Site icon Vistara News

Bengaluru Bandh : ಬಾಡಿಗೆ ಮಾಡುತ್ತಿದ್ದ ಚಾಲಕನ ತಡೆದು ಸನ್ಮಾನಿಸಿ ಬೇಕಾಬಿಟ್ಟಿ ಹಲ್ಲೆ, ಕಾರಿಗೆ ಮೊಟ್ಟೆ ಎಸೆತ

Bengaluru bandh

ಬೆಂಗಳೂರು: ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರು ಕರೆ ನೀಡಿರುವ ಬೆಂಗಳೂರು ಬಂದ್‌ (Bengaluru bandh) ಕೆಲವೊಂದು ಕಡೆಗಳಲ್ಲಿ ಹಿಂಸಾತ್ಮಕ ರೂಪ (Bandh Turns Violent) ಪಡೆದಿದೆ. ಬಂದ್‌ ಕರೆ ಮೀರಿ ವಾಹನ ಬಾಡಿಗೆಗೆ ಇಳಿಸಿದವರ ಮೇಲೆ ಕಲ್ಲು, ಮೊಟ್ಟೆ ತೂರಾಟ (Stones and egss pelted) ಮಾತ್ರವಲ್ಲದೆ ಕೆಲವು ಕಡೆ ಹಲ್ಲೆಯೂ ನಡೆದಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bangalore Airport) ಪ್ರಯಾಣಿಕರೊಬ್ಬರು ಬಿಟ್ಟು ಬರಲು ಬಂದಿದ್ದ ಚಾಲಕನಿಗೆ ಪ್ರತಿಭಟನಾಕಾರರು ಮೊದಲು ಸನ್ಮಾನಿಸಿ ಬಳಿಕ ಚೆನ್ನಾಗಿ ಥಳಿಸಿ ತಮ್ಮ ಆಕ್ರೋಶ ಹೊರಗೆಡಹಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೋಮವಾರ ಬಾಡಿಗೆ ವಾಹನಗಳ ಓಡಾಟ ವಿರಳವಾಗಿತ್ತು. ಬೆಳಗಿನಿಂದಲೇ ಪ್ರತಿಭಟನಾಕಾರರು ಅಲ್ಲಿ ಕಾಯುತ್ತಿದ್ದರು.

ಈ ನಡುವೆ, ಒಬ್ಬ ಚಾಲಕರು ವ್ಯಕ್ತಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಮರಳುತ್ತಿದ್ದಾಗ ಪ್ರತಿಭಟನಾಕಾರರು ಅವರನ್ನು ತಡೆದರು. ಬಾ ಚಿನ್ನ, ಬಾ ಕಂದ ಎಂದು ಕರೆದು ಕಾರಿನಿಂದ ಇಳಿಸಿದ ಅವರು ಮೊದಲು ಮೈಸೂರು ಪೇಟ ಶಾಲು ತೊಡಿಸಿದರು. ಬಂದ್‌ ಇದ್ದರೂ ಜನರ ಸೇವೆ ಮಾಡ್ತಾ ಇದ್ದೀಯಲ್ಲಾ.. ಸನ್ಮಾನ ಮಾಡುತ್ತಿದ್ದೇವೆ ಎಂದು ಹೇಳಿದರು.

ಆ ಚಾಲಕ ನಾನು ಇವರನ್ನು ಬಿಟ್ಟು ಹೋಗಲು ಬಂದಿದ್ದೇನೆ. ಇನ್ನು ಬಾಡಿಗೆ ಮಾಡುವುದಿಲ್ಲ, ಕಾಲಿಗೆ ಬೀಳುತ್ತೇನೆ ಎಂದೆಲ್ಲ ಅಂಗಲಾಚಿದರೂ ಬಿಡದೆ, ಇಲ್ಲ ಕಣಾ.. ಸನ್ಮಾನ ಮಾಡ್ತಾ ಇದೀವಿ ನಿಂಗೆ ಎಂದು ಹೇಳಿ ಮಾಲೆ ತೊಡಿಸಿ, ಪೇಟ ಇಟ್ಟು ಸನ್ಮಾನಿಸಿದರು. ಆದರೆ, ಬಳಿಕ ಬೇಕಾಬಿಟ್ಟಿ ಹಲ್ಲೆ ನಡೆಸಿದರು.

