ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ನಡೆಯುತ್ತಿದ್ದ ಖಾಸಗಿ ಪ್ರಯಾಣಿಕ ವಾಹನಗಳ ಒಕ್ಕೂಟದ ಕರೆ ಆಧರಿಸಿದ ಬಂದ್‌ನ್ನು (Bengaluru bandh) ಹಿಂದಕ್ಕೆ ಪಡೆಯಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga reddy) ಅವರು ನೀಡಿದ ಭರವಸೆ ಆಧರಿಸಿ ತಕ್ಷಣದಿಂದಲೇ ಬಂದ್‌ನ್ನು ಹಿಂದಕ್ಕೆ ಪಡೆದಿರುವುದಾಗಿ ಒಕ್ಕೂಟ ಪ್ರಕಟಿಸಿದೆ.
ಇದರೊಂದಿಗೆ ಆಟೋ, ಟ್ಯಾಕ್ಸಿ, ಬಸ್ ಸೇರಿದಂತೆ ಖಾಸಗಿ ಬಸ್‌ಗಳ ಸಂಚಾರ ತಕ್ಷಣದಿಂದ ಮರು ಆರಂಭಗೊಳ್ಳಲಿದ್ದು,, ಪ್ರಯಾಣಿಕರು ನಿರಾಳರಾಗುವಂತಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಭೇಟಿ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಭರವಸೆಯ ಆಧಾರದಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದೆ.
ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಓಡಾಟಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯಿಂದ ತಮಗೆ ತೊಂದರೆಯಾಗಿದೆ ಎಂದು ಆಪಾದಿಸಿರುವ ಆಟೋ, ಟ್ಯಾಕ್ಸಿ, ಬಸ್ ಸೇರಿದಂತೆ ನಾನಾ ಖಾಸಗಿ ಪ್ರಯಾಣಿಕ ವಾಹನಗಳ 32 ಸಂಘಟನೆಗಳು ಸೇರಿ ಬಂದ್‌ಗೆ ಕರೆ ನೀಡಿದ್ದವು. ಸೋಮವಾರ ಮುಂಜಾನೆಯಿಂದಲೇ ಬಹುಪಾಲು ಖಾಸಗಿ ವಾಹನಗಳು ರಸ್ತೆಗೆ ಇಳಿಯದೆ ಪ್ರಯಾಣಿಕರು ತೊಂದರೆ ಅನುಭವಿಸಿದರು. ಶಾಲಾ ವಾಹನಗಳು ಕೂಡಾ ಮುಷ್ಕರಕ್ಕೆ ಬೆಂಬಲ ನೀಡಿದ್ದರಿಂದ ಮಕ್ಕಳಿಗೂ ಸಮಸ್ಯೆಯಾಯಿತು.
ಈ ನಡುವೆ, ಹಲವು ಕಡೆಗಳಲ್ಲಿ ಖಾಸಗಿ ವಾಹನಗಳು ಓಡಾಡಿದ್ದನ್ನು ಕಂಡು ಅವುಗಳ ಮೇಲೆ ದಾಳಿ ನಡೆಸಲಾಗಿದೆ. ಬೈಕ್ ರ‍್ಯಾಪಿಡೋ ಸಂಚಾರಕ್ಕೂ ತಡೆ ಉಂಟು ಮಾಡಿದ್ದು ಹಲವು ಕಡೆ ಸವಾರರ ಮೇಲೆ ಹಲ್ಲೆ ಮಾಡಲಾಗಿದೆ.
ವಾಹನ ಚಾಲಕ, ಮಾಲೀಕರ ಬೃಹತ್ ಮೆರವಣಿಗೆ
ಈ ನಡುವೆ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಇದರಲ್ಲಿ ಸುಮಾರು 10,000ದಷ್ಟು ಮಂದಿ ಭಾಗವಹಿಸಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಬೇಡಿಕೆಗಳ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಗಿದೆ.
ಮುಂದುವರಿದ ಆಕ್ರೋಶ
ಈ ನಡುವೆ, ಒಕ್ಕೂಟ ಬಂದ್ ಕರೆಯನ್ನು ವಾಪಸ್ ಪಡೆದಿದ್ದರೂ ಕೆಲವು ಚಾಲಕರ ಆಕ್ರೋಶ ಮುಂದುವರಿದಿದೆ. ಅವರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಬಿಗುವನ್ನು ಪಡೆದುಕೊಳ್ಳುತ್ತಿದೆ.
ಬೇಡಿಕೆ ಒಪ್ಪಲು ಸಾಧ್ಯವೇ ಎಂದು ಕೇಳಿದ ಸಿದ್ದರಾಮಯ್ಯ
ಇದಕ್ಕಿಂತ ಮೊದಲು ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻʻಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಯೋಜನೆ ರೂಪಿಸಿದ್ದೇವೆ. ಖಾಸಗಿ ಬಸ್‌ನವರು ಶಕ್ತಿ ಯೋಜನೆಯಿಂದ (Shakthi Scheme) ನಮಗೆ ನಷ್ಟ ಆಗುತ್ತಿದೆ, ಹಣ ಕೊಡಿ ಅಂತ ಕೇಳುತ್ತಿದ್ದಾರೆ. ಅದೆಲ್ಲ ಸಾಧ್ಯವೇ? ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಟ್ಟರೆ ಅದನ್ನು ಈಡೇರಿಸುವುದು ಸಾಧ್ಯವೇʼʼ ಎಂದು ಕೇಳಿದ್ದರು.
ʻʻಬಂದ್ ಮಾಡುವುದು, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಜೀವಾಳ. ಬಂದ್ ಹಕ್ಕಿಕ್ಕಲು ಅವಕಾಶ ಇಲ್ಲ.
ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿʼʼ ಎಂದು ಹೇಳಿದ ಸಿದ್ದರಾಮಯ್ಯ ಅವರು, ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಗಮನ ಹರಿಸುತ್ತಾರೆʼʼ ಎಂದಿದ್ದರು.
ಅಷ್ಟೆಲ್ಲ ಹಣ ಕೊಡಲು ಸಾಧ್ಯವೇ? ರಾಮಲಿಂಗಾ ರೆಡ್ಡಿ ಪ್ರಶ್ನೆ
ಖಾಸಗಿ ವಾಹನ ಮಾಲೀಕರ ಸಂಘಗಳ ಒಕ್ಕೂಟದ ಬಂದ್ ಕರೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಪ್ರತಿಕ್ರಿಯಿಸಿ, ಖಾಸಗಿ ಬಸ್ ಮಾಲೀಕರ ಸಂಘದ ಬೇಡಿಕೆ ಈಡೇರಿಸಬೇಕಾದರೆ ನಮಗೆ 1000 ಕೋಟಿ ರೂ. ಬೇಕು, ಅದೇ ಹೊತ್ತಿಗೆ ಆಟೋ ಚಾಲಕರು ತಿಂಗಳಿಗೆ 10000 ರೂ. ಕೊಡಬೇಕು ಎನ್ನುತ್ತಿದ್ದಾರೆ. ಹಾಗೆ ಕೊಟ್ಟರೆ 4400 ಕೋಟಿ ರೂ. ಬೇಕು. ಇಷ್ಟೆಲ್ಲ ಕೊಡಲು ಸಾಧ್ಯವೇ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಾವು ಅವರ ಹಲವು ಬೇಡಿಕೆಗಳನ್ನು ಈಡೇರಿಸಲು ಸಿದ್ಧರಿದ್ದೇವೆ. ಕೆಲವು ವಿಷಯಗಳು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿವೆ ಎಂದು ಅವರು ಹೇಳಿದ್ದರು.