Site icon Vistara News

Bengaluru Gold Festival: ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ 2ನೇ ಆವೃತ್ತಿಗೆ ಅಧಿಕೃತ ಚಾಲನೆ

Bangalore Gold Festival begins

ಬೆಂಗಳೂರು: ಬೆಂಗಳೂರು ಜ್ಯುವೆಲ್ಲರಿ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ 2ನೇ ಆವೃತ್ತಿಯ ʼಬೆಂಗಳೂರು ಗೋಲ್ಡ್ ಫೆಸ್ಟಿವಲ್ʼಗೆ (Bengaluru Gold Festival) ಜಯನಗರದ ವಿನಾಯಕ ದೇವಾಲಯದ ಮುಂಭಾಗದಲ್ಲಿ ನವರಾತ್ರಿ ಮೊದಲ ದಿನವಾದ ಭಾನುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಎಂಎಲ್‌ಸಿ ಹಾಗೂ ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ ಅಧ್ಯಕ್ಷ ಡಾ. ಟಿ.ಎ. ಶರವಣ ಹಾಗೂ ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ಆಯೋಜಕರು ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 45 ದಿನಗಳ ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಎಂಎಲ್‌ಸಿ ಹಾಗೂ ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ ಅಧ್ಯಕ್ಷ ಡಾ. ಟಿ.ಎ. ಶರವಣ ಅವರು, ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಅದು ಆಪದ್ಧನವಾಗುತ್ತದೆ. ಭಾರತೀಯರ ಪಾಲಿಗೆ ಬಂಗಾರ ಎಂದರೆ ಕೇವಲ ಹಳದಿ ಲೋಹವಲ್ಲ, ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಘನತೆಯ ಪ್ರತೀಕ. ಕಷ್ಟಕಾಲದಲ್ಲಿ ತಕ್ಷಣಕ್ಕೆ ನಗದು ರೂಪದಲ್ಲಿ ಪರಿವರ್ತಿತಗೊಳ್ಳಬಲ್ಲ ಏಕೈಕ ವಸ್ತು ಎಂದು ಹೇಳಿದರು.

ಸಾಮಾನ್ಯವಾಗಿ ದುಬೈನಲ್ಲಿ ನಡೆಯುವ ದುಬೈ ಗೋಲ್ಡ್‌ ಫೆಸ್ಟಿವಲ್‌ ಮಾದರಿಯಲ್ಲಿ ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ನಡೆಸಲಾಗುತ್ತಿದ್ದು ಈ ಬಾರಿ ಎರಡನೇ ಆವೃತ್ತಿಯ ಬಂಗಾರದ ಹಬ್ಬ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ರಾಜ್ಯದ ಹಲವು ಜಿಲ್ಲೆಗಳಿಗೂ ವಿಸ್ತರಿಸಿದೆ. ಈ ಬಾರಿಯ ಬಂಪರ್‌ ಬಹುಮಾನ ಸಹ ಅತ್ಯಂತ ಆಕರ್ಷಕವಾಗಿದೆ, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಸ್ವರ್ಣೋತ್ಸವದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಇದನ್ನೂ ಓದಿ | Navaratri: ಪಶ್ಚಿಮ ಬಂಗಾಳದಲ್ಲಿ ತೆರೆದುಕೊಳ್ಳುವ ನವರಾತ್ರಿ ವೈಭವ

MLC TA Sharavana

ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ಅಧ್ಯಕ್ಷ ಸುರೇಶ್‌ ಗುನ್ನಾ ಅವರು, ಮಾತನಾಡಿ ಕಷ್ಟದ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುವುದು ನೀವು ಹೂಡಿಕೆ ಮಾಡಿರುವ ಬಂಗಾರ ಮಾತ್ರ. ಹೀಗಾಗಿ ಯುವಜನತೆ ತಾವು ದುಡಿದ ಹಣದಲ್ಲಿ ಒಂದು ಭಾಗವಾದರೂ ಬಂಗಾರದ ಮೇಲೆ ಹೂಡಿಕೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದರು.

ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ಚೇರ್ಮಮನ್‌ ರಮೇಶ್‌ ದವನಮ್‌ ಅವರು ಮಾತನಾಡಿ, ಈ 45 ದಿನಗಳ ಬಂಗಾರದ ಹಬ್ಬದಲ್ಲಿ ಗ್ರಾಹಕರು ತರಹೇವಾರಿ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾದ ಅವಕಾಶವಿದೆ ಎಂದರು.

ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ನ ಪ್ರಧಾನ ಕಾರ್ಯದರ್ಶಿ ಬಿಪಿನ್‌ ಮೆಹ್ತಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ವಿವಿಧ ಜನಪದ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ಆಯೋಜಕರು ಜಯನಗರ, ಡಿವಿಜಿ ರಸ್ತೆ, ಕಮರ್ಷಿಯಲ್‌ ರಸ್ತೆ ಮತ್ತು ಡಿಕನ್ಸನ್ ರಸ್ತೆಯ ಒಟ್ಟು 20ಕ್ಕೂ ಹೆಚ್ಚು ಬಂಗಾರದ ಮಳಿಗೆಗಳಿಗೆ ಭೇಟಿ ನೀಡಿ ಗ್ರಾಹಕರಿಗೆ ಮಾಹಿತಿ ನೀಡಿದರು.

MLC TA Sharavana

ಗ್ರಾಹಕರಿಗೆ ಬಂಪರ್ ಬಹುಮಾನ ಗೆಲ್ಲುವ ಸುವರ್ಣ ಅವಕಾಶ

ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ನ 2ನೇ ಅಧಿಕೃತ ಬಂಗಾರದ ಹಬ್ಬದಲ್ಲಿ ಗ್ರಾಹಕರು 5000 ಕೂಪನ್ ಪಡೆದುಕೊಂಡರೆ ಹತ್ತು ಹಲವು ಬಂಪರ್ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶವನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಈ ಬಾರಿಯ ಉತ್ಸವದಲ್ಲಿ ಬರೊಬ್ಬರಿ 1.5 ಕೆಜಿ ಬಂಗಾರ ಹಾಗೂ 40 ಕೆಜಿ ಬೆಳ್ಳಿ ಮತ್ತು ಹುಂಡೈ ಐಟೆನ್ ಕಾರು ಗೆಲ್ಲುವ ಅಪರೂಪದ ಅವಕಾಶವಿದೆ.

MLC TA Sharavana

ಇದನ್ನೂ ಓದಿ | Navaratri: ʼವಿಸ್ತಾರ ನವವರ್ಣʼದ 2ನೇ ದಿನ ಶ್ವೇತ ವಸ್ತ್ರಧಾರಿಗಳಾದ ನೀರೆಯರು

ಪ್ರತಿ ವಾರ ಆಕರ್ಷಕ ಬಂಪರ್ ಬಹುಮಾನಗಳಿರುತ್ತವೆ. ಡಿಸೆಂಬರ್ ಮೊದಲನೇ ವಾರ ಲಕ್ಕಿ ಡ್ರಾ ಮೂಲಕ ಗ್ರಾಹಕರಿಗೆ ವಿಶೇಷ ಬಹುಮಾನಗಳನ್ನು ವಿತರಿಸಿ 45 ದಿನಗಳ ಬಂಗಾರದ ಹಬ್ಬಕ್ಕೆ ಮಂಗಳ ಹಾಡಲಾಗುವುದು. ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ಎರಡನೇ ಆವೃತ್ತಿಯ ಬ್ರ್ಯಾಂಡ್‌ ಅಂಬಾಸಡರ್ ಆಗಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗವಿರುವುದು ವಿಶೇಷ. ಬೆಂಗಳೂರು ಗೋಲ್ಡ್‌ ಫೆಸ್ಟಿವಲ್‌ ಎರಡನೇ ಆವೃತ್ತಿಯ ಉದ್ಘಾಟನೆಯ ಸಂದರ್ಭದಲ್ಲಿ ಎಲ್.ಇ.ಡಿ ವ್ಯಾನ್‌ಗೆ ಚಾಲನೆ ನೀಡಲಾಯಿತು. ಈ ಎಲ್.ಇ.ಡಿ ವಾಹನ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿ, ಗ್ರಾಹಕರಿಗೆ ಮಾಹಿತಿ ನೀಡಲಿದೆ.

Exit mobile version