Site icon Vistara News

Bengaluru bandh : ಬಂದ್‌ ಹೆಸರಲ್ಲಿ ಗೂಂಡಾಗಿರಿ; ಟೆಕ್ಕಿಗಳು, ಜನರ ಆಕ್ರೋಶ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Bengaluru bandh

ಬೆಂಗಳೂರು: ರಾಜ್ಯದ ಖಾಸಗಿ ವಾಹನಗಳ ಒಕ್ಕೂಟ ನೀಡಿದ ಬಂದ್‌ ಕರೆ (Bengaluru bandh) ಬಹುತೇಕ ಯಶಸ್ವಿಯಾಗಿದೆ. ಈ ನಡುವೆ ವಾಹನಗಳನ್ನು ತಡೆಯುವ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ (Goodaism) ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವ, ಚಾಲಕರನ್ನು ಬೆದರಿಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು (People oppose Goondaism) ಒತ್ತಾಯಿಸಲಾಗುತ್ತಿದೆ. ಎಕ್ಸ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media post) ಜನರು ತಮ್ಮ ಆಕ್ರೋಶವನ್ನು ತೋಡಿಕೊಳ್ಳುತ್ತಿವೆ.

ಅದರಲ್ಲೂ ಮುಖ್ಯವಾಗಿ ನಿತ್ಯ ವಾಹನಗಳಲ್ಲಿ ತಮ್ಮ ಕಚೇರಿಗೆ ಹೋಗುವ ಐಟಿ ಕಂಪನಿಗಳ ಸಿಬ್ಬಂದಿ ಈ ಗೂಂಡಾಗಿರಿ ವಿರುದ್ಧ ಸಿಡಿದೆದ್ದಿದ್ದಾರೆ. ಔಟರ್‌ ರಿಂಗ್‌ ರೋಡ್‌ ಕಂಪನಿಗಳ ಒಕ್ಕೂಟ ಈ ನಿಟ್ಟಿನಲ್ಲಿ ಒಂದು ವಿಡಿಯೊವನ್ನು ಹಂಚಿಕೊಂಡು ಈ ರೀತಿಯ ಗೂಂಡಾಗಿರಿಯನ್ನು ಮಟ್ಟಹಾಕಬೇಕು ಎಂದು ಕೋರಿಕೆ ಮಂಡಿಸಿದೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿರುವ ಈ ಟ್ವೀಟ್‌ನಲ್ಲಿ ಆಸ್ತಿಪಾಸ್ತಿಗಳಿಗೆ, ವಾಹನಗಳಿಗೆ ಹಾನಿ ಮಾಡುವ ಇಂಥ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್‌ ಹಾಕಬೇಕು. ಒಂದೊಮ್ಮೆ ಇಂಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಇಂಥಹುದೇ ವರ್ತನೆ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.

ಔಟರ್‌ ರಿಂಗ್‌ ರೋಡ್‌ ಕಂಪನಿಗಳ ಒಕ್ಕೂಟ ಎನ್ನುವುದು ಐಟಿ ಕಂಪನಿಗಳ ಒಕ್ಕೂಟವಾಗಿದೆ. ಇದು ದೇಶ ಮಾತ್ರವಲ್ಲ ವಿದೇಶದ ಕಂಪನಿಗಳನ್ನು ಒಳಗೊಂಡ ಒಕ್ಕೂಟವಾಗಿದೆ. ಇದು ಈ ರೀತಿ ಟ್ಟೀಟ್‌ ಮಾಡಿರುವುದು ಬೆಂಗಳೂರಿನ ಹೆಸರಿಗೆ ಕಳಂಕ ಉಂಟು ಮಾಡುವ ಅಪಾಯವಿರುವುದರಿಂದ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಶಕ್ತಿ ಯೋಜನೆಯಿಂದ ತಮಗೆ ತೊಂದರೆಯಾಗಿದೆ ಎಂದು ಆಪಾದಿಸಿರುವ ಖಾಸಗಿ ವಾಹನಗಳ ಒಕ್ಕೂಟ ಸರ್ಕಾರ ತಮಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸುತ್ತಿದೆ. ಇದಕ್ಕಾಗಿ ಬಂದ್‌ ಮೂಲಕ ಎಚ್ಚರಿಕೆ ನೀಡಿದೆ.

ಆದರೆ, ಬೆಳಗ್ಗಿನಿಂದಲೇ ಹಲವು ಕಡೆಗಳಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ, ತುರ್ತು ಕೆಲಸಗಳಿಗಾಗಿ ಹೋಗುತ್ತಿರುವ ವ್ಯಕ್ತಿಗಳ ಮೇಲೆಯೂ ಹಲ್ಲೆ ನಡೆಸುವುದು, ಅಪಮಾನ ಮಾಡುವುದೇ ಮೊದಲಾದ ಘಟನೆಗಳು ನಡೆದಿವೆ.ʼ

ಇದನ್ನೂ ಓದಿ: Bengaluru Bandh : ಬಾಡಿಗೆ ಮಾಡುತ್ತಿದ್ದ ಚಾಲಕನ ತಡೆದು ಸನ್ಮಾನಿಸಿ ಬೇಕಾಬಿಟ್ಟಿ ಹಲ್ಲೆ, ಕಾರಿಗೆ ಮೊಟ್ಟೆ ಎಸೆತ

ಇಂಥ ಗೂಂಡಾಗಿರಿಯನ್ನು ಯಾರು ನಿಯಂತ್ರಿಸಬೇಕು?

ವಿಮಾನ ನಿಲ್ದಾಣದಿಂದ ಮೊದಲೇ ವಾಹನ ಬುಕ್‌ ಮಾಡಿದವರು ಆಕ್ರೋಶಿತರಾಗಿದ್ದು, ತಮ್ಮನ್ನು ಕರೆದುಕೊಂಡು ಹೋಗಲು ಬರುವವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಸೋಮವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರೊಬ್ಬರನ್ನು ಬಿಟ್ಟು ಬರಲು ಹೋದ ಕಾರಿನ ಚಾಲಕನನ್ನು ಇಳಿಸಿ ಆತನಿಗೆ ಪೇಟ ಇಟ್ಟು ಶಾಲು ಹಾಕಿ ಸನ್ಮಾನ ಮಾಡುವ ನೆಪದಲ್ಲಿ ಹಲ್ಲೆ ಮಾಡಲಾಗಿದೆ. ವಾಹನಗಳ ಗಾಜು ಒಡೆಯುವುದು, ಹಲ್ಲೆ ಮಾಡುವುದು, ಮೊಟ್ಟೆ ಎಸೆಯುವ ಕೆಲಸಗಳು ಹಲವು ಕಡೆ ನಡೆದಿವೆ.

ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರು ಆದೇಶ ನೀಡಿದ್ದಾರಾದರೂ ಅಲ್ಲಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಈಗ ಅಲ್ಲಿನ ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಷ್ಟೇ ಕ್ರಮ ಕೈಗೊಳ್ಳಬೇಕಾಗಿದೆ.

Exit mobile version