ಹಲ್ಲೆ ಜೊತೆಗೆ ಅವಾಚ್ಯವಾಗಿ, ನಿಂದಿಸಿ, ಮುಖಕ್ಕೆ ಎಂಜಲಿನಿಂದ ಉಗಿದಿದ್ದಾರೆ. ಚಾಲಕನಿಗೆ ಅವಮಾನ ಮಾಡಿ ನಿಂದಿಸಿರುವ ವೀಡಿಯೋ ವೈರಲ್ ಆಗಿದೆ. ಬೆಂಗಳೂರಿನ ಹಲವು ಭಾಗಗಳಲಿ ಈ ರೀತಿಯ ಕೃತ್ಯಗಳು ಹೆಚ್ಚಾಗಿವೆ.

ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸಜ್ಜಾಗಿರುವ ಆಟೊ ಚಾಲಕರು

ಟೌನ್‌ ಹಾಲ್‌ ಬಳಿ ಆಟೋ ಚಾಲಕರ ಮೇಲೆ ಹಲ್ಲೆ

ಈ ನಡುವೆ ಬೆಂಗಳೂರಿನ ಹಲವು ಭಾಗಗಲ್ಲಿ ಬಾಡಿಗೆ ಮಾಡುವ ಖಾಸಗಿ ವಾಹನಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಸಂಘಟನೆಗಳ ಪದಾಧಿಕಾರಿಗಳೆಂದು ಹೇಳಿಕೊಂಡ ಕೆಲವು ವ್ಯಕ್ತಿಗಳು ಗೂಂಡಾಗಿರಿಯ ವರ್ತನೆ ತೋರುತ್ತಿದ್ದಾರೆ. ಟೌನ್ ಹಾಲ್ ಬಳಿ ಓಡಾಡ್ತಿದ್ದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ ಮಾಡಲಾಗಿದೆ. ಪೊಲೀಸ್ ಭದ್ರತೆಯ ನಡುವೆಯೂ ಅಟೋಗಳಿಗೆ ಅಡ್ಡ ಹಾಕಿ ಧಮ್ಕಿ ಹಾಕಲಾಗುತ್ತಿದೆ. ಆಟೋ ಗಾಜುಗಳನ್ನು ಒಡೆದು ವಾಹನ ಚಾಲಕರಿಗೆ ಹಲ್ಲೆ ಮಾಡಲಾಗಿದೆ. ಎಸ್.ಜೆ. ಪಾರ್ಕ್ ಪೊಲೀಸರು ಕೂಡಲೇ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದೊಯ್ದರು.

ಇದನ್ನೂ ಓದಿ: Bengaluru Bandh : ಖಾಸಗಿ ವಾಹನ ಬಂದ್‌ ನಡುವೆ ಮೆಟ್ರೊಗೆ ಜನರ ದೌಡು; ಪ್ರತಿ 5 ನಿಮಿಷಕ್ಕೊಂದು ರೈಲು

ಹೆಬ್ಬಾಳದಲ್ಲಿ ಕಾರಿನ ಒಳಗೆ ಮೊಟ್ಟೆ ಎಸೆತ, ಟಯರ್‌ ಗಾಳಿ ತೆಗೆದು ಕಿರಿಕಿರಿ

ಬಂದ್ ಗೆ ಬೆಂಬಲ ನೀಡದೇ ರಸ್ತೆಗಿಳಿದ ಚಾಲಕರಿಗೆ ಮೊಟ್ಟೆ ಎಸೆದಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ. ಇತ್ತ ರೇಸ್ ಕೋರ್ಸ್ ಬಳಿ ಕಾರಿನ ಗಾಜು ಹೊಡೆದು ವಿಕೃತಿ ಮೆರೆಯಲಾಗಿದೆ. ರಸ್ತೆಗಿಳಿದ ಕ್ಯಾಬ್ ಗ್ಲಾಸ್ ಪುಡಿ ಮಾಡಲಾಗಿದೆ.

ಇನ್ನು ಕೆಲವು ಕಡೆ ವಾಹನಗಳನ್ನು ತಡೆ ಟಯರ್‌ಗಳ ಗಾಳಿ ತೆಗೆದು ಕಿರಿಕಿರಿ ಮಾಡಲಾಗಿದೆ.

ಈ ನಡುವೆ, ಖಾಸಗಿ ವಾಹನಗಳಿಲ್ಲದೆ ಮಕ್ಕಳನ್ನು ಶಾಲೆಗೆ ಕರೆದೊಯ್ಯವುದು ಹೆತ್ತವರಿಗೆ ಕಷ್ಟವಾಗಿದೆ. ಹೆಚ್ಚಿನ ಕಡೆ ಹೆತ್ತವರೇ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕಾಣಿಸುತ್ತಿದೆ.

Exit mobile version