿಣ ವಿಭಾಗದ ಕುಮಾರಸ್ವಾಮಿ ಲೇಔಟ್ ನಲ್ಲಿ ಸುರೇಶ್ ಎಂಬ ಕ್ಯಾಬ್ ಚಾಲಕ ತನ್ನ ಇನೋವಾ ಕಾರಿಗೆ ತಾನೇ ಮೊಟ್ಟೆ ಹೊಡೆದಂತೆ ಡ್ರಾಮಾ ಮಾಡಿದ್ದ. ಕೆಲಸ ಮಾಡ್ತಿದ್ದ ಕಂಪನಿಯವರು ಕ್ಯಾಬ್ ಕಳಿಸಲು ಹೇಳಿದ್ದರು. ಆದರೆ, ಗೆಳೆಯರು ಬಂದ್‌ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಆಗ ಸುರೇಶ್ ತನ್ನ ಕಾರಿಗೆ ಯಾರೋ ಮೊಟ್ಟೆ ಹೊಡೆದಂತೆ ನಾಟಕ ಮಾಡಿದ್ದ. ಈಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.