ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ (Bengaluru Karaga 2024) ಕ್ಷಣಗಣನೆ ಶುರುವಾಗಿದೆ. ಏ.15ರ ಸಪ್ತಮಿ ದಿನದಂದು ರಥೋತ್ಸವದ ಧ್ವಜಾರೋಹಣಕ್ಕೆ ಚಾಲನೆ ನೀಡುವ ಮೂಲಕ ಬೆಂಗಳೂರು ಕರಗ ಉತ್ಸವವು ಆರಂಭಗೊಂಡಿತ್ತು. ಆರತಿ ಉತ್ಸವದ ಬೆನ್ನಲ್ಲೇ ಸೋಮವಾರ ನಸುಕಿನ ಜಾವ ಹಸಿ ಕರಗ ಅದ್ಧೂರಿಯಾಗಿ ನೆರವೇರಿದೆ.
ಆದಿಶಕ್ತಿ ದ್ರೌಪದಿ ದೇವಿಯಿಂದ ಶಕ್ತಿಯ ಅಹವಾನೆ ಮಾಡಿಕೊಳ್ಳುವ ಹಸಿ ಕರಗಕ್ಕೆ ಕಬ್ಬನ್‌ಪಾರ್ಕ್ ಒಳಗಿರುವ ಸಂಪಂಗಿ ಕೆರೆಯ ಕರಗದ ಕುಂಟೆಯ ಶಕ್ತಿ ಪೀಠದಲ್ಲಿ ಕರಗದ ಪೂಜಾರಿ ಪೂಜೆ ಸಲ್ಲಿಸಿದರು. ನಂತರ ಬಿಬಿಎಂಪಿಯ ಏಳು ಸುತ್ತಿನ ಕೋಟೆಗೆ ಪೂಜೆ ಮಾಡಿ ಧರ್ಮರಾಯ ದೇವಸ್ಥಾನದ ಎದುರು ಕರ್ಪೂರ ಸೇವೆ ನೆರವೇರಿಸಲಾಯಿತು.
ಹಸಿ ಕರಗ ವೀಕ್ಷಣೆಗೆ ಸಾವಿರಾರು ಮಂದಿ ಸಾಕ್ಷಿಯಾದರು. ಗೋವಿಂದನ ನಾಮಸ್ಮರಣೆಯೊಂದಿಗೆ ಖಡ್ಗದಿಂದ ಎದೆಗೆ ಹೊಡೆದುಕೊಂಡು ವೀರಕುಮಾರರು ಅಲಗಿನ ಸೇವೆಯಲ್ಲಿ ಪಾಲ್ಗೊಂಡರು. ಕಳೆದ 7 ದಿನದಿಂದ ವಿಧಿವಿಧಾನಗಳನ್ನು ಆಚರಿಸಿಕೊಂಡು ಬಂದಿದ್ದು, ಸೋಮವಾರ ರಾತ್ರಿ 12 ಗಂಟೆಗೆ ಪೊಂಗಲು ಸೇವೆ ನೆರವೇರಲಿದೆ.
ಏ.23ರ ಚೈತ್ರ ಹುಣ್ಣಿಮೆಯ ದಿನದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗ ಹೊರುವ ಪೂಜಾರಿ ಜ್ಞಾನೇಂದ್ರ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಧ್ಯರಾತ್ರಿ 12: 30ಕ್ಕೆ ದೇವಸ್ಥಾನದ ಹೊರಗೆ ಬರುವ ಕರಗವೂ ನಗರದ ರಾಜಬೀದಿಗಳಲ್ಲಿ ಸಂಚರಿಸಲಿದೆ.
ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ವೈಭವ
ಸಂಪ್ರದಾಯದಂತೆ ಬೆಂಗಳೂರು ಕರಗವು ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಿ ಬರಲಿದ್ದು, ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ. ಮುಸ್ಲಿಂ ಭಾಂದವರು ಸಹ ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನು ಫಾತಿಯಾ ಎಂದು ಕರೆಯಲಾಗುತ್ತದೆ. ಕರಗದ ಮೆರವಣಿಗೆ ಗಣಪತಿ ದೇವಸ್ಥಾನದಲ್ಲಿ ಮೊದಲ ಪೂಜೆ, ಗ್ರಾಮ ದೇವತೆ ಮುತ್ಯಾಲಮ್ಮನಿಗೆ ಎರಡನೇ ನಮಸ್ಕಾರ ಸಲ್ಲಿಸಿ ಇಲ್ಲಿಂದ ರಾಜಬೀದಿಗಳಲ್ಲಿ ಸಂಚಾರಿಸಿ, ನಂತರ ನಗರ ದೇವತೆ ಅಣ್ಣಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರಲಿದೆ.
13ನೇ ಬಾರಿ ಕರಗ ಹೊರುತ್ತಿರುವ ಜ್ಞಾನೇಂದ್ರ
ಏಪ್ರಿಲ್ 15ರಿಂದ ಕರಗ ಮಹೋತ್ಸವ ಶುರುವಾಗಿದ್ದು, ಏ. 23 ರಂದು ಕೊನೆಗೊಳ್ಳಲಿದೆ. ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ 13ನೇ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇನ್ನೂ ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಕರಗದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು. ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಕರಗದ ಪೂಜಾರಿ ಜ್ಞಾನೇಂದ್ರ ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿದರು. ಹಿಂದಿನ ಘಟನೆಯನ್ನು ಮರುಕಳಿಸಬಾರೆಂದು ಈ ಬಾರಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.
ಕರಗ ಮಹೋತ್ಸವ ಹಿನ್ನೆಲೆ ಮದ್ಯ ಮಾರಾಟ ನಿಷೇಧ
ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru Karaga 2024) ಹಿನ್ನೆಲೆಯಲ್ಲಿ ಏ.23ರಂದು ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುವ ಸಂಭವವಿದೆ.
ಹೀಗಾಗಿ ಮುನ್ನೆಚ್ಚರಿಕೆ ಸಲುವಾಗಿ ಏ.23ರ ಬೆಳಗ್ಗೆ 6ಗಂಟೆಯಿಂದ ಮರುದಿನ 24ರ ಬೆಳಗ್ಗೆ 10ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಾಲ್ಕು ಠಾಣಾ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್, ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