ಬೆಂಗಳೂರು: ಲಿಂಕ್ಡ್‌ಇನ್ ಬಳಕೆದಾರ ಹರ್ಷಮೀತ್ ಸಿಂಗ್ ಪೋಸ್ಟ್ ಮಾಡಿರುವ ಬೆಂಗಳೂರಿನ ಫ್ಲೈ ಓವರ್‌ನ ಒಂದು ಚಿತ್ರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಸ್ಕೂಟರ್‌ನಲ್ಲಿ ಸಾಗುವಾಗ ಪಿಲಿಯನ್ ರೈಡರ್ ಒಬ್ಬರು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದು ಕಾಣುತ್ತದೆ. ಇದು ಐಟಿ ಸಿಟಿ ಬೆಂಗಳೂರಿನಲ್ಲಿ ಉದ್ಯೋಗಿಗಳು ಎದುರಿಸುತ್ತಿರುವ ವೃತ್ತಿ ಬದುಕಿನ ಒತ್ತಡಕ್ಕೆ ಕನ್ನಡಿ ಹಿಡಿದಂತಿದೆ. ಅದರ ಜತೆಗೆ ಜನರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರಾ ಎಂಬ ಆತಂಕವೂ. ಈ ಚಿತ್ರದ ಮೂಲಕ ಕಂಪನಿಗಳು ಹೇರುವ ಒತ್ತಡದ ಹಲವು ಮುಖಗಳನ್ನೂ ತೆರೆದಿಟ್ಟಿದ್ದಾರೆ ಹರ್ಷಮೀತ್ ಸಿಂಗ್.
ಈ ಚಿತ್ರವನ್ನೊಮ್ಮೆ ಸರಿಯಾಗಿ ನೋಡಿ ಮತ್ತು ಹರ್ಷಮೀತ್ ಸಿಂಗ್ ಎತ್ತಿರುವ ಪ್ರಶ್ನೆಗಳನ್ನೊಮ್ಮೆ ಗಮನವಿಟ್ಟು ಓದಿ..
ಬೆಂಗಳೂರು ಒಳ್ಳೆಯದಾ? ಅಥವಾ ಕೆಟ್ಟದ್ದಾ?
ಸಮಯ ರಾತ್ರಿ 11 ಗಂಟೆ. ಸ್ಥಳ: ಬೆಂಗಳೂರಿನ ಅತ್ಯಂತ ಜನನಿಬಿಢ ಫ್ಲೈಓವರ್‌ಗಳ ಪೈಕಿ ಒಂದು. ಇಲ್ಲೊಂದು ಸ್ಕೂಟರ್ ಓಡುತ್ತಿದೆ. ಅದರಲ್ಲಿ ಕುಳಿತ ಪಿಲಿಯನ್ ರೈಡರ್ ತನ್ನ ಲ್ಯಾಪ್‌ಟಾಪ್‌ನ್ನು ತೆರೆದು ಕೆಲಸ ಮಾಡುತ್ತಿದ್ದಾನೆ. ನೀವು ಒಬ್ಸ್ಬ ಬಾಸ್ ಆಗಿದ್ದರೆ, ನಿನ್ನ ಜೀವವನ್ನು ಒತ್ತೆ ಇಟ್ಟಾದರೂ ಸರಿ ಡೆಡ್‌ಲೈನ್‌ನ ಒಳಗೆ ಕೆಲಸ ಮುಗಿಸಲೇಬೇಕು ಎಂದು ಸಹೋದ್ಯೋಗಿಗಳನ್ನು ಭಯಭೀತಗೊಳಿಸುವ ವ್ಯಕ್ತಿ ನೀವಾಗಿದ್ದರೆ, ಈ ಚಿತ್ರವನ್ನು ಇನ್ನೊಮ್ಮೆ ನೋಡಿ.. ನೀವು ಮತ್ತೊಮ್ಮೆ ಯೋಚನೆ ಮಾಡೋ ಸಮಯ ಬಂದಿದೆ” ಎಂದು ಹರ್ಷಮೀತ್ ಸಿಂಗ್ ಬರೆದಿದ್ದಾರೆ.
ಅದಕ್ಕಿಂತಲೂ ಮುಖ್ಯವಾಗಿ ಹರ್ಷಮೀತ್ ಬರೆದಿರುವ ಇನ್ನೊಂದು ಪದ ಹೆಚ್ಚು ಕಾಡುತ್ತದೆ. ʻʻಅದರಲ್ಲೂ ಮುಖ್ಯವಾಗಿ ‘IT’S URGENT’ ಮತ್ತು ‘DO IT ASAP’ ಎಂಬ ಪದಗಳನ್ನು ಬಳಸುವ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ನೀವೊಬ್ಬ ಅಧಿಕಾರಯುತ ಸ್ಥಾನದಲ್ಲಿರುವವರಾಗಿದ್ದರೆ ನೀವು ತುಂಬ ಜಾಗೃತೆ ವಹಿಸಬೇಕು. ಯಾಕೆಂದರೆ, ನಿಮ್ಮ ಪದಗಳು ನಿಮ್ಮ ಕೆಳಗಿನ ಉದ್ಯೋಗಿಗಳ ಮೇಲೆ ಅದೆಂಥ ಪರಿಣಾಮ ಬೀರುತ್ತದೆ ಎಂದು ಎನ್ನುವ ಕಲ್ಪನೆಯೂ ನಿಮಗಿರುವುದಿಲ್ಲʼʼ ಎಂದಿದ್ದಾರೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ಚಿತ್ರ ಎಲ್ಲರ ಗಮನ ಸೆಳೆದಿದೆ ಎನ್ನುವುದು ನಿಜವಾದರೂ ಎಲ್ಲರ ಅಭಿಪ್ರಾಯಗಳು ಒಂದೇ ರೀತಿ ಇಲ್ಲ.
ರೋಹನ್ ಶರ್ಮಾ ಎನ್ನುವ ಬಳಕೆದಾರ ಹೀಗೆ ಬರೆದಿದ್ದಾರೆ, “ಅವರು ಪಿಲಿಯನ್ ರೈಡರ್ ಆಗಿ ಪ್ರಯಾಣಿಸುವಾಗ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಾವು ಒಪ್ಪಿಕೊಳ್ಳೋಣ. ಇನ್ನೂ ಮುಖ್ಯವಾದ ಪ್ರಶ್ನೆಯೆಂದರೆ, ಇದು ಆತ ಫೇಕ್ ಡೆಡ್‌ಲೈನ್ ಮೀಟ್ ಮಾಡಲು ನಡೆಸುತ್ತಿರುವ ಪ್ರಯತ್ನವಾ ಅಥವಾ ತನ್ನದೇ ಒಂದು ಸ್ಟಾರ್ಟಪ್‌ಗಾಗಿ ಕೆಲಸ ಮಾಡುತ್ತಿದ್ದಾನಾ ಎನ್ನುವುದು. ದಯವಿಟ್ಟು ಪ್ರತಿಯೊಂದು ಸಂಸ್ಥೆಯೂ ನಕಲಿ ಗಡುವನ್ನು ನೀಡುತ್ತಿದೆ, ತನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಉದ್ಯೋಗಿಗಳ ಜೀವನವನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದು ಆರೋಪ ಮಾಡುವುದನ್ನು ನಿಲ್ಲಿಸಿ. ಆ ಉದ್ಯೋಗಿಯೇ ತನ್ನ ಕೆಲಸವನ್ನು ಸ್ವಲ್ಪ ಬೇಗನೆ ಮುಗಿಸಲು, ಬೇಗ ಮುಗಿಸಿದರೆ ತನ್ನ ಸ್ನೇಹಿತರೊಂದಿಗೆ ಪಾರ್ಟಿಯನ್ನು ಆನಂದಿಸಲು, ಕುಟುಂಬ ಅಥವಾ ಸ್ನೇಹಿತರೊಂದಿಗೆ ಸ್ಥಳಗಳಿಗೆ ಪ್ರಯಾಣಿಸಲು ಅವನು ತನ್ನ ಕೆಲಸ ಮಾಡುತ್ತಿರಬೇಕು ಅಥವಾ ಬೇಗ ಹೋಗಿ ನಿದ್ದೆ ಮಾಡೋಣ ಎನ್ನುವ ಆಸೆಯಲ್ಲೂ ಮಾಡುತ್ತಿರಬಹುದು ಎಂದಿದ್ದಾರೆ.
ಮತ್ತೊಬ್ಬ ಲಿಂಕ್ಡ್‌ಇನ್ ಬಳಕೆದಾರರಾದ ಮನೋಜ್ ಗುಪ್ತಾ ಬರೆಯುತ್ತಾರೆ, “ಕಣ್ಣುಗುಡ್ಡೆಗಳನ್ನು ಹಿಡಿಯಲು ಮತ್ತು ಅತ್ಯಂತ ಸಂವೇದನಾಶೀಲವಲ್ಲದ ವಿಷಯದ ಮೇಲೆ ಅನಗತ್ಯ ಚರ್ಚೆಯನ್ನು ಪ್ರಚೋದಿಸಲು ಲಕ್ಷಾಂತರ ಪೋಸ್ಟ್‌ಗಳಲ್ಲಿ ಇದು ಮತ್ತೊಂದು ಪೋಸ್ಟ್ !!ಎಂದಿದ್ದಾರೆ
ಇದನ್ನೂ ಓದಿ: ಫೇಸ್‌ಬುಕ್ Vs ಫೆಸ್‌ಬೇಕ್: ಜಾಲತಾಣದ ಹೆಸರು ಬಳಸಿದ್ದಕ್ಕೆ ಬೆಂಗಳೂರು ಮೂಲದ ಬೇಕರಿಗೆ ದಂಡ